ಬಿಸಿಸಿಐಗೆ ಐಸಿಸಿ ಚೇರ್ಮನ್ ಶಶಾಂಕ್ ಕಿರಿಕ್!

BCCI 29 may 20
Published on

ನವದೆಹಲಿ: ಕರೊನಾ ಹಾವಳಿಯಿಂದಾಗಿ ಈ ವರ್ಷದ ಮಹತ್ವದ ಕ್ರೀಡಾಕೂಟಗಳಾದ ಟೋಕಿಯೊ ಒಲಿಂಪಿಕ್ಸ್, ಯುರೋಕಪ್​ಗಳನ್ನು ಈಗಾಗಲೆ ಮುಂದೂಡಲಾಗಿದ್ದರೆ, ವಿಂಬಲ್ಡನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ರದ್ದುಗೊಂಡಿದೆ. ಆದರೆ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯ ಬಗ್ಗೆ ಇನ್ನೂ ಗೊಂದಲಗಳು ಮುಂದುವರಿದಿವೆ. ಈ ವರ್ಷ ಐಪಿಎಲ್ ಆಯೋಜಿಸುವುದನ್ನು ತಪ್ಪಿಸುವ ಸಲುವಾಗಿ ಐಸಿಸಿ ಚೇರ್ಮನ್ ಶಶಾಂಕ್ ಮನೋಹರ್ ಉದ್ದೇಶಪೂರ್ವಕವಾಗಿಯೇ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಟೂರ್ನಿಯ ಭವಿಷ್ಯದ ಬಗ್ಗೆ ಗೊಂದಲ ಮೂಡಿಸುತ್ತಿದ್ದಾರೆ ಎಂದು ಬಿಸಿಸಿಐ ಆರೋಪಿಸಿದೆ.

ಶಶಾಂಕ್ ತಂಟೆ ಹೊಸದಲ್ಲ! ಶಶಾಂಕ್ ಮನೋಹರ್ ಭಾರತೀಯರೇ ಆಗಿದ್ದರೂ ಬಿಸಿಸಿಐಗೆ ಕಂಟಕರಾಗಿರುವುದು ವಿಪರ್ಯಾಸ. ನಾಗ್ಪುರ ಮೂಲದ ವಕೀಲ ಶಶಾಂಕ್ ಈ ಹಿಂದೆ ಬಿಸಿಸಿಐ ಅಧ್ಯಕ್ಷರೂ ಆಗಿದ್ದರು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಅವರು ಬಿಸಿಸಿಐಗೆ ಶತ್ರುವಾಗಿದ್ದಾರೆ. ಎನ್. ಶ್ರೀನಿವಾಸನ್ ಅಧ್ಯಕ್ಷರಾಗಿದ್ದಾಗ ಐಸಿಸಿ ಆದಾಯದ ಹೆಚ್ಚಿನ ಪಾಲು ಬಿಸಿಸಿಐಗೆ ಸಿಗುವಂತೆ ಮಾಡಿದ್ದರು. ಆದರೆ ಶಶಾಂಕ್ ಅಧ್ಯಕ್ಷರಾದ ಬೆನ್ನಲ್ಲೇ ಅದನ್ನು ಬದಲಾಯಿಸಿದ್ದರು. ಐಸಿಸಿ ಟೂರ್ನಿಗಳ ಆತಿಥ್ಯದ ತೆರಿಗೆ ವಿನಾಯಿತಿ ವಿಚಾರದಲ್ಲೂ ಅವರು ಬಿಸಿಸಿಐಗೆ ತೊಂದರೆ ನೀಡುತ್ತಿದ್ದಾರೆ.

