

ಮುಂಬೈ: ಭಾರತದಲ್ಲಿ ಮುಂದಿನ 5 ವರ್ಷಗಳ ಕಾಲ ನಡೆಯಲಿರುವ ಕ್ರಿಕೆಟ್ ಪಂದ್ಯಗಳ ನೇರಪ್ರಸಾರದ ಹಕ್ಕು ಮಾರಾಟಕ್ಕೆ ಬಿಸಿಸಿಐ ಸಜ್ಜಾಗಿದ್ದು, 6 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬಿಡ್ ಸಲ್ಲಿಕೆಯಾಗುವ ನಿರೀೆಯಲ್ಲಿದೆ. ಪ್ರತಿ ಪಂದ್ಯಕ್ಕೆ ಕನಿಷ್ಠ 60 ಕೋಟಿ ರೂ. ಮೊತ್ತದ ಬಿಡ್ ನಿರೀಕ್ಷೆ ಹೊಂದಿದೆ.
ಬಿಸಿಸಿಐ ಇದೇ ಮೊದಲ ಬಾರಿಗೆ ಟಿವಿ ಮತ್ತು ಡಿಜಿಟಲ್ ಪ್ರಸಾರ ಹಕ್ಕುಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಿದೆ. ಐಪಿಎಲ್ನಲ್ಲಿ ಇದೇ ರೀತಿಯ ತಂತ್ರ ಅನುಸರಿಸಿ ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ ಈ ಬಾರಿ ಟೀಮ್ ಇಂಡಿಯಾದ ಪಂದ್ಯಗಳಿಗೂ ಇದನ್ನೇ ಅಳವಡಿಸಿಕೊಳ್ಳಲಾಗಿದೆ.
ಕಳೆದ ವರ್ಷ ಐಪಿಎಲ್ ಪ್ರಸಾರ ಹಕ್ಕು ಬರೋಬ್ಬರಿ 48,490 ಕೋಟಿ ರೂ.ಗಳಿಗೆ ಮಾರಾಟವಾಗಿತ್ತು. ಅಂದರೆ ಪ್ರತಿ ಪಂದ್ಯದ ಮೌಲ್ಯ 118 ಕೋಟಿ ರೂ. ಆಗಿತ್ತು. ಈ ಬಾರಿ ಟೀಮ್ ಇಂಡಿಯಾದ ಪಂದ್ಯವೊಂದು 90 ಕೋಟಿ ರೂ. ಮೌಲ್ಯ ತಲುಪಬಹುದು ಎಂಬ ಲೆಕ್ಕಾಚಾರವಿದೆ.
ಬಿಸಿಸಿಐ 2018ರಲ್ಲಿ ಭಾರತ ತಂಡದ 5 ವರ್ಷಗಳ ಪ್ರಸಾರ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ಗೆ 6,138.1 ಕೋಟಿ ರೂ.ಗೆ (102 ಪಂದ್ಯ) ನೀಡಿತ್ತು. ಅಂದರೆ ಆಗಲೂ ಪ್ರತಿ ಪಂದ್ಯದ ಮೌಲ್ಯ 60.18 ಕೋಟಿ ರೂ. ಆಗಿತ್ತು. ವಿಶ್ವಕಪ್ ಪೂರ್ವಭಾವಿಯಾಗಿ ಸೆಪ್ಟೆಂಬರ್ 22ರಿಂದ ಪ್ರವಾಸಿ ಆಸ್ಟ್ರೆಲಿಯಾ ವಿರುದ್ಧ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಯೊಂದಿಗೆ ಹೊಸ ಪ್ರಸಾರ ಹಕ್ಕಿನ ಅವಧಿ ಶುರುವಾಗಲಿದೆ.
ತ್ರಿಕೋನ ಸ್ಪರ್ಧೆ
ಪ್ರಸಾರ ಹಕ್ಕು ಖರೀದಿಗೆ ಡಿಸ್ನಿ ಸ್ಟಾರ್, ಸೋನಿ ಸ್ಪೋರ್ಟ್ಸ್ ಜತೆಗೆ ರಿಲಯನ್ಸ್ ಗ್ರೂಪ್ನ ವಯಾಕಾಮ್18 ರೇಸ್ನಲ್ಲಿವೆ. ಡಿಸ್ನಿ ಸ್ಟಾರ್ ಭಾರತದಲ್ಲಿನ ಪ್ರಸಾರ ಹಕ್ಕನ್ನು ತನ್ನಲ್ಲಿಯೇ ಉಳಿಸಿಕೊಳ್ಳುವ ಹಂಬಲದಲ್ಲಿದ್ದರೆ, ವಯಾಕಾಮ್18 ಡಿಜಿಟಲ್ ಹಕ್ಕುಗಳ ಖರೀದಿಗೆ ಹೆಚ್ಚಿನ ಪೈಪೋಟಿ ನಡೆಸಲಿದೆ. ಇತ್ತೀಚೆಗೆ ಐಸಿಸಿಯಿಂದ ಪ್ರಸಾರ ಹಕ್ಕು ಪಡೆದುಕೊಂಡಿರುವ ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ ಈಗ ಬಿಸಿಸಿಐನಿಂದಲೂ ಹಕ್ಕು ಬಾಚಿಕೊಳ್ಳುವ ತವಕದಲ್ಲಿದೆ.
