ನಯನಾದ್ಭುತ ವಿಶಚರಿತ

GR Vishwanath
Published on

ಕ್ರಿಕೆಟ್ ಮೈದಾನದಲ್ಲಿ ಭಾರತವನ್ನು ಪ್ರತಿನಿಧಿಸಿದ ಸರ್ವಶ್ರೇಷ್ಠ ಹಾಗೂ ಸಜ್ಜನ ಆಟಗಾರರಲ್ಲೊಬ್ಬರಾದ ಕನ್ನಡಿಗ ಜಿ.ಆರ್. ವಿಶ್ವನಾಥ್ ಅವರ ಜನ್ಮದಿನ (ಫೆ.12) ಇಂದು. 1969 ರಿಂದ 83ರ ನಡುವಿನ 14 ವರ್ಷಗಳ ಕಾಲಘಟ್ಟದಲ್ಲಿ 91 ಟೆಸ್ಟ್, 25 ಏಕದಿನ ಪಂದ್ಯ ಆಡಿರುವ ಎಲ್ಲರ ನೆಚ್ಚಿನ ಜಿಆರ್​ವಿ ಅಥವಾ ವಿಶಿ ಭಾರತೀಯ ಕ್ರಿಕೆಟ್​ಗೆ ತಂದುಕೊಟ್ಟಿರುವ ಮೌಲ್ಯ ಅವರ ಆಟದ ಅಂಕಿಅಂಶಗಳಿಗಿಂತ ನೂರುಪಾಲು ದೊಡ್ಡದು. ವಿಶಿ ವೃತ್ತಿಜೀವನದ ಕೆಲವು ಮೆಲುಕು ಇಲ್ಲಿದೆ.