ಕರೊನಾ ಭೀತಿಯ ನಡುವೆ 16 ತಂಡಗಳ ಟಿ20 ವಿಶ್ವಕಪ್ ಆಯೋಜನೆ ಅವಾಸ್ತವಿಕ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥರು ಈಗಾಗಲೆ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಟೂರ್ನಿ ಆಸ್ಟ್ರೇಲಿಯಾದಲ್ಲಿ ನಿಗದಿಯಂತೆಯೇ ಆಯೋಜನೆಗೊಳ್ಳುವ ಸಾಧ್ಯತೆ ಕ್ಷೀಣಿಸಿದೆ. ಆದರೂ ಐಸಿಸಿ ಇನ್ನೂ ಟಿ20 ವಿಶ್ವಕಪ್ ಮುಂದೂಡುವ ಬಗ್ಗೆ ಅಧಿಕೃತ ನಿರ್ಧಾರ ಕೈಗೊಂಡಿಲ್ಲ. ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ನಿಗದಿಯಾಗಿ ರುವ ಟಿ20 ವಿಶ್ವಕಪ್ ಮುಂದೂಡಿಕೆಯಾದರೆ, ಸೆಪ್ಟೆಂಬರ್​ನಲ್ಲಿ ನಿಗದಿಯಾಗಿರುವ ಟಿ20 ಏಷ್ಯಾಕಪ್ ಕೂಡ ನಡೆಯುವುದಿಲ್ಲ. ಇದರಿಂದ, ಏಪ್ರಿಲ್-ಮೇನಿಂದ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿರುವ ಐಪಿಎಲ್ ಟೂರ್ನಿ ಆಯೋಜನೆಗೆ ಸೂಕ್ತ ಸಮಯಾವಕಾಶ ಲಭಿಸಲಿದೆ. ಆದರೆ ಐಸಿಸಿಯ ವಿಳಂಬ ನೀತಿಯಿಂದಾಗಿ ಐಪಿಎಲ್ ಸಿದ್ಧತೆಗೂ ಹಿನ್ನಡೆಯಾಗಿದೆ.

‘ಐಸಿಸಿಯ ನಿರ್ಗಮನ ಚೇರ್ಮನ್ ಶಶಾಂಕ್ ಮನೋಹರ್ ಅವರೇಕೆ ಗೊಂದಲ ಸೃಷ್ಟಿಸುತ್ತಿದ್ದಾರೆ? ಆತಿಥೇಯ ದೇಶದ ಕ್ರಿಕೆಟ್ ಮಂಡಳಿಯೇ ಟಿ20 ವಿಶ್ವಕಪ್ ಆಯೋಜನೆಗೆ ಹಿಂದೇಟು ಹಾಕುತ್ತಿದೆ. ಹಾಗಾದರೆ ಟೂರ್ನಿಯ ಭವಿಷ್ಯ ನಿರ್ಧರಿಸಲು ಇನ್ನೊಂದು ತಿಂಗಳು ಯಾಕೆ ಕಾಯಬೇಕು? ಶಶಾಂಕ್ ಬಿಸಿಸಿಐಗೆ ಹೊಡೆತ ನೀಡಲು ಪ್ರಯತ್ನಿಸುತ್ತಿರುವಂತಿದೆ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯ ಭವಿಷ್ಯ ನಿರ್ಧರಿಸಲು ಐಸಿಸಿ ಇತ್ತೀಚೆಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿತ್ತು. ಆದರೆ ಸ್ಪಷ್ಟ ನಿರ್ಧಾರ ಕೈಗೊಂಡಿರಲಿಲ್ಲ ಮತ್ತು ಮುಂದಿನ ತಿಂಗಳು ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿತ್ತು. ಒಂದು ವೇಳೆ ಐಸಿಸಿ ಬೇಗನೆ ನಿರ್ಧಾರ ಕೈಗೊಂಡರೆ ಸದಸ್ಯ ರಾಷ್ಟ್ರಗಳಿಗೆ ತಮ್ಮ ದ್ವಿಪಕ್ಷೀಯ ಸರಣಿಗಳ ಬಗ್ಗೆ ನಿರ್ಧರಿಸಲು ನೆರವಾಗಲಿದೆ ಎಂದೂ ಬಿಸಿಸಿಐ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್ ನಡೆಯದಿದ್ದರೆ ಬಿಸಿಸಿಐ 4 ಸಾವಿರ ಕೋಟಿ ರೂ. ನಷ್ಟ ಅನುಭವಿಸಲಿದೆ. -ಪಿಟಿಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net