ಐಪಿಎಲ್​ 17ನೇ ಆವೃತ್ತಿಯ ಉದ್ಘಾಟನಾ ಪಂದ್ಯ, ಫೈನಲ್​ ದಿನಾಂಕ ನಿಗದಿಪಡಿಸಿದ ಬಿಸಿಸಿಐ!

ipl web
Published on

ನವದೆಹಲಿ: ವಿಶ್ವದ ಶ್ರೀಮಂತ ಟಿ20 ಲೀಗ್​ ಎನಿಸಿರುವ ಐಪಿಎಲ್​ ಟೂರ್ನಿಯ 17ನೇ ಆವೃತ್ತಿಯನ್ನು ಮಾರ್ಚ್​ 22ರಿಂದ ಮೇ 26ರವರೆಗೆ ನಡೆಸಲು ಬಿಸಿಸಿಐ ಯೋಜನೆ ಹಾಕಿಕೊಂಡಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಯ ದಿನಾಂಕ ಪ್ರಕಟಗೊಂಡ ಬಳಿಕ ಬಿಸಿಸಿಐ, ಐಪಿಎಲ್​ ವೇಳಾಪಟ್ಟಿಯನ್ನು ಅಂತಿಮಗೊಳಿಸಲಿದೆ. ಚುನಾವಣೆಯ ನಡುವೆಯೂ ಸಂಪೂರ್ಣ ಐಪಿಎಲ್​ ಟೂರ್ನಿಯನ್ನು ಭಾರತದಲ್ಲೇ ಸಂಟಿಸಲು ಬಿಸಿಸಿಐ ಯೋಜಿಸಿದೆ.

ವೆಸ್ಟ್​ ಇಂಡೀಸ್​-ಅಮೆರಿಕದಲ್ಲಿ ಟಿ20 ವಿಶ್ವಕಪ್​ ಟೂರ್ನಿ ಜೂನ್​ 1ರಿಂದ ನಡೆಯಲಿದೆ. ಅದಕ್ಕೆ 5 ದಿನ ಮುನ್ನ ಐಪಿಎಲ್​ ಟೂರ್ನಿ ಮುಕ್ತಾಯಗೊಳ್ಳಲಿದೆ. ಆದರೆ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡ ಜೂನ್​ 5ರಂದು ತನ್ನ ಮೊದಲ ಪಂದ್ಯ ಆಡಲಿದೆ. ಅಂದರೆ ಭಾರತದ ಆಟಗಾರರಿಗೆ ವಿಶ್ವಕಪ್​ ಸಿದ್ಧತೆಗೆ 9 ದಿನಗಳ ಕಾಲಾವಕಾಶ ಲಭಿಸಲಿದೆ.

ಈ ನಡುವೆ ಐಪಿಎಲ್​ಗೆ ಸಂಪೂರ್ಣವಾಗಿ ತನ್ನ ಆಟಗಾರರನ್ನು ಬಿಟ್ಟುಕೊಡುವ ಬಗ್ಗೆ ಹಲವು ದೇಶಗಳ ಕ್ರಿಕೆಟ್​ ಮಂಡಳಿಗಳು ಈಗಾಗಲೆ ಬಿಸಿಸಿಐಗೆ ಭರವಸೆ ನೀಡಿವೆ ಎನ್ನಲಾಗಿದೆ. ಆದರೂ ಕೆಲವು ಪ್ರಮುಖ ವಿದೇಶಿ ಆಟಗಾರರು, ಟಿ20 ವಿಶ್ವಕಪ್​ ಸಿದ್ಧತೆಗಾಗಿ ತಾವೇ ಖುದ್ದಾಗಿ ಐಪಿಎಲ್​ನಿಂದ ಬೇಗನೆ ನಿರ್ಗಮಿಸಲು ಮುಂದಾದರೆ ಬಿಸಿಸಿಐಗೆ ಅದನ್ನು ತಡೆಯಲು ಸಾಧ್ಯವಾಗದು. ಸದ್ಯಕ್ಕೆ ಬಿಸಿಸಿಐಗೆ ಮಾತ್ರ, ಚುನಾವಣೆಯ ನಡುವೆಯೂ ಭಾರತದಲ್ಲೇ ಸಂಪೂರ್ಣ ಐಪಿಎಲ್​ ಆಯೋಜಿಸುವುದೇ ಪ್ರಮುಖ ಸವಾಲು ಎನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net