ರಾಘವೇಂದ್ರ ಗಣಪತಿ ಅವು 1971ರ ದಿನಗಳು. ಕಠಿಣವಾದ ವೆಸ್ಟ್ ಇಂಡೀಸ್ ಪ್ರವಾಸದಿಂದ ಭಾರತ ತಂಡ ಆಗಷ್ಟೇ ತವರಿಗೆ ಮರಳಿತ್ತು. ಆ ಪ್ರವಾಸದಲ್ಲೇ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಸುನಿಲ್ ಗಾವಸ್ಕರ್ ಭಾರತ ತಂಡದಲ್ಲಿ ತಮಗಿಂತ 2 ವರ್ಷ ಅನುಭವಿಯಾಗಿದ್ದ, ವಯಸ್ಸಿನಲ್ಲಿ ಕೇವಲ 5 ತಿಂಗಳು ಹಿರಿಯರಾದ, ಆಪ್ತ ಸ್ನೇಹಿತ ಜಿಆರ್ ವಿಶ್ವನಾಥ್​ರನ್ನು ತಮ್ಮ ಮನೆಗೆ ಬರಲೇಬೇಕು ಎಂದು ಬಲವಂತ ಮಾಡಿ ಕರೆದುಕೊಂಡು ಹೋದರು. ಆ ಹೊತ್ತಿಗಾಗಲೇ ಕ್ರಿಕೆಟ್ ಜಗತ್ತು ವಿಶಿ ಆಟವನ್ನು ಮೆಚ್ಚಿಕೊಂಡಿತ್ತು. ವಿಶ್ವನಾಥ್ ಆ ದಿನ ಗಾವಸ್ಕರ್​ರ ಕಿರಿಯ ತಂಗಿ ಕವಿತಾರನ್ನು ಮೆಚ್ಚಿಕೊಂಡಿದ್ದರು. ಮೊದಲ ನೋಟದಲ್ಲೇ ಚಿಗುರಿದ್ದ ಪ್ರೀತಿ ಮುಂದಿನ ಏಳು ವರ್ಷಗಳಲ್ಲಿ ಕಾವ್ಯಾತ್ಮಕವಾಗಿ ಅರಳಿತು. 1978ರ ಸಮಯ. ಆ ಹೊತ್ತಿಗಾಗಲೇ ವಿಶ್ವನಾಥ್ ಭಾರತೀಯ ಕ್ರಿಕೆಟ್​ನಲ್ಲಿ ದಂತಕಥೆ ಮಟ್ಟಕ್ಕೆ ಬೆಳೆದಿದ್ದರು. ಅದೇ ವರ್ಷ ಅವರಿಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯೂ ಲಭಿಸಿತ್ತು. ಉಭಯ ಕುಟುಂಬಗಳ ಸಮ್ಮತಿ ಮೇರೆಗೆ 1978ರ ಮಾರ್ಚ್​ನಲ್ಲಿ ವಿಶಿ-ಕವಿತಾ ಮದುವೆಯೂ ನಿಶ್ಚಯವಾಯಿತು. ಒಂದು ಸಮಸ್ಯೆಯಿತ್ತು. ಅದೇ ಸಂದರ್ಭದಲ್ಲಿ ರಣಜಿ ಟ್ರೋಫಿ ಫೈನಲ್ ಪಂದ್ಯವೂ ನಿಗದಿಯಾಗಿತ್ತು. ಉತ್ತರ ಪ್ರದೇಶದ ವಿರುದ್ಧ ಕರ್ನಾಟಕ ತಂಡದ ಫೈನಲ್ ಪಂದ್ಯ. ವಿಶ್ವನಾಥ್ ತಪ್ಪಿಸುವುದಾದರೂ ಹೇಗೆ? ವಿಶಿ ಗೈರಿನಲ್ಲಿ ಕರ್ನಾಟಕ ತಂಡ ಆಡುವುದನ್ನು ಅಭಿಮಾನಿಗಳಂತೂ ಬಿಲ್​ಕುಲ್ ಒಪು್ಪತ್ತಿರಲಿಲ್ಲ. ವಿಶೇಷವೆಂದರೆ, ಬಿಸಿಸಿಐ ಕೇವಲ ವಿಶ್ವನಾಥ್ ಸಲುವಾಗಿ ರಣಜಿ ಟ್ರೋಫಿ ಫೈನಲ್ ಪಂದ್ಯವನ್ನೇ ಮುಂದೂಡಿತು! ಏ. 4ರಂದು ಉತ್ತರ ಪ್ರದೇಶದ ಮೋಹನ್ ನಗರದಲ್ಲಿ ನಡೆದ ಪಂದ್ಯಕ್ಕೆ ವಿಶ್ವನಾಥ್ ಮದುವೆ ಮಂಟಪದಿಂದಲೇ ನೇರವಾಗಿ ತೆರಳಿದಂತೆ ದೌಡಾಯಿಸಿದರು. ಮಾತ್ರವಲ್ಲ, ಭರ್ಜರಿ 247 ರನ್ ಬಾರಿಸುವ ಮೂಲಕ ಕರ್ನಾಟಕ ಚಾಂಪಿಯನ್ ಪಟ್ಟಕ್ಕೇರಲು ನೆರವಾದರು. ‘ಅವನೊಬ್ಬ ಅಪಾಯಕಾರಿ ವ್ಯಕ್ತಿ. ಒಮ್ಮೆ ಅವನನ್ನು ನನ್ನ ಮನೆಗೆ ಕರೆದು ತಪು್ಪ ಮಾಡಿದೆ. ಆಮೇಲೆ ಏನಾಯಿತೆಂದು ಎಲ್ಲರಿಗೂ ಗೊತ್ತಿದೆ..’ ಎಂದು ಮುಂದೊಮ್ಮೆ ಗಾವಸ್ಕರ್ ತಮ್ಮ ಆಪ್ತಮಿತ್ರನ ಬಗ್ಗೆ ತಮಾಷೆಯಾಗಿ ಹೇಳಿಕೊಂಡಿದ್ದರು.

ಮಣಿಕಟ್ಟಿನ ಮಾಂತ್ರಿಕ: ಹಿರಿಯ ಕ್ರಿಕೆಟ್ ಪತ್ರಕರ್ತ ಆರ್. ಕೌಶಿಕ್ ನೆರವಿನಿಂದ ಜಿಆರ್​ವಿ ಹೊರತಂದಿರುವ ಜೀವನ ಚರಿತ್ರೆಯ ಶೀರ್ಷಿಕೆ ‘ರಿಸ್ಟ್ ಅಶ್ಯೂರ್ಡ್’ ಎಂದು. ಅಂದರೆ, ಅವರ ಮಣಿಕಟ್ಟಿನ ಕಲಾತ್ಮಕ ಹೊಡೆತಗಾರಿಕೆಯೇ ಅವರ ಬ್ಯಾಟಿಂಗ್ ವೈಶಿಷ್ಟ್ಯ. ಮುಂಗೈ ಮತ್ತು ಮಣಿಕಟ್ಟಿನ ಸ್ನಾಯುಗಳ ಶಕ್ತಿ ಹೆಚ್ಚಿಸಿಕೊಳ್ಳಲು ನೀರು ತುಂಬಿದ ಬಕೆಟ್ ಎತ್ತಿ ಇಳಿಸಿ ವ್ಯಾಯಾಮ ಮಾಡುವಂತೆ ನಾಯಕ ಮನ್ಸೂರ್ ಅಲಿ ಪಟೌಡಿ ಸಲಹೆ ನೀಡಿದ್ದರು. ಅದನ್ನು ಚಾಚೂತಪ್ಪದೆ ಪಾಲಿಸಿದ ಜಿಆರ್​ವಿ, ಮಣಿಕಟ್ಟಿನ ಬ್ಯಾಟಿಂಗ್ ಮಾಂತ್ರಿಕನೆಂದೇ ಹೆಸರುಗಳಿಸಿದರು.

