

ಕೊಚ್ಚಿ: 2023ರ ಐಪಿಎಲ್ ಋತುವಿಗಾಗಿ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಸ್ಟಾರ್ ಆಲ್ರೌಂಡರ್ ಬೆನ್ಸ್ಟೋಕ್ಸ್ ಭಾರೀ ಮೊತ್ತಕ್ಕೆ ಹರಾಜಾಗಿ ಹೋಗಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ನಿರೀಕ್ಷೆಯಂತೆಯೇ ಮೊದಲ ದಿನವೇ ಬೆನ್ ಸ್ಟೋಕ್ಸ್ 16.25 ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ.
ಬೆನ್ಸ್ಟೋಕ್ಸ್ 2 ಕೋಟಿ ರೂ. ಮೂಲ ಬೆಲೆ ಹೊಂದಿದ್ದರು. ಸ್ಟಾರ್ ಆಲ್ರೌಂಡರನ್ನು ಖರೀದಿಸಿಲು ಆರ್ಸಿಬಿ ತಂಡ ಕೂಡಾ ಉತ್ಸಾಹ ತೋರಿತ್ತು. ಕೊನೆಗೆ ಬಿಡ್ ಮೊತ್ತ 7 ಕೋಟಿ ರೂ. ದಾಡುತ್ತಿದ್ದಂತೆ ಹೈದರಾಬಾದ್- ಲಕ್ನೋ ನಡುವೆ ಸ್ಟೋಕ್ಸ್ ಖರೀದಿಸಲು ಪೈಪೋಟಿ ಏರ್ಪಟ್ಟಿತು. 13 ಕೋಟಿ ಬಿಡ್ ದಾಟುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 16.25 ಕೋಟಿ. ರೂ ಬಿಡ್ನೊಂದಗೆ ಆಲ್ರೌಂಡರ್ ಬೆನ್ಸ್ಟೋಕ್ಸ್ನ್ನು ತನ್ನ ಪಾಲಾಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
2018ರಲ್ಲಿ ರಾಜಸ್ಥಾನ್ ರಾಯಲ್ಸ್ನಿಂದ ಐಪಿಎಲ್ ಹರಾಜಿನಲ್ಲಿ ಬೆನ್ಸ್ಟೋಕ್ಸ್ ಕೊನೆಯದಾಗಿ 12.5 ಕೋಟಿ ರೂ.ಗೆ ಮಾರಾಟವಾಗಿದ್ದರು. ಟಿ-20 ಕ್ರಿಕೆಟ್ಗೆ ಹೇಳಿ ಮಾಡಿಸಿದಂತಹ ಆಟಗಾರ ಬೆನ್ಸ್ಟೋಕ್ಸ್. ಇತ್ತೀಚೆಗೆ ಮುಕ್ತಾಯವಾದ ಟಿ-20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡ ಚಾಂಪಿಯನ್ ಆಗುವಲ್ಲಿ ಆಲ್ರೌಂಡರ್ ಬೆನ್ಸ್ಟೋಕ್ಸ್ ಪ್ರಮುಖ ಕಾರಣವಾಗಿದ್ದರು. ಹೀಗಾಗಿ ಈ ಬಾರಿಯ ಹರಾಜಿನಲ್ಲಿ ಬೆನ್ಸ್ಟೋಕ್ಸ್ ಖರೀದಿಸಲು ಬಹುತೇಕ ಪ್ರಾಂಚೈಸಿಗಳು ಮೊದಲೇ ಯೋಜನೆ ಹಾಕಿಕೊಂಡಿದ್ದವು. ಇದೀಗ ಬರೋಬ್ಬರಿ 16.5 ಕೋಟಿ. ರೂ. ಸ್ಟೋಕ್ಸ್ ಧೋನಿ ತಂಡದ ಭಾಗವಾಗಿದ್ದಾರೆ.