

ನವದೆಹಲಿ: ಟೀಮ್ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿದ ರಾಹುಲ್ ದ್ರಾವಿಡ್ ಅವರ ಉತ್ತರಾಧಿಕಾರಿಯಾಗಿ ಯಾರು ಅಧಿಕಾರ ವಹಿಸಿಕೊಳ್ಳುತ್ತಾರೆ ಎಂಬ ಕುತೂಹಲ ಕಳೆದ ಒಂದು ತಿಂಗಳಿಂದ ಎಲ್ಲರಲ್ಲೂ ಮನೆ ಮಾಡಿತ್ತು. ಅಭಿಮಾನಿಗಳ ಜೊತೆಗೆ, ಮಾಜಿ ಕ್ರಿಕೆಟಿಗರು ಮತ್ತು ಕ್ರೀಡಾ ತಜ್ಞರು ಕೂಡ ಈ ವಿಷಯದ ಬಗ್ಗೆ ತುಂಬಾ ಆಸಕ್ತಿ ತೋರಿಸಿದ್ದರು. ಕೊನೆಗೂ ಕುತೂಹಲಕ್ಕೆ ತೆರೆಬಿದ್ದಿದ್ದು, ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ದಿಗ್ಗಜ ಆಟಗಾರ ಗೌತಮ್ ಗಂಭೀರ್ ಅವರನ್ನು ಬಿಸಿಸಿಐ ನೇಮಕ ಮಾಡಿದೆ. ಮಂಡಳಿಯ ಕಾರ್ಯದರ್ಶಿ ಜಯ್ ಷಾ ಅವರು ಜುಲೈ 9ರಂದು ಅಧಿಕೃತವಾಗಿ ಘೋಷಣೆ ಮಾಡಿದರು.
ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾ ವಿರುದ್ಧ ಆರಂಭವಾಗುವ ಸರಣಿಯಲ್ಲಿ ಗಂಭೀರ್ ಮುಖ್ಯ ಕೋಚ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಅಲ್ಲಿಯವರೆಗೆ ಕೆಲವೊಂದು ಬದಲಾವಣೆಗಳತ್ತ ಗಂಭೀರ್ ಗಮನಹರಿಸಿದ್ದಾರೆ. ಪ್ರಸ್ತುತ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಬೌಲಿಂಗ್ ಕೋಚ್ ಪರಾಸ್ ಮಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರ ಅವಧಿಯು ಸಹ ಮುಕ್ತಾಯವಾಗಿದ್ದು, ಅವರ ಸ್ಥಾನಕ್ಕೆ ಬದಲಿ ಕೋಚ್ಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಗಂಭೀರ್ ಗಮನಹರಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದಲ್ಲಿ ಹೊಸ ಅಧ್ಯಾಯ ಆರಂಭಿಸಲು ಗೌತಿ ಮುಂದಾಗಿದ್ದಾರೆ.
ಮುಖ್ಯ ಕೋಚ್ ಮಾತ್ರ ಅಧಿಕೃತವಾಗಿ ಘೋಷಣೆಯಾಗಿದ್ದು, ಉಳಿದ ಕೋಚಿಂಗ್ ಸ್ಟಾಫ್ಗೆ ಸಂಬಂಧಿಸಿದ ವಿವರಗಳು ಇನ್ನೂ ಬಾಕಿ ಉಳಿದಿವೆ. ಆದಾಗ್ಯೂ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ, ಫೀಲ್ಡಿಂಗ್ ಕೋಚ್ ಪಾತ್ರಕ್ಕೆ ಜಾಂಟಿ ರೋಡ್ಸ್ ಅವರನ್ನು ಪರಿಗಣಿಸಲಾಗಿದೆ ಎನ್ನಲಾಗುತ್ತಿದೆ. ಕೋಲ್ಕತ ನೈಟ್ ರೈಡರ್ಸ್ ತಂಡದ ಪ್ರಸ್ತುತ ಬ್ಯಾಟಿಂಗ್ ಕೋಚ್ ಆಗಿರುವ ಅಭಿಷೇಕ್ ನಾಯರ್ ಅವರನ್ನು ತಮ್ಮೊಂದಿಗೆ ಸೇರಿಕೊಳ್ಳಲು ಗಂಭೀರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಇದರೊಂದಿಗೆ ಭಾರತದ ಮಾಜಿ ವೇಗದ ಬೌಲರ್ ವಿನಯ್ ಕುಮಾರ್ ಕೂಡ ಗಂಭೀರ್ ಅವರ ಕೋಚಿಂಗ್ ತಂಡದ ಭಾಗವಾಗಲಿದ್ದಾರೆ ಎಂಬ ವದಂತಿಗಳು ಸಹ ಹರಿದಾಡುತ್ತಿವೆ.
ಆದರೆ, ತಾಜಾ ವರದಿಯ ಪ್ರಕಾರ ಬೌಲಿಂಗ್ ಕೋಚ್ ಸ್ಥಾನಕ್ಕೆ ಗಂಭೀರ್ ನೀಡಿರುವ ಆಯ್ಕೆಯನ್ನು ಬಿಸಿಸಿಐ ತಿರಸ್ಕರಿಸಿದೆ ಎಂದು ಕ್ರೀಡಾ ಮೂಲಗಳು ತಿಳಿಸಿವೆ. ಗಂಭೀರ್ ಅವರು ವಿನಯ್ ಕುಮಾರ್ ಹೆಸರನ್ನು ಪ್ರಸ್ತಾಪಿಸಿದ್ದರು ಎಂಬ ವರದಿ ಇದೆ. ಆದರೆ, ವಿನಯ್ ಕುಮಾರ್ ಬದಲಿಗೆ ಟೀಮ್ ಇಂಡಿಯಾದ ಮಾಜಿ ಸ್ಟಾರ್ ವೇಗಿ ಜಹೀರ್ ಖಾನ್ ಅವರಿಗೆ ಮಣೆ ಹಾಕಲು ಬಿಸಿಸಿಐ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಜಹೀರ್ ಖಾನ್ ಅವರು 2011ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. (ಏಜೆನ್ಸೀಸ್)