ಸಜ್ಜನಿಕೆಯ: ಅಂಪೈರ್ ತೀರ್ಪು ಏನೇ ಇರಲಿ, ತಾನು ಔಟಾಗಿದ್ದೇನೆ ಎಂದು ತಿಳಿದ ಕೂಡಲೇ ವಿಶ್ವನಾಥ್ ಕ್ರೀಸಿನಲ್ಲಿ ನಿಲ್ಲುತ್ತಿರಲಿಲ್ಲ. ಅವರ ಈ ಪ್ರಾಮಾಣಿಕತೆಯೇ ಅವರನ್ನು ಕ್ರಿಕೆಟ್ ಸಜ್ಜನರ ಪಂಕ್ತಿಯಲ್ಲಿ ಮೇಲಕ್ಕೇರಿಸಿತು. ಇದಕ್ಕೆ ಕಾರಣವಾಗಿದ್ದೂ ಒಂದು ವಿಲಕ್ಷಣ ಘಟನೆ. 1969ರಲ್ಲಿ ಅವರ ವೃತ್ತಿಜೀವನದ 2ನೇ ಟೆಸ್ಟ್ ಪಂದ್ಯ. ವಿಶ್ವನಾಥ್ ವಿರುದ್ಧ ಎಲ್​ಬಿಡಬು É ಅಪೀಲ್ ಅನ್ನು ಅಂಪೈರ್ ಪುರಸ್ಕರಿಸಲಿಲ್ಲ ಎಂಬ ಹತಾಶೆಗೆ ಆಸೀಸ್ ಬೌಲರ್ ಒಬ್ಬ ‘ಮೋಸಗಾರ’ ಎಂದು ವಿಶಿಯನ್ನು ನಿಂದಿಸಿ, ಅವರ ಬ್ಯಾಟಿಗೆ ಒದ್ದಿದ್ದ. ಇದು ವಿಶ್ವನಾಥ್ ಮನಸ್ಸಿಗೆ ಎಷ್ಟರ ಮಟ್ಟಿಗೆ ಘಾಸಿ ಉಂಟು ಮಾಡಿತೆಂದರೆ, ಔಟ್ ಎಂದು ತಮಗೆ ಖಾತರಿ ಆದೊಡನೆ, ಅಂಪೈರ್ ತೀರ್ಪಿಗೂ ಕಾಯದೆ ನಿರ್ಗಮಿಸಬೇಕೆಂದು ತೀರ್ವನಿಸಿದರು. ಜೀವನದುದ್ದಕ್ಕೂ ಅದನ್ನೇ ಪಾಲಿಸಿದರು ಕೂಡ. ಒಮ್ಮೆ ತಮಿಳುನಾಡು ವಿರುದ್ಧ ರಣಜಿ ಪಂದ್ಯದಲ್ಲಿ ಅಂಪೈರ್ ಔಟ್ ಕೊಡಲಿಲ್ಲ. ಆದರೆ, ಆಟ ಮುಂದುವರಿಸಲು ಇಚ್ಛಿಸದ ಅವರು ಮುಂದಿನ ಎಸೆತದಲ್ಲಿ ಬೇಕೆಂದೇ ಕೆಟ್ಟ ಹೊಡೆತ ಆಡಿ ಪೆವಿಲಿಯನ್​ಗೆ ಮರಳಿದ್ದರು. ಅಷ್ಟೇ ಅಲ್ಲ, ತಾವು ಔಟಾಗದೇ ಇದ್ದಾಗ ಅಂಪೈರ್ ಔಟೆಂದು ತೀರ್ಪು ನೀಡಿದ್ದರೂ ವಿಶಿ ಅಂಪೈರ್ ನಿರ್ಧಾರವನ್ನು ಯಾವತ್ತೂ ಪ್ರಶ್ನಿಸುತ್ತಿರಲಿಲ್ಲ. ಒಂದು ಸಣ್ಣ ಅಸಮಾಧಾನದ ಗೆರೆಯೂ ಅವರ ಮುಖದ ಮೇಲೆ ಮೂಡುತ್ತಿರಲಿಲ್ಲ. ವಿಶ್ವನಾಥರ ಒಳ್ಳೆಯತನ ಬ್ಯಾಟಿಂಗ್​ಗಷ್ಟೇ ಸೀಮಿತವಾಗಿ ಇರಲಿಲ್ಲ. 1979-80ರಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬಾಬ್ ಟೇಲರ್ ಔಟೆಂದು ಅಂಪೈರ್ ಕೊಟ್ಟ ತೀರ್ಪು ಸರಿಯಿಲ್ಲ ಎಂದು ಭಾರತ ತಂಡದ ನಾಯಕರಾಗಿದ್ದ ವಿಶಿಗೆ ಅನಿಸಿತು. ಕೂಡಲೇ ಅವರು ಔದಾರ್ಯ ಪ್ರದರ್ಶಿಸಿ ಟೇಲರ್​ರನ್ನು ಕ್ರೀಸಿಗೆ ಮರಳಿ ಆಹ್ವಾನಿಸಿದರು. ಈ ಜೀವದಾನದ ಲಾಭ ಪಡೆದ ಟೇಲರ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಭಾರತ ಆ ಪಂದ್ಯ ಸೋತಿತು. ಆದರೆ, ವಿಶ್ವನಾಥ್ ತಮ್ಮ ಸಜ್ಜನಿಕೆಯಿಂದ ಹೃದಯ ಗೆದ್ದಿದ್ದರು.

