

ನವದೆಹಲಿ: ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಆಹ್ವಾನದ ಮೇರೆಗೆ ಏಷ್ಯಾಕಪ್ ಟೂರ್ನಿಯ ವೇಳೆ ಲಾಹೋರ್ಗೆ ಭೇಟಿ ನೀಡಲಿದ್ದಾರೆ. ಸೆಪ್ಟೆಂಬರ್ 4ರಿಂದ 7ರ ನಡುವೆ ಪಾಕಿಸ್ತಾನಕ್ಕೆ ತೆರಳಲಿರುವ ಅವರಿಬ್ಬರು, ಎರಡು ಪಂದ್ಯಗಳಿಗೆ ಸಾಯಾಗಲಿದ್ದಾರೆ. ಪಿಸಿಬಿ ಆಹ್ವಾನವನ್ನು ಸ್ವೀಕರಿಸಲು ಇವರಿಬ್ಬರು ಬಿಸಿಸಿಐ ಆಡಳಿತ ಮಂಡಳಿಯ ಒಪ್ಪಿಗೆಯನ್ನೂ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಪಾಕಿಸ್ತಾನದಲ್ಲಿ ಏಷ್ಯಾಕಪ್ನ 4 ಪಂದ್ಯಗಳು ನಡೆಯಲಿವೆ. ಆಗಸ್ಟ್ 30ರಂದು ಪಾಕಿಸ್ತಾನ&ನೇಪಾಳ ನಡುವಿನ ಪಂದ್ಯದೊಂದಿಗೆ ಮುಲ್ತಾನ್ನಲ್ಲಿ ಟೂರ್ನಿಗೆ ಚಾಲನೆ ಸಿಗಲಿದೆ. ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಬಿನ್ನಿ, ಶುಕ್ಲಾ ಜತೆಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಕೂಡ ಹಾಜರಾಗಲಿದ್ದಾರೆ. ಬಳಿಕ ಮೂವರೂ ಭಾರತಕ್ಕೆ ಮರಳಲಿದ್ದು, ನಂತರ ಬಿನ್ನಿ ಮತ್ತು ಶುಕ್ಲಾ ವಾಘಾ ಗಡಿಯ ಮೂಲಕ ಲಾಹೋರ್ಗೆ ತೆರಳಲಿದ್ದಾರೆ.
ಸೆ. 4ರಂದು ಲಾಹೋರ್ನ ಗರ್ವರ್ ಹೌಸ್ನಲ್ಲಿ ಪಿಸಿಬಿ ಆಯೋಜಿಸಿರುವ ಔತಣ ಕೂಟದಲ್ಲೂ ಇವರಿಬ್ಬರು ಭಾಗವಹಿಸಲಿದ್ದಾರೆ. ಬಳಿಕ ಸೆ. 5ರಂದು ನಡೆಯಲಿರುವ ಅಫ್ಘಾನಿಸ್ತಾನ-ಶ್ರೀಲಂಕಾ ಮತ್ತು ಸೆ. 6ರಂದು ಪಾಕಿಸ್ತಾನ ತಂಡ ಸೂಪರ್-4 ಹಂತದಲ್ಲಿ ಆಡಲಿರುವ ಮೊದಲ ಪಂದ್ಯವನ್ನು ವೀಕ್ಷಿಸಲಿದ್ದಾರೆ. ಆದರೆ ಈ ವೇಳೆ ಉಭಯ ದೇಶಗಳ ದ್ವಿಪಕ್ಷೀಯ ಕ್ರಿಕೆಟ್ ಪುನರಾರಂಭದ ಬಗ್ಗೆ ಯಾವುದೇ ಚರ್ಚೆ ನಡೆಯುವುದಿಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ.