

ನವದೆಹಲಿ: ಮಿನಿ ವಿಶ್ವಕಪ್ ಎಂದೇ ಖ್ಯಾತಿ ಪಡೆದಿರುವ ಚಾಂಪಿಯನ್ಸ್ ಟ್ರೋಫಿ (Champions Trophy) ಈ ಬಾರಿ ಪಾಕಿಸ್ತಾನ ಹಾಗೂ ದುಬೈ (ಭಾರತದ ಪಂದ್ಯಗಳು ಮಾತ್ರ) ಆತಿಥ್ಯದಲ್ಲಿ ನಡೆಯುತ್ತಿದ್ದು, ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರಮುಖವಾಗಿ ಫೆಬ್ರವರಿ 23ರಂದು ನಡೆಯಲಿರುವ ಭಾರತ ಹಾಗೂ ಪಾಕ್ ನಡುವಿನ ಹೈವೋಲ್ಟೇಜ್ ಕದನವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಎದುರು ನೋಡುತ್ತಿದ್ದು, ಟಿಆರ್ಪಿ ಹಾಗೂ ವೀಕ್ಷಣೆ ವಿಚಾರದಲ್ಲಿ ಮತ್ತೊಂದು ಸುತ್ತಿನ ದಾಖಲೆ ಬರೆಯುವುದು ಪಕ್ಕಾ ಆಗಿದೆ.
ಇನ್ಣೂ ಭಾರತ ಹಾಗೂ ಪಾಕ್ ನಡುವಿನ ಪಂದ್ಯ ಎಂದರೆ ಉಭಯ ದೇಶಗಳ ಹಾಲಿ ಮತ್ತು ಮಾಜಿ ಆಟಗಾರರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಅದೇ ರೀತಿ ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ ಉಪನಾಯಕ ಅಘಾ ಸಲ್ಮಾನ್ ಹೇಳಿಕೆ ನೀಡಿದ್ದು, ಸದ್ಯ ವೈರಲ್ ಆಗುತ್ತಿದೆ.
ಪಿಸಿಬಿಯ ಪಾಡ್ಕಾಸ್ಟ್ನಲ್ಲಿ ಭಾರತವನ್ನು ಸೋಲಿಸುವುದ ಅಥವಾ ಚಾಂಪಿಯನ್ಸ್ ಟ್ರೋಫಿ (Champions Trophy) ಗೆಲ್ಲುವುದು ಮುಖ್ಯನಾ ಎಂದು ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ಅಘಾ, ಪ್ರಮುಖ ಐಸಿಸಿ ಟೂರ್ನಿಯಲ್ಲಿ ಕೇವಲ ಬದ್ಧ ಎದುರಾಳಿ ಭಾರತವನ್ನು ಸೋಲಿಸುವುದಕ್ಕಿಂತ ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದು ಮಖ್ಯ ಎಂದು ಹೇಳಿದ್ದಾರೆ.
ಐಸಿಸಿ ಟೂರ್ನಿಯ ಆತಿಥ್ಯವನ್ನು ಪಾಕಿಸ್ತಾನ ವಹಿಸಿರುವುದರಿಂದ ಚಾಂಪಿಯನ್ಸ್ ಟ್ರೋಫಿಗಾಗಿ (Champions Trophy) ನಾನು ಕಾತರದಿಂದ ಕಾಯುತ್ತಿದ್ದೇನೆ. ಲಾಹೋರ್ ಮೂಲದವನಾಗಿ ಹುಟ್ಟೂರಿನಲ್ಲಿ ಟ್ರೋಫಿ ಎತ್ತುವ ನನ್ನ ಕನಸು ನನಸಾಗಬೇಕು. ಪಾಕಿಸ್ತಾನ ತಂಡಕ್ಕೆ ಅದನ್ನು ಗೆಲ್ಲುವ ಎಲ್ಲ ಸಾಮರ್ಥ್ಯ ಇದೆ. ಸೆಣೆಸಲಿದೆ. ಭಾರತ ವಿರುದ್ಧದ ಬಹುನಿರೀಕ್ಷಿತ ಕಾದಾಟದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ತೀವ್ರ ಸೆಣೆಸಾಟದ ಸುತ್ತ ವಿಶಿಷ್ಟ ವಾತಾವರಣ ನಿರ್ಮಾಣವಾಗಿದೆ. ಆದರೆ ನಮ್ಮ ದೊಡ್ಡ ಗುರಿ ಟ್ರೋಫಿಯನ್ನು ಗೆಲ್ಲುವುದು.
ಭಾರತ ವಿರುದ್ಧದ ಪಂದ್ಯವನ್ನು ಗೆಲ್ಲಲು ಕೂಡಾ ಪಾಕಿಸ್ತಾನ ಎಲ್ಲ ಪ್ರಯತ್ನಗಳನ್ನು ನಡೆಸಲಿದೆ. ಭಾರತ ವಿರುದ್ಧದ ಪಂದ್ಯ ಗೆಲ್ಲಬೇಕು ಎನ್ನುವುದು ನಮ್ಮೆಲ್ಲರ ಬಯಕೆ. ಅದಕ್ಕಾಗಿ ನಾವು ಪ್ರಯತ್ನಿಸುತ್ತೇವೆ. ಭಾರತದ ವಿರುದ್ಧ ಅತ್ಯುತ್ತಮ ಸಾಧನೆ ಮಾಡಲು ಕೂಡಾ ನಾನು ಪ್ರಯತ್ನಿಸುತ್ತೇನೆ ಎಂದು ಪಾಕಿಸ್ತಾನ ತಂಡದ ಉಪನಾಯಕ ಅಘಾ ಸಲ್ಮಾನ್ ಪಿಸಿಬಿ ಪಾಡ್ಕಾಸ್ಟ್ನಲ್ಲಿ ಹೇಳಿದ್ದಾರೆ.