ಇಂದು ಬೆಂಗಳೂರು ಎಫ್ ಸಿ ತಂಡಕ್ಕೆ ಒಡಿಶಾ ಎಫ್ ಸಿ ಸವಾಲು

BFC AND OFC FOR WEB
Published on

ಮಾರ್ಗೋವಾ: ಸತತ 6 ಪಂದ್ಯಗಳಿಂದ ಗೆಲುವಿಗಾಗಿ ಪರಿತಪಿಸುತ್ತಿರುವ ಮಾಜಿ ಚಾಂಪಿಯನ್ ಬೆಂಗಳೂರು ಎಫ್ ಸಿ ತಂಡ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯ ತನ್ನ 13ನೇ ಪಂದ್ಯದಲ್ಲಿ, ಇದುವರೆಗೆ ಏಕೈಕ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಕಡೇ ಸ್ಥಾನದಲ್ಲಿರುವ ಒಡಿಶಾ ಎಫ್ ಸಿ ತಂಡವನ್ನು ಎದುರಿಸಲಿದೆ. ಜಿಎಂಸಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಪಂದ್ಯ ಸುನೀಲ್ ಛೇಟ್ರಿ ಪಡೆ ಪಾಲಿಗೆ ಮಾಡು ಇಲ್ಲವೆ ಮಡಿಯಾಗಿದೆ. ಬಿಎಫ್ ಸಿ ತಂಡ ಕಡೇ 6 ಪಂದ್ಯಗಳಲ್ಲಿ 5 ಸೋಲು, ಒಂದು ಡ್ರಾ ಸಾಧಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

ಮುಖ್ಯಕೋಚ್ ಚಾರ್ಲ್ಸ್ ಕೌಡ್ರಾಟ್ ಟೂರ್ನಿ ಮಧ್ಯದಲ್ಲಿಯೇ ನಿರ್ಗಮಿಸಿದರೂ ಹಂಗಾಮಿ ಕೋಚ್ ನೌಶಾದ್ ಮೂಸಾ ಗರಡಿಯಲ್ಲೂ ಬಿಎಫ್ ಸಿ ಇದುವರೆಗೆ ಗೆಲುವು ದಾಖಲಿಸಲು ವಿಫಲವಾಗಿದೆ. ‘ನಾವು ಒಂದು ಗೆಲುವಿಗಾಗಿ ಕಾಯುತ್ತಿದ್ದೇವೆ. ಮೂರು ಅಂಕ ಪಡೆದರೆ ಅಂಕಪಟ್ಟಿಯಲ್ಲಿ ಮೇಲೇರುವ ಅವಕಾಶ ಹೆಚ್ಚಿದೆ. ಗೆಲುವೇ ನಮಗೆ ಇದುವರೆಗೂ ಮರೀಚಿಕೆಯಾಗಿದೆ. ಒಂದು ಗೆಲುವು ತಂಡದಲ್ಲಿ ಸಾಕಷ್ಟು ಬದಲಾವಣೆ ತಂದುಕೊಡುತ್ತದೆ’ ಎಂದು ಹೇಳುತ್ತಾರೆ ಬಿಎಫ್ ಸಿ ಹಂಗಾಮಿ ಕೋಚ್ ನೌಶಾದ್ ಮೂಶಾ. ಬಿಎಫ್ ಸಿ ಸದ್ಯ 7ನೇ ಸ್ಥಾನದಲ್ಲಿದ್ದು, ನಾಕೌಟ್ ಹಂತಕ್ಕೇರುವ ಅವಕಾಶವನ್ನು ಮುಕ್ತವಾಗಿರಿಸಿಕೊಂಡಿದೆ. ಸದ್ಯ ಬಿಎಫ್ ಸಿ ಕೂಡ ಉತ್ತಮ ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿದ್ದು, ಗೆಲುವಿಗಾಗಿ ಹಂಬಲಿಸುತ್ತಿದೆ.

ಕೇರಳ ವಿರುದ್ಧದ ಕಡೇ ಪಂದ್ಯದಲ್ಲಿ ಇಂಜುರಿ ಸಮಯದಲ್ಲಿ ಗೆಲುವು ಬಿಟ್ಟುಕೊಟ್ಟ ಬಿಎಫ್ ಸಿ ಅಂತಿಮ ಕ್ಷಣಗಳಲ್ಲಿ ಒತ್ತಡರಹಿತವಾಗಿ ಆಡಬೇಕಿದೆ. ಮತ್ತೊಂದೆಡೆ, ಇದುವರೆಗೆ ಆಡಿರುವ 12 ಪಂದ್ಯಗಳಲ್ಲಿ ಏಕೈಕ ಗೆಲುವು ಸಾಧಿಸಿ 7 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕಡೇ ಸ್ಥಾನದಲ್ಲಿರುವ ಒಡಿಶಾ ಪುಟಿದೇಳುವ ವಿಶ್ವಾಸದಲ್ಲಿದೆ. ಗೆದ್ದರೂ ಸೆಮಿಫೈನಲ್ ಹಂತಕ್ಕೇರುವ ಅವಕಾಶವಿಲ್ಲದಿದ್ದರೂ, ಕಡೇ ಪಂದ್ಯಗಳಲ್ಲಿ ಗೆಲುವಿನೊಂದಿಗೆ ಲೀಗ್‌ಗೆ ವಿದಾಯ ಹೇಳುವ ಗುರಿಯಲ್ಲಿದೆ.

ಪಂದ್ಯ ಆರಂಭ: ರಾತ್ರಿ 7.30, ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net