*ಪ್ರಸಾರ ಹಕ್ಕು ಅವಧಿ: 2023 ಸೆಪ್ಟೆಂಬರ್-2028 ಮಾರ್ಚ್
*ಪಂದ್ಯಗಳು: 88 (25 ಟೆಸ್ಟ್, 27 ಏಕದಿನ, 36 ಟಿ20).
*ರೇಸ್ನಲ್ಲಿರುವವರು: ಡಿಸ್ನಿ ಸ್ಟಾರ್, ಸೋನಿ ಸ್ಪೋರ್ಟ್ಸ್, ವಯಾಕಾಮ್18
*ಮೂಲಬೆಲೆ (ಪ್ರತಿ ಪಂದ್ಯಕ್ಕೆ): ಒಟ್ಟು 45 ಕೋಟಿ ರೂ.
ಪ್ಯಾಕೇಜ್ ಎ: ಉಪಖಂಡದ ಟಿವಿ ಪ್ರಸಾರ ಹಕ್ಕು: 20 ಕೋಟಿ ರೂ.
ಪ್ಯಾಕೇಜ್ ಬಿ: ಉಪಖಂಡದ ಡಿಜಿಟಲ್ ಮತ್ತು ಶೇಷ ವಿಶ್ವದ ಟಿವಿ-ಡಿಜಿಟಲ್ ಹಕ್ಕು: 25 ಕೋಟಿ ರೂ.
ಕನಿಷ್ಠ 60 ಕೋಟಿ ರೂ. ಬಿಡ್ ಸಲ್ಲಿಸದಿದ್ದರೆ ಪ್ರಕ್ರಿಯೆ ರದ್ದು!
ಬಿಸಿಸಿಐ ಪ್ರತಿ ಪಂದ್ಯಕ್ಕೆ 45 ಕೋಟಿ ರೂ. ಮೂಲಬೆಲೆ ನಿಗದಿಪಡಿಸಿದ್ದು, ಒಟ್ಟಾರೆ ಕನಿಷ್ಠ 60 ಕೋಟಿ ರೂ. ಮೊತ್ತದ ಬಿಡ್ ಸಲ್ಲಿಕೆಯಾಗದಿದ್ದರೆ ಇಡೀ ಪ್ರಕ್ರಿಯೆಯನ್ನೇ ರದ್ದುಗೊಳಿಸುವ ಅಧಿಕಾರವನ್ನೂ ಬಿಸಿಸಿಐ ತನ್ನ ಬಳಿ ಇಟ್ಟುಕೊಂಡಿದೆ. ಆದರೆ ಕೆಲ ಲೆಕ್ಕಾಚಾರಗಳ ಪ್ರಕಾರ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ರೂ. ದಾಟಲಿದೆ. ಯಾಕೆಂದರೆ, ಇತ್ತೀಚೆಗೆ ಇಂಗ್ಲೆಂಡ್ ಮತ್ತು ಆಸ್ಟ್ರೆಲಿಯಾದ ಕ್ರಿಕೆಟ್ ಮಂಡಳಿಗಳೇ ಭಾರತ ವಿರುದ್ಧದ ಪಂದ್ಯವೊಂದರ ಪ್ರಸಾರ ಹಕ್ಕನ್ನು 80 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಮಾರಾಟ ಮಾಡಿತ್ತು.
ಆಸೀಸ್ ವಿರುದ್ಧ ಗರಿಷ್ಠ 21 ಪಂದ್ಯ
ಐಸಿಸಿ ವೇಳಾಪಟ್ಟಿಯ ಅನ್ವಯ ಭಾರತ ತಂಡ ಮುಂದಿನ 5 ವರ್ಷಗಳಲ್ಲಿ ತವರಿನಲ್ಲಿ 25 ಟೆಸ್ಟ್, 27 ಏಕದಿನ ಮತ್ತು 36 ಟಿ20 ಸಹಿತ ಒಟ್ಟು 88 ಪಂದ್ಯಗಳನ್ನು ಆಡಲಿದೆ. ಈ ಪೈಕಿ ಆಸ್ಟ್ರೆಲಿಯಾ ವಿರುದ್ಧ ಗರಿಷ್ಠ 21 ಪಂದ್ಯ ಆಡಲಿದ್ದರೆ, ಇಂಗ್ಲೆಂಡ್ ವಿರುದ್ಧ 18, ದಕ್ಷಿಣ ಆಫ್ರಿಕಾ ವಿರುದ್ಧ 10, ನ್ಯೂಜಿಲೆಂಡ್ ವಿರುದ್ಧ 11 ಪಂದ್ಯ ಆಡಲಿದೆ. ಶ್ರೀಲಂಕಾ ವಿರುದ್ಧ ಕೇವಲ 6 ಪಂದ್ಯ ಆಡಲಿದ್ದರೆ, ವೆಸ್ಟ್ ಇಂಡೀಸ್ ವಿರುದ್ಧ 10, ಅಫ್ಘಾನಿಸ್ತಾನ ವಿರುದ್ಧ 7 ಮತ್ತು ಬಾಂಗ್ಲಾದೇಶ ವಿರುದ್ಧ 5 ಪಂದ್ಯ ಆಡಲಿದೆ.