

ಲಂಡನ್: ವಿಶ್ವ ನಂ.1 ಹಾಗೂ ಐದು ಗ್ರಾಂಡ್ ಸ್ಲಾಂ ಪ್ರಶಸ್ತಿ ಒಡತಿ ಇಗಾ ಸ್ವಿಯಾಟೆಕ್ ವಿಂಬಲ್ಡನ್ ಟೆನಿಸ್ ಟೂರ್ನಿಯ ಮೂರನೇ ಸುತ್ತಿನಲ್ಲಿ ಆಘಾತ ಕಂಡಿದ್ದಾರೆ. ಜತೆಗೆ ಎರಡು ಬಾರಿ ರನ್ನರ್ ಅಪ್ ಒನ್ಸ್ ಜಬೇರ್ ಸಹ ನಿರಾಸೆ ಅನುಭವಿಸಿದ್ದಾರೆ. ನಾಲ್ಕನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೇವ್, 9ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಡಿ ಮಿನೊರ್, 14ನೇ ಶ್ರೇಯಾಂಕಿತ ಬೆನ್ ಶೆಲ್ಟನ್ ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ನಾಲ್ಕನೇ ಸುತ್ತಿಗೇರಿದ್ದಾರೆ. ಮಹಿಳಾ ವಿಭಾಗದಲ್ಲಿ ಲಾತ್ವಿಯಾದ ಜೆಲೆನಾ ಒಸ್ತಾಪೆಂಕೊ, ರಷ್ಯಾದ ಅನ್ನಾ ಕಲಿನ್ಸ್ಕಯಾ, ಬಾರ್ಬರೊ ಕ್ರೆಜಿಕೊವಾ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದಾರೆ. ಟೂರ್ನಿಯ 6ನೇ ದಿನವಾದ ಶನಿವಾರ ಬೆಳಗ್ಗೆ ಹಲವು ಪಂದ್ಯಗಳಿಗೆ ಮಳೆ ಅಡಚಣೆ ತಂದಿತು.
ಮಹಿಳಾ ಸಿಂಗಲ್ಸ್ ನ ಮೂರನೇ ಸುತ್ತಿನಲ್ಲಿ ಪೋಲೆಂಡ್‌ನ ಇಗಾ ಸ್ವಿಯಾಟೆಕ್ 6-3, 1-6, 2-6 ಮೂರು ಸೆಟ್‌ಗಳ ಹೋರಾಟದಲ್ಲಿ ಯೂಲಿಯಾ ಪುಟಿನ್ಟ್ಸೆವಾ ಎದುರು ಪರಾಭವಗೊಂಡರು. ಇದರೊಂದಿಗೆ ವಿಶ್ವ ನಂ. 35 ಯೂಲಿಯಾ ಪುಟಿನ್ಟ್ಸೆವಾ, ಇಗಾ ಸ್ವಿಯಾಟೆಕ್ ಅವರ ಸತತ 21 ಪಂದ್ಯಗಳ ಅಜೇಯ ಓಟಕ್ಕೆ ಬ್ರೇಕ್ ಹಾಕಿದ್ದಾರೆ.
ಇನ್ನೊಂದು ಪಂದ್ಯದಲ್ಲಿ ಟುನೀಷಿಯಾದ ಒನ್ಸ್ ಜಬೇರ್ 1-6,6-7 ನೇರ ಸೆಟ್‌ಗಳಿಂದ ಯೂಕ್ರೇನ್‌ನ ಎಲಿನಾ ಸ್ವಿಟೊಲಿನಾ ಎದುರು ಪರಾಭವಗೊಂಡರು. ಇದರೊಂದಿಗೆ ಹಾಲಿ ಚಾಂಪಿಯನ್ ಹಾಗೂ ರನ್ನರ್ ಅಪ್ ಇಬ್ಬರೂ ಟೂರ್ನಿಯಿಂದ ಹೊರಬಿದ್ದಂತಾಗಿದೆ.ಪುರುಷರ ವಿಭಾಗದಲ್ಲಿ ಜರ್ಮನಿಯ ಜ್ವೆರೇವ್ 6-4, 6-4,7-6 (17-15) ರಿಂದ ಆತಿಥೇಯ ಆಟಗಾರ ಕ್ಯಾಮರೂನ್ ನಾರ‌್ರಿ ಅವರನ್ನು ಮಣಿಸಿದರು. ಇದರೊಂದಿಗೆ ಜ್ವೆರೇವ್ ತನ್ನ ಮೊದಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲ್ಲುವ ಓಟವನ್ನು ಮುಂದುವರಿಸಿದ್ದಾರೆ. ಮಳೆಯಿಂದಾಗಿ ಮುಂದೂಡಲ್ಪಟ್ಟಿದ ಪಂದ್ಯದಲ್ಲಿ ಅಮೆರಿಕದ ಬೆನ್ ಶೆಲ್ಟನ್ 6-7,6-2, 6-4, 4-6, 6-2 ರಿಂದ ಕೆನಡಾದ ಡೆನಿಸ್ ಶಪೋವಾಲೋವ್ ಎದುರು 3 ಗಂಟೆ 5 ನಿಮಿಷಗಳ ಕಠಿಣ ಪೈಪೋಟಿಯಲ್ಲಿ ಗೆಲುವು ದಕ್ಕಿಸಿಕೊಂಡರು.
ಡಬಲ್ಸ್‌ನಲ್ಲಿ 2ನೇ ಶ್ರೇಯಾಂಕಿತ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾ ಮ್ಯಾಥ್ಯೂ ಎಬ್ಡೆನ್ ಜೋಡಿ ಎರಡನೇ ಸುತ್ತಿನಲ್ಲಿ ನಿರಾಸೆ ಕಂಡಿದೆ. ಇಂಡೋ-ಆಸೀಸ್ ಜೋಡಿ 3-6, 6-7 (4-7) ರಿಂದ ಜರ್ಮನಿಯ ಕಾನ್ಸ್ಟಾಂಟಿನ್ ಫ್ರಾಂಟ್ಜೆನ್-ಹೆಂಡ್ರಿಕ್ಸ್ ಜೆಬೆನ್ಸ್ ಎದುರು ಸೋಲುಂಡಿತು.