

ನವದೆಹಲಿ: ವಿಶ್ವದ ಶ್ರೀಮಂತ ಟಿ20 ಕ್ರಿಕೆಟ್ ಲೀಗ್ ಎನಿಸಿರುವ ಐಪಿಎಲ್ನ ಶೀರ್ಷಿಕೆ ಪ್ರಾಯೋಜಕತ್ವದಿಂದ ಚೀನಾದ ಕಂಪನಿಗಳಿಗೆ ಬಿಸಿಸಿಐ ಪರೋಕ್ಷ ನಿಷೇಧ ಹೇರಿದೆ. ಮುಂದಿನ 5 ವರ್ಷಗಳ ಐಪಿಎಲ್ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಈಗಾಗಲೆ ಟೆಂಡರ್ ಪ್ರಕ್ರಿಯೆ ಆರಂಭಿಸಿರುವ ಬಿಸಿಸಿಐ, ಭಾರತದ ಜತೆ ಸ್ನೇಹ ಸಂಬಂಧ ಹೊಂದಿರದ ದೇಶದ ಕಂಪನಿಗಳಿಗೆ ಪ್ರಾಯೋಜಕತ್ವ ಹಕ್ಕು ನೀಡುವುದಿಲ್ಲ ಎಂಬ ಷರತ್ತು ವಿಧಿಸಿದೆ. ಇದರಿಂದಾಗಿ, ಭಾರತದ ಜತೆಗೆ ಸದಾ ಗಡಿ ಕ್ಯಾತೆ ತೆಗೆಯುತ್ತಿರುವ ಚೀನಾದ ಕಂಪನಿಗಳು ಬಿಡ್ನಿಂದ ದೂರ ಉಳಿಯುವಂತಾಗಿದೆ. 2024ರಿಂದ 2028ರವರೆಗಿನ ಐಪಿಎಲ್ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಬಿಸಿಸಿಐ ಕನಿಷ್ಠ ವಾರ್ಷಿಕ 360 ಕೋಟಿ ರೂ. ಬಿಡ್ ಮೌಲ್ಯ ನಿಗದಿಪಡಿಸಿದೆ.
ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಬಿಡ್ ಸಲ್ಲಿಸುವ ಕಾಪೋರ್ರೇಟ್ ಕಂಪನಿಗಳು ಭಾರತದ ಜತೆ ಸ್ನೇಹಸಂಬಂಧ ಹೊಂದಿರದ ದೇಶಗಳಿಗೆ ಸೇರಿರಬಾರದು. ಅಲ್ಲದೆ ಭಾರತದ ಜತೆ ಸ್ನೇಹ ಹೊಂದಿರದ ದೇಶದ ಉದ್ಯಮಿಗಳು ಪಾಲುದಾರರಾಗಿರುವ ಕಂಪನಿಗಳೂ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ ಎಂದು ಬಿಸಿಸಿಐ ಷರತ್ತು ವಿಧಿಸಿದೆ. ಇದೇ ಕಾರಣಕ್ಕಾಗಿ ಬಿಡ್ ಸಲ್ಲಿಸುವ ಕಂಪನಿಗಳು ಅಥವಾ ಅದರ ಮಾತೃಕಂಪನಿಗಳು ತನ್ನ ಕಂಪನಿಯ ಪಾಲುದಾರರ ವಿವರಗಳನ್ನೂ ಬಿಸಿಸಿಐಗೆ ಸಲ್ಲಿಸಬೇಕಾಗಿದೆ.