GR Vishwanath

ತ್ರಿವಿಕ್ರಮ ಸಾಧಕ: ಈ ಪೀಳಿಗೆಯ ಕ್ರಿಕೆಟ್ ಅಭಿಮಾನಿಗಳಿಗೆ ಶ್ರೇಷ್ಠ ಪದದ ಮೌಲ್ಯ ಸರಿಯಾಗಿ ತಿಳಿದಿಲ್ಲ. ಒಂದು ಉತ್ತಮ ಟಿ20 ಇನಿಂಗ್ಸ್, ಒಂದು ಶತಕದಾಟಕ್ಕೆಲ್ಲ ಆಟಗಾರರಿಗೆ ‘ಶ್ರೇಷ್ಠ ಪಟ್ಟ’ ಕಟ್ಟಿಬಿಡುತ್ತಾರೆ. ಅದಕ್ಕೆ ಕಾರಣ ಅವರ್ಯಾರೂ ಗುಂಡಪ್ಪ ವಿಶ್ವನಾಥ್ ಬ್ಯಾಟಿಂಗ್ ನೋಡಿಲ್ಲ. 1949ರ ಫೆಬ್ರವರಿ 12ರಂದು ಭದ್ರಾವತಿಯಲ್ಲಿ ಜನಿಸಿದ ಜಿಆರ್​ವಿ, ಕ್ರಿಕೆಟ್ ಆಡಿದ್ದು 1969ರಿಂದ 1983ರ ಕಾಲಘಟ್ಟದಲ್ಲಿ. ಅದರಲ್ಲೂ 1982ರ ನಂತರ ಅವರು ಏಕದಿನ ಪಂದ್ಯ ಆಡಲಿಲ್ಲ. ಆ ಕಾಲದಲ್ಲಿ ಕ್ರಿಕೆಟ್ ಪಂದ್ಯಗಳ ನೇರಪ್ರಸಾರ ಇರುತ್ತಿರಲಿಲ್ಲ. ಈಗ ಜಿಆರ್​ವಿ ಬ್ಯಾಟಿಂಗ್​ನ ರೆಕಾರ್ಡಿಂಗ್​ಗಳೂ ಅಷ್ಟಾಗಿ ಲಭ್ಯವಿಲ್ಲ. ಇರುವ ಕೆಲವೇ ದೃಶ್ಯಾವಳಿಗಳನ್ನು ಪ್ರಸಾರ ಮಾಡುವ ಆಸಕ್ತಿ ಪ್ರಸಾರ ವಾಹಿನಿಗಳಿಗೂ ಇಲ್ಲ. ನಾವೆಲ್ಲ ಸುನಿಲ್ ಗಾವಸ್ಕರ್ ಆಟ ನೋಡಿದ್ದೇವೆ. ಸಚಿನ್ ತೆಂಡುಲ್ಕರ್ ಬ್ಯಾಟಿಂಗ್ ನೋಡಿದ್ದೇವೆ. ರಾಹುಲ್ ದ್ರಾವಿಡ್​ರ ಕುಶಲ ಬ್ಯಾಟಿಂಗ್ ನೋಡಿದ್ದೇವೆ. ಆದರೆ, ಗಾವಸ್ಕರ್, ತೆಂಡುಲ್ಕರ್​ಗಿಂತ ಮೊದಲೇ ಒರಿಜಿನಲ್ ಲಿಟಲ್ ಮಾಸ್ಟರ್ ಎನಿಸಿದ್ದವರು ವಿಶ್ವನಾಥ್. ತೆಂಡುಲ್ಕರ್, ದ್ರಾವಿಡ್​ಗಿಂತ ಮೊದಲೇ ಜೆಂಟಲ್​ವುನ್ ಆಟದ ಅಪ್ಪಟ ಜೆಂಟಲ್​ವ್ಯಾನ್ ಎನಿಸಿಕೊಂಡವರು ವಿಶ್ವನಾಥ್. ದ್ರಾವಿಡ್​ರ ಕಲಾತ್ಮಕ ಬ್ಯಾಟಿಂಗ್​ನ ಮೂಲ ಸಿಲಬಸ್ ವಿಶ್ವನಾಥ್​ರ ಬ್ಯಾಟಿಂಗ್ ಪುಟಗಳಲ್ಲಿತ್ತು. ಆಕಾರದಲ್ಲಿ ವಾಮ ನಾಕಾರದ ವಿಶ್ವನಾಥ್ ಭಾರತೀಯ ಕ್ರಿಕೆಟ್​ನ ತ್ರಿವಿಕ್ರಮ ಸಾಧಕ.

