

ನವದೆಹಲಿ: ಇಂಡಿಯನ್ ಪ್ರಿಮಿಯರ್ ಲೀಗ್ 2024ರ ಆವೃತ್ತಿ ಅತ್ಯಂತ ಯಶಸ್ವಿ ಮುಕ್ತಾಯ ಪಡೆದ ಬೆನ್ನಲ್ಲೇ ಇದೀಗ ಮುಂಬರುವ 18ನೇ ಸೀಸನ್ಗೆ ಎಲ್ಲರ ಚಿತ್ತ ಮೂಡಿದೆ. ಅದರಲ್ಲೂ 2025ರ ಐಪಿಎಲ್ ಬಹಳ ವಿಶೇಷತೆಯಿಂದ ಕೂಡಿರಲಿದ್ದು, ಹಲವು ತಂಡಗಳ ನಾಯಕರ ಜತೆ ಸ್ಟಾರ್ ಆಟಗಾರರು ಬದಲಾವಣೆಗೊಳ್ಳಲಿದ್ದಾರೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಪರ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಕಣಕ್ಕಿಳಿಯಲಿದ್ದಾರಾ ಅಥವಾ ನಿವೃತ್ತಿ ಪಡೆದು, ದಿಗ್ಗಜರ ಸಾಲಿಗೆ ಸೇರಲಿದ್ದಾರೆಯೇ ಎಂಬುದೇ ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಕಾಡುತ್ತಿರುವ ದೊಡ್ಡ ಪ್ರಶ್ನೆ. ಈ ಸುದ್ದಿ ಒಂದೆಡೆಯಾದರೆ ಕ್ರಿಕೆಟ್ ವೃತ್ತಿಯಿಂದ ರಿಟೈಡ್ ಆದ ಮಾಜಿ ಕ್ರಿಕೆಟಿಗರಿಗೆ ಪ್ರತ್ಯೇಕವಾಗಿ ಐಪಿಎಲ್ ಟೂರ್ನಿ ಆಯೋಜಿಸಲಾಗುವುದು ಎಂಬ ವರದಿ ಮತ್ತೊಂದೆಡೆ. ಈ ಸಂಗತಿ ಇದೀಗ ಕ್ರಿಕೆಟ್ ಪ್ರಿಯರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ನಿವೃತ್ತಿ ಹೊಂದಿದ ಕ್ರಿಕೆಟಿಗರಿಗೆ ಪ್ರತ್ಯೇಕ ಲೀಗ್ ಆಯೋಜನೆ ಮಾಡುವಂತೆ ಇತ್ತೀಚೆಗಷ್ಟೇ ಮಾಜಿ ಆಟಗಾರರ ತಂಡವೊಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ಖುದ್ದಾಗಿ ಭೇಟಿಯಾಗಿ, ಈ ವಿಷಯವನ್ನು ಪ್ರಸ್ತಾಪಿಸಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಶೀಘ್ರವೇ ಭಾರತೀಯ ಕ್ರಿಕೆಟ್ ಮಂಡಳಿ ರಿಟೈಡ್ ಕ್ರಿಕೆಟಿಗರಿಗೆ ಐಪಿಎಲ್ ಆವೃತ್ತಿ ಪ್ರಾರಂಭಿಸಲು ಎದುರುನೋಡುತ್ತಿದೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಈ ಪ್ರಸ್ತಾಪ ಒಪ್ಪಿಗೆ ಆದಲ್ಲಿ 2025ರಿಂದಲೇ ಮೊದಲ ಆವೃತ್ತಿ ಆರಂಭವಾಗಬಹುದು ಎಂಬ ಮಾತುಗಳು ಕೂಡ ಕೇಳಿಬಂದಿವೆ.
ಈ ಹಿಂದಿನಿಂದಲೂ ಮಾಜಿ ದಿಗ್ಗಜ ಕ್ರಿಕೆಟಿಗರಿಗೆಂದೇ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್, ಲೆಜೆಂಡ್ಸ್ ಲೀಗ್ ಕ್ರಿಕೆಟ್, ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಮತ್ತು ಗ್ಲೋಬಲ್ ಲೆಜೆಂಡ್ಸ್ ಲೀಗ್ ಸೇರಿದಂತೆ ಹೆಸರಾಂತ ಟೂರ್ನಿಗಳನ್ನು ನಡೆಸಲಾಗುತ್ತಿದೆ. ಇದೆಲ್ಲದರ ನಡುವೆ ಈಗ ನಿವೃತ್ತಿ ಪಡೆದ ಆಟಗಾರರಿಗೂ ಐಪಿಎಲ್ ಆವೃತ್ತಿ ಆಯೋಜಿಸುವ ಪ್ರಸ್ತಾಪ ಸದ್ಯ ಬಿಸಿಸಿಐ ಅಂಗಳದಲ್ಲಿ ಬಹಳ ಜೋರಾಗಿಯೇ ಚರ್ಚೆಯಾಗುತ್ತಿದೆ.
ಅಂದುಕೊಂಡಂತೆ ಬಿಸಿಸಿಐ ಏನಾದರೂ 2025ರ ವೇಳೆಗೆ ಐಪಿಎಲ್ ಆಯೋಜಿಸಿದರೆ, ಈ ಲೀಗ್ನಲ್ಲಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಇರ್ಫಾಣ್ ಪಠಾಣ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ರಾಹುಲ್ ದ್ರಾವಿಡ್, ಕ್ರಿಸ್ ಗೇಲ್, ವೀರೇಂದ್ರ ಸೆಹ್ವಾಗ್, ಎಬಿಡಿ ವಿಲಿಯರ್ಸ್, ಸುರೇಶ್ ರೈನಾ, ಡೇವಿಡ್ ವಾರ್ನರ್ ಸೇರಿದಂತೆ ಇನ್ನೂ ಹಲವರು ಮೈದಾನಕ್ಕಿಳಿಯುವುದು ಖಚಿತ. ಅಕಸ್ಮಾತ್ ಧೋನಿ ನಿವೃತ್ತಿ ಘೋಷಿಸಿದರೆ, ಅವರು ಸಹ ಈ ಲೀಗ್ ಸೇರಬಹುದು,(ಏಜೆನ್ಸೀಸ್).