

Ahmad Shahzad: ಕ್ರಿಕೆಟ್ ವೃತ್ತಿಜೀವನದಲ್ಲಿ ನನ್ನ ಸೌಂದರ್ಯ, ಸುಂದರ ಮುಖ ಲಕ್ಷಣವೇ ಬಹಳಷ್ಟು ಸಮಸ್ಯೆಗಳನ್ನು ತಂದೊಡ್ಡಿದ್ದು ಇಂದಿಗೂ ಮರೆಯಲಾಗದು. ನೋಡಲು ಚೆಂದವಾಗಿ ಇದ್ದದ್ದೇ ನನಗೆ ತಪ್ಪು ಎನಿಸುವಷ್ಟು ಕಹಿ ಘಟನೆಗಳು ನನ್ನ ಜೀವನದಲ್ಲಿ ನಡೆದಿವೆ ಎಂದು ಪಾಕಿಸ್ತಾನಿ ಕ್ರಿಕೆಟಿಗ ಅಹ್ಮದ್ ಶಹಜಾದ್ ಭಾವುಕರಾಗಿ ಮಾತನಾಡಿದ್ದಾರೆ.
2009ರಲ್ಲಿ ಟಿ20 ವಿಶ್ವಕಪ್ ಪ್ರಶಸ್ತಿ ಮತ್ತು 2017ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ಪಾಕಿಸ್ತಾನ ತಂಡದಲ್ಲಿದ್ದ ಶಹಜಾದ್, ಕೊನೆಯ ಬಾರಿಗೆ 2019ರ ಅಕ್ಟೋಬರ್‌ನಲ್ಲಿ ಮೆನ್ ಇನ್ ಗ್ರೀನ್ ಪರ ಮೈದಾನಕ್ಕಿಳಿದರು. ಅದಾದ ನಂತರ ಯಾವ ಟೂರ್ನಿ, ಲೀಗ್ನಲ್ಲಿಯೂ ಅವರು ತಂಡದ ಪರ ಆಡಿಲ್ಲ. ಕೇವಲ 33 ವರ್ಷ ವಯಸ್ಸಿನವರಾಗಿದ್ದರೂ, ಕಳೆದ ಆರು ವರ್ಷಗಳಿಂದ ಶಹಜಾದ್ ಪಾಕಿಸ್ತಾನ ಪರ ಕಣಕ್ಕಿಳಿದಿಲ್ಲ. ಮುಂದಿನ ದಿನಗಳಲ್ಲಿಯೂ ಆಡುವ ಸಾಧ್ಯತೆಯಿಲ್ಲ ಎಂಬುದನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.
ಪಾಕಿಸ್ತಾನ ಪರ 150 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 5000ಕ್ಕೂ ಹೆಚ್ಚು ರನ್ ಗಳಿಸಿರುವ ಬಲಗೈ ಬ್ಯಾಟ್ಸ್‌ಮನ್ ಶಹಜಾದ್, ಇತ್ತೀಚೆಗೆ ಪಾಡ್‌ಕ್ಯಾಸ್ಟ್ ಸಂದರ್ಶನವೊಂದರಲ್ಲಿ ಭಾಗಿಯಾಗಿ ಹಲವು ವಿಷಯಗಳನ್ನು ಹಂಚಿಕೊಂಡರು. "ನಾನು ನೋಡಲು ಹ್ಯಾಂಡ್ಸಮ್ ಆಗಿದ್ದೇನೆ ಎಂಬ ಒಂದೇ ಒಂದು ವಿಷಯಕ್ಕೆ ಇಂದು ನನ್ನನ್ನು ಹಲವರು ಗುರಿಯಾಗಿಸಿಕೊಂಡಿದ್ದಾರೆ. ಪಾಕಿಸ್ತಾನ ಕ್ರಿಕೆಟ್‌ನಲ್ಲಿ, ಒಬ್ಬ ಆಟಗಾರ ನೋಡಲು ಸುಂದರವಾಗಿದ್ದಾನೆ, ಉತ್ತಮ ಡ್ರೆಸ್ಸಿಂಗ್ ಸೆನ್ಸ್ ಹೊಂದಿದ್ದಾನೆ ಎಂದರೆ ಆತ ಹಿರಿಯ ಕ್ರಿಕೆಟಿಗರ ಕಣ್ಣಿಗೆ ಸುಲಭವಾಗಿ ಗುರಿಯಾಗುತ್ತಾನೆ" ಎಂದಿದ್ದಾರೆ.
"ಸುಂದರವಾಗಿರುವುದೇ ಇಂದು ನನಗೆ ಬಹಳಷ್ಟು ಸಮಸ್ಯೆಗಳನ್ನು ತಂದೊಡ್ಡಿದೆ. ನಮ್ಮ ಕ್ರಿಕೆಟ್ ಕ್ಷೇತ್ರದಲ್ಲಿ, ನೀವು ಚೆನ್ನಾಗಿ ಕಾಣುತ್ತಿದ್ದರೆ, ಉಡುಗೆ ತೊಡುವುದು ಹೇಗೆಂದು ತಿಳಿದಿದ್ದರೆ ಮತ್ತು ಚೆನ್ನಾಗಿ ಮಾತನಾಡಿದರೆ, ಕೆಲವರು ನಿಮ್ಮನ್ನು ಕುಗ್ಗಿಸಲು, ಟೀಕಿಸಲು ಶುರು ಮಾಡುತ್ತಾರೆ. ಇದಕ್ಕೆ ನಾನೀಗ ಗುರಿಯಾಗಿದ್ದೇನೆ. ಇಲ್ಲಿ ನನ್ನನ್ನು ನಾನು ಸಮರ್ಥಿಸಿಕೊಳ್ಳಲು ಆಗ್ತಿಲ್ಲ. ನಿಮ್ಮ ಅಭಿಮಾನಿಗಳ ಸಂಖ್ಯೆ ಹೆಚ್ಚಾದರೆ, ಜನರು ನಿಮ್ಮನ್ನು ಮೆಚ್ಚಿದರೆ ಸಾಕು ಕೆಲವು ಹಿರಿಯ ಆಟಗಾರರು ಅದನ್ನು ಸಹಿಸಿಕೊಳ್ಳುವುದಿಲ್ಲ. ಸದ್ಯ ನಾನು ಇದನ್ನೇ ಅನುಭವಿಸುತ್ತಿದ್ದೀನಿ ಎಂದು ಶಹಜಾದ್ ತಮ್ಮ ಪರಿಸ್ಥಿತಿ ನೆನೆದು ಬೇಸರ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).