ಪದಾರ್ಪಣೆ ದ್ವಿಶತಕ: ಆಗಿನ ಮೈಸೂರು ತಂಡದ ಪರ (ಕರ್ನಾಟಕ) ರಣಜಿ ಟ್ರೋಫಿ ಪದಾರ್ಪಣೆ ಪಂದ್ಯದಲ್ಲೇ ವಿಶ್ವನಾಥ್ ಭರ್ಜರಿ ದ್ವಿಶತಕ ಸಿಡಿಸಿ ದೇಶದ ಗಮನ ಸೆಳೆದರು. 1967-68ರಲ್ಲಿ ಅಂಧ್ರಪ್ರದೇಶ ವಿರುದ್ಧದ ಆ ಪಂದ್ಯದಲ್ಲಿ ಮೈಸೂರು ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡಿತ್ತು. ಆಗ ಕ್ರೀಸಿಗೆ ನಡೆದುಬರುತ್ತಿದ್ದ ಕೃತ ಕಾಯದ, ವಾಮನಮೂರ್ತಿ ವಿಶಿಯನ್ನು ನೋಡಿ ಅಂಧ್ರ ಬೌಲರ್‌ಗಳು 'ಮರುಕ' ಪಟ್ಟಿದ್ದರು. ಹೇಗೂ ಔಟ್ ಆಗುತ್ತಾನೆ. ಅದಕ್ಕೆ ಮುನ್ನ ಒಂದೆರಡು ರನ್ ಹೊಡೆದುಕೊಳ್ಳಲಿ ಬಿಟ್ಟುಬಿಡೋಣ ಎಂದು ಚರ್ಚಿಸಿದ್ದರು. ಆದರೆ, ಕೊನೆಗೆ ಅಂಧ್ರ ತಂಡವೇ ಮರುಕ ಪಡುವಂತಾಗಿತ್ತು. ವಿಕಿ ಚೊಚ್ಚಲ ಪಂದ್ಯದಲ್ಲೇ ಭರ್ಜರಿ 230 ರನ್ ಬಾರಿಸಿದ್ದರು.

