

ಫರ್ಟೋಡ: ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಬೆಂಗಳೂರು ಎಫ್ ಸಿ ತಂಡ ಲೀಗ್ನಲ್ಲಿ ಸತತ 4ನೇ ಸೋಲನುಭವಿಸಿದೆ. ಫರ್ಟೋಡ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಬಿಎಫ್ ಸಿ 1-0 ಗೋಲಿನಿಂದ ಈಸ್ಟ್ ಬೆಂಗಾಲ್ ತಂಡಕ್ಕೆ ಶರಣಾಯಿತು. ಹ್ಯಾಟ್ರಿಕ್ ಸೋಲಿನಿಂದಾಗಿ ಮುಖ್ಯಕೋಚ್ ಕಾರ್ಲೆಸ್ ಕ್ರೌರ್ಡಟ್ ತಲೆತಂಡವಾದ ಬಳಿಕ ಆಡಿದ ಮೊದಲ ಸವಾಲಿನಲ್ಲೂ ಬಿಎಫ್ ಸಿ ಮುಗ್ಗರಿಸಿತು.
ಹಂಗಾಮಿ ಕೋಚ್ ನೌಶಾದ್ ಮೂಸಾ ಮಾರ್ಗದರ್ಶನದಲ್ಲಿ ಗೆಲುವಿನ ಹಳಿಗೇರಲು ವಿಫಲವಾದ ಬಿಎಫ್ ಸಿ, ಅಸ್ಥಿರ ನಿರ್ವಹಣೆ ಮೂಲಕ ಮತ್ತೊಮ್ಮೆ ನಿರಾಸೆ ಅನುಭವಿಸಿತು. ಪಂದ್ಯದ 20ನೇ ನಿಮಿಷದಲ್ಲೇ ಎದುರಾಳಿ ತಂಡಕ್ಕೆ ಗೋಲು ಬಿಟ್ಟುಕೊಟ್ಟ ಬಿಎಫ್ ಸಿ, ದ್ವಿತೀಯಾರ್ಧದಲ್ಲಿ ಕನಿಷ್ಠ ಸಮಬಲ ಸಾಧಿಸಲು ವಿಫಲವಾಯಿತು. ಲೀಗ್ನಲ್ಲಿ ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ ತಲಾ 3 ಗೆಲುವು, ಡ್ರಾ ಸಾಧಿಸಿತ್ತು. ಆರಂಭಿಕ 6 ಪಂದ್ಯಗಳಲ್ಲಿ ಅಜೇಯ ಸಾಧನೆ ಮಾಡಿದ್ದ ಸುನೀಲ್ ಛೇಟ್ರಿ ಪಡೆ ಕಡೇ ನಾಲ್ಕು ಪಂದ್ಯಗಳಲ್ಲಿ ನಿರಾಸೆ ಅನುಭವಿಸಿತು. 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲೇ ಉಳಿದ ಬಿಎಫ್ ಸಿ ತಂಡ ಮುಂದಿನ ಹಾದಿ ತೂಗುಯ್ಯಲೆಯಲ್ಲಿದೆ.
ಬಿಎಫ್ ಸಿಗೆ ಮುಂದಿನ ಎದುರಾಳಿ: ನಾರ್ಥ್ಈಸ್ಟ್ ಯುನೈಟೆಡ್, ಯಾವಾಗ: ಜನವರಿ 12.