1983ರ ವಿಶ್ವಕಪ್​ ವಿಜೇತರಿಗೂ ಬಿಸಿಸಿಐ ದೊಡ್ಡ ಬಹುಮಾನ ನೀಡಬೇಕು; ಕಪಿಲ್​ ದೇವ್​ ಬಳಗದ ಸದಸ್ಯನ ಬೇಡಿಕೆ!

web 1983 wc
Published on

ನವದೆಹಲಿ: ಟಿ20 ವಿಶ್ವಕಪ್​ ವಿಜೇತ ರೋಹಿತ್​ ಶರ್ಮ ಬಳಗಕ್ಕೆ ಬಿಸಿಸಿಐ ಬರೋಬ್ಬರಿ 125 ಕೋಟಿ ರೂ. ಬಹುಮಾನ ವಿತರಿಸಿದೆ. 1983ರಲ್ಲಿ ಏಕದಿನ ವಿಶ್ವಕಪ್​ ಗೆದ್ದು ಭಾರತೀಯ ಕ್ರಿಕೆಟ್​ನಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ ಕಪಿಲ್​ ದೇವ್​ ಬಳಗಕ್ಕೂ ಬಿಸಿಸಿಐ ಈಗ ಅದೇ ರೀತಿ ದೊಡ್ಡ ಮೊತ್ತದ ಬಹುಮಾನವನ್ನು ನೀಡಬೇಕೆಂದು ತಂಡದ ಸದಸ್ಯರೊಬ್ಬರು ಬೇಡಿಕೆ ಸಲ್ಲಿಸಿದ್ದಾರೆ.

1983ರಲ್ಲಿ ಭಾರತ ತಂಡ ವಿಶ್ವಕಪ್​ ಗೆದ್ದಾಗ ಆರ್ಥಿಕ ಮುಗ್ಗಟ್ಟಿನಲ್ಲಿದ್ದ ಬಿಸಿಸಿಐ, ಆಟಗಾರರಿಗೆ ಕೇವಲ ತಲಾ 25 ಸಾವಿರ ರೂ. ಬಹುಮಾನ ನೀಡಿತ್ತು. ಬಳಿಕ ಖ್ಯಾತ ಗಾಯಕಿ ಲತಾ ಮಂಗೇಶ್ಕರ್​ ವಿಶೇಷ ಸಂಗೀತಗೋಷ್ಠಿ ಆಯೋಜಿಸಿ, ಅದರಿಂದ ಸಂಗ್ರಹವಾದ ಹಣದಲ್ಲಿ ಆಟಗಾರರಿಗೆ ತಲಾ 1 ಲಕ್ಷ ರೂ. ವಿತರಿಸಿದ್ದರು. ಇದರ ಹೊರತಾಗಿ ಆಟಗಾರರಿಗೆ ಬೇರಾವುದೇ ಬಹುಮಾನ ಲಭಿಸಿರಲಿಲ್ಲ. ಆದರೆ ಕೆಲ ಪ್ರಮುಖ ಕಂಪನಿಗಳ ಜಾಹೀರಾತು ಒಪ್ಪಂದಗಳು ಲಭಿಸಿದ್ದವು.

"125 ಕೋಟಿ ರೂ. ದೊಡ್ಡ ಮೊತ್ತ. ಆದರೆ 1983ರಲ್ಲಿ ವಿಶ್ವಕಪ್​ ಗೆದ್ದುಬಂದಾಗ ಹೆಚ್ಚಿನ ಬಹುಮಾನ ಲಭಿಸಿರಲಿಲ್ಲ. ಆಗ ಮಂಡಳಿ ತನ್ನ ಬಳಿ ಹೆಚ್ಚಿನ ಹಣವಿಲ್ಲ ಎಂದಿತ್ತು. ಆದರೆ ಈಗ ಶ್ರೀಮಂತವಾಗಿರುವ ಮಂಡಳಿ ಬಹುಮಾನ ನೀಡಬಹುದಾಗಿದೆ. ಆಗಿನ ತಂಡದ ಕೆಲ ಸದಸ್ಯರಷ್ಟೇ ಈಗಲೂ ಕೆಲಸಗಳನ್ನು ಪಡೆಯುತ್ತಿದ್ದಾರೆ' ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ 1983ರ ವಿಶ್ವಕಪ್​ ವಿಜೇತ ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net