ಒಂದು ಚೇಸ್ ಮತ್ತೊಂದು ಇನಿಂಗ್ಸ್​: ಜಿಆರ್​ವಿ ಆಡಿದ ಒಂದೊಂದು ಇನಿಂಗ್ಸ್ ಕೂಡ ಕಣ್ಣಿಗೆ ಹಬ್ಬವೇ. ಅದರಲ್ಲೂ ಅವರ 2 ಇನಿಂಗ್ಸ್​ಗಳನ್ನು ಮರೆಯಲು ಸಾಧ್ಯವಿಲ್ಲ. ಟೆಸ್ಟ್ ಕ್ರಿಕೆಟ್​ನ 4ನೇ ಇನಿಂಗ್ಸ್​ನಲ್ಲಿ 400 ರನ್ ಗುರಿ ಬೆನ್ನಟ್ಟುವುದೆಂದರೆ ಇಂದಿಗೂ ಅಸಂಭವವೇ. ಆದರೆ, ಭಾರತ 1976ರಲ್ಲೇ ದೈತ್ಯ ವೆಸ್ಟ್ ಇಂಡಿಸ್ ವಿರುದ್ಧ 403 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಇದರ ರೂವಾರಿಗಳು ಜಿಆರ್​ವಿ ಮತ್ತು ಗಾವಸ್ಕರ್. ಆ ಇನಿಂಗ್ಸ್​ನಲ್ಲಿ ವಿಶ್ವನಾಥ್ 112 ರನ್ ಬಾರಿಸಿದರೆ, ಗಾವಸ್ಕರ್ 102 ರನ್ ಗಳಿಸಿದರು. ಮತ್ತೊಮ್ಮೆ 1974-75ರ ಚೆನ್ನೈ ಟೆಸ್ಟ್​ನಲ್ಲಿ ವಿಶ್ವನಾಥರ 97 ರನ್​ಗಳ ಆಪದ್ಬಾಂಧವನ ಆಟ ಕ್ರಿಕೆಟ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಇನಿಂಗ್ಸ್​ಗಳಲ್ಲೊಂದಾಗಿ ದಾಖಲಾಗಿದೆ. ಆ ಪಂದ್ಯದಲ್ಲಿ ಜಿಆರ್​ವಿ ಸಾಹಸದಿಂದಲೇ ಭಾರತ ಗೆಲುವು ಸಾಧಿಸಿತ್ತು.

ಸೆಂಚುರಿ ಬಾರಿಸಿದ್ರೆ ವಿಕ್ಟರಿ: ವಿಶ್ವನಾಥ್ ಶತಕ ಬಾರಿಸಿದರೆ ಭಾರತ ಸೋಲುವುದಿಲ್ಲ ಎಂಬ ನಂಬಿಕೆ ಆ ದಿನಗಳಲ್ಲಿತ್ತು. ಅವರು ಮೊದಲ ಟೆಸ್ಟ್ ಶತಕ ಬಾರಿಸಿದಾಗ ಭಾರತ ಡ್ರಾ ಮಾಡಿಕೊಂಡಿದ್ದರೆ, ಉಳಿದ ಎಲ್ಲ 13 ಶತಕ ಬಾರಿಸಿದ ಸಂದರ್ಭದಲ್ಲೂ ಭಾರತ ಗೆದ್ದಿತ್ತು.

ಪಟೌಡಿಗೆ ಫೇವರಿಟ್: ಜಿಆರ್​ವಿ ವೃತ್ತಿ ಜೀವನದಲ್ಲಿ ಭಾರತದ ದಿಗ್ಗಜ ಆಟಗಾರ ಮನ್ಸೂರ್ ಅಲಿ ಖಾನ್ ಪಟೌಡಿ ಪ್ರೋತ್ಸಾಹದ ಪಾತ್ರ ದೊಡ್ಡದು. 1969ರ ಆಸೀಸ್ ವಿರುದ್ಧ ಸರಣಿಯ 2ನೇ ಟೆಸ್ಟ್​ನಲ್ಲಿ ಪದಾರ್ಪಣೆ ಮಾಡಿದ ಜಿಆರ್​ವಿ ಮೊದಲ ಇನಿಂಗ್ಸ್​ನಲ್ಲಿ ಶೂನ್ಯಕ್ಕೆ ಔಟಾದಾಗಲೂ, ‘ಚಿಂತಿಸಬೇಡ, 2ನೇ ಇನಿಂಗ್ಸ್​ನಲ್ಲಿ ಶತಕ ಬಾರಿಸುತ್ತಿ’ ಎಂದು ಉತ್ತೇಜಿಸಿದರು. 2ನೇ ಇನಿಂಗ್ಸ್​ನಲ್ಲಿ ಜಿಆರ್​ವಿ (137) ಶತಕವನ್ನೇ ಬಾರಿಸಿದರು. ಪದಾರ್ಪಣೆ ಪಂದ್ಯದಲ್ಲಿ ಶೂನ್ಯ, ಶತಕ ಎರಡೂ ದಾಖಲೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net