ವಿವೋ ಪ್ರಕರಣ ಕಾರಣ
ಚೀನಾದ ಮೊಬೈಲ್ ಕಂಪನಿ ವಿವೋಗೆ ಈ ಹಿಂದೆ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ನೀಡಿದಾಗ ಬಿಸಿಸಿಐ ಎದುರಿಸಿದ ಸಂಕಷ್ಟಗಳು ಈಗಿನ ರ್ನಿಬಂಧಕ್ಕೆ ಕಾರಣವಾಗಿದೆ. 2018ರಿಂದ 2022ರವರೆಗೆ ವಿವೋ, ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಪಡೆದಿತ್ತು. ಆದರೆ, 2020ರಲ್ಲಿ ಗಡಿ ಗಲಾಟೆಯಲ್ಲಿ ಚೀನಾ ಸೈನಿಕರು ಭಾರತದ 20 ಸೈನಿಕರನ್ನು ಹತ್ಯೆ ಮಾಡಿದಾಗ ವಿವೋ ವಿರುದ್ಧವೂ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದಾಗಿ ಬಿಸಿಸಿಐ, ವಿವೋ ಕಂಪನಿಯನ್ನು ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದಿಂದ ಅರ್ಧದಲ್ಲೇ ಕೈಬಿಡಬೇಕಾಗಿ ಬಂದಿತ್ತು. ನಂತರದಲ್ಲಿ ತುರ್ತಾಗಿ "ಡ್ರೀಮ್11' ಜತೆ ಕಡಿಮೆ ಮೊತ್ತದ ಒಪ್ಪಂದ ಮಾಡಿಕೊಳ್ಳಬೇಕಾದ ಹಿನ್ನಡೆಯನ್ನು ಬಿಸಿಸಿಐ ಎದುರಿಸಿತ್ತು. ಹೀಗಾಗಿ ಬಿಸಿಸಿಐ ಈ ಬಾರಿ ಪ್ರಾಯೋಜಕತ್ವ ಹಕ್ಕು ವಿತರಿಸುವಾಗಲೇ ಎಚ್ಚರಿಕೆ ವಹಿಸಿದೆ.
ಫ್ಯಾಂಟಸಿ ಗೇಮ್, ಬೆಟ್ಟಿಂಗ್, ಮದ್ಯ ಕಂಪನಿಗಳಿಗೂ ರ್ನಿಬಂಧ: ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಫ್ಯಾಂಟಸಿ ಗೇಮ್ಸ್, ಕ್ರೀಡಾ ಉಡುಪುಗಳು, ಕ್ರಿಪ್ಟೋಕರೆನ್ಸಿ ಎಕ್ಸ್ಚೇಂಜ್, ಮದ್ಯ, ಬೆಟ್ಟಿಂಗ್ ಕಂಪನಿಗಳೂ ಬಿಡ್ ಸಲ್ಲಿಸುವಂತಿಲ್ಲ ಎಂದು ಬಿಸಿಸಿಐ ಷರತ್ತು ವಿಧಿಸಿದೆ. ಬೆಟ್ಟಿಂಗ್ ಕಂಪನಿಗಳ ಜತೆಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಂಬಂಧ ಹೊಂದಿರುವ ಕಂಪನಿಗಳೂ ಬಿಡ್ಡಿಂಗ್ ಸಲ್ಲಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಬಿಸಿಸಿಐ ರ್ನಿಬಂಧಿಸಿರುವ ಕಂಪನಿಗಳ ಪೈಕಿ ಕ್ರೀಡಾ ಉಡುಪುಗಳ ಕಂಪನಿಗಳನ್ನೂ ದೂರವಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.
ಮೌರಿಷಸ್ ಮತ್ತು ಬ್ರಿಟಿಷ್ ವರ್ಜಿನ್ ಐಸ್ಲ್ಯಾಂಡ್ನಂಥ ತೆರಿಗೆ ವಂಚಕರ ಪಾಲಿಗೆ ನೆಚ್ಚಿನ ದೇಶಗಳಿಂದ ವ್ಯವಹಾರ ನಡೆಸುವ ಕಂಪನಿಗಳೂ ಬಿಡ್ಡಿಂಗ್ನಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಬಿಸಿಸಿಐ ತಿಳಿಸಿದೆ.
ಬಿಸಿಸಿಐ 5 ಲಕ್ಷ ರೂ. ಮೌಲ್ಯದ ಟೆಂಡರ್ ದಾಖಲೆಪತ್ರಗಳನ್ನು ಜನವರಿ 8ರವರೆಗೂ ವಿತರಿಸಲಿದ್ದು, ಜನವರಿ 13 ಮತ್ತು 14ರಂದು ಬಿಡ್ಡಿಂಗ್ ಪ್ರಕ್ರಿಯೆಯನ್ನು ನಡೆಸುವ ನಿರೀಕ್ಷೆ ಇದೆ.