ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿ ಎಂದ ಫ್ಯಾನ್ಸ್..?

bharat arun and ravi shastri
Published on

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸ ದಿನ ಕಳೆದಂತೆ ಭಾರತ ತಂಡದ ಗಾಯಾಳು ಪಟ್ಟಿಯೂ ಬೆಳೆಯುತ್ತಿದೆ. ಕರೊನಾ ಕಾಲದಲ್ಲಿ ನಡೆಯುತ್ತಿರುವ ಸುದೀರ್ಘ ಪ್ರವಾಸದುದ್ದಕ್ಕೂ ಭಾರತಕ್ಕೆ ಗಾಯದ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಸರಣಿ ಆರಂಭದಲ್ಲೇ ಇಶಾಂತ್ ಶರ್ಮ ಹೊರಬಿದ್ದರೆ, ಟೆಸ್ಟ್ ಸರಣಿ ಆರಂಭಗೊಂಡ ಬಳಿಕ ಮೊಹಮದ್ ಶಮಿ, ಉಮೇಶ್ ಯಾದವ್, ಕನ್ನಡಿಗ ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದ ಹೊರಬಿದ್ದಿದ್ದಾರೆ. ಇದೀಗ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ರಿಷಭ್ ಪಂತ್ ಗಾಯಕ್ಕೆ ತುತ್ತಾಗಿದ್ದಾರೆ. ತಂಡದ ಆಟಗಾರರು ಹೀಗೆ ಗಾಯಗೊಳ್ಳುತ್ತಿದ್ದರೆ ಮುಖ್ಯಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಕಣಕ್ಕಿಳಿಯಬೇಕಾಗುತ್ತದೆ ಎಂದು ಅಭಿಮಾನಿಗಳು ಟ್ವೀಟ್ ಮೂಲಕ ಟೀಮ್ ಇಂಡಿಯಾ ಸಿಬ್ಬಂದಿಯ ಕಾಲೆಳೆದಿದ್ದಾರೆ.

ಮಿಚೆಲ್ ಸ್ಟಾರ್ಕ್ ಬೌನ್ಸಿಂಗ್ ಎಸೆತವನ್ನು ಎದುರಿಸಲು ಹೋಗಿ ರವೀಂದ್ರ ಜಡೇಜಾ ಎಡಗೈಗೆ ಗಾಯ ಮಾಡಿಕೊಂಡರೆ, ಪ್ಯಾಟ್ ಕಮ್ಮಿನ್ಸ್ ಎಸೆತದಲ್ಲಿ ರಿಷಭ್ ಪಂತ್ ಮೊಣಕೈಗೆ ಪೆಟ್ಟುಮಾಡಿಕೊಂಡರು. ಬಳಿಕ ಇಬ್ಬರನ್ನು ಸ್ಕಾೃನಿಂಗ್‌ಗೆ ಕಳುಹಿಸಲಾಯಿತು. ಬಳಿಕ ಪಂತ್ ಬದಲಿಗೆ ವೃದ್ಧಿಮಾನ್ ಸಾಹ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಿದರು. ಹೀಗೆ ಆಟಗಾರರು ಗಾಯಕ್ಕೆ ತುತ್ತಾಗುತ್ತಿದ್ದರೆ ರವಿಶಾಸ್ತ್ರಿ, ಭರತ್ ಅರುಣ್ ಹಾಗೂ ವಿಕ್ರಮ್ ರಾಥೋಡ್ ಕಣಕ್ಕಿಳಿಯುವುದೇ ಒಳ್ಳೆಯದು ಎಂದು ಟ್ರೋಲ್ ಮಾಡಿದ್ದಾರೆ.

ಜಡೇಜಾ ಮೂರನೇ ದಿನದಾಟದಲ್ಲಿ ಕಣಕ್ಕಿಳಿದರೂ ಬೌಲಿಂಗ್ ಮಾಡಲಿಲ್ಲ. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 338 ರನ್‌ಗಳಿಸಿದರೆ, ಭಾರತ 244 ರನ್‌ಗಳಿಗೆ ಸರ್ವಪತನ ಕಂಡು 94 ರನ್ ಹಿನ್ನಡೆ ಕಂಡಿತು. 3ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ಗೆ 103 ಕಲೆಹಾಕಿದ್ದು, ಒಟ್ಟು 197 ರನ್ ಮುನ್ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net