

ನವದೆಹಲಿ: ಐಪಿಎಲ್ ನಂತರದಲ್ಲಿ ಜೂನ್ನಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಆಡಿದ ಬಳಿಕ ಸಂಪೂರ್ಣ ವಿಶ್ರಾಂತಿಯಲ್ಲಿದ್ದ ಟೀಮ್ ಇಂಡಿಯಾದ ವೇಗಿ ಮೊಹಮದ್ ಶಮಿ ಈಗ ಹೊಸ ಅವತಾರದೊಂದಿಗೆ ಏಷ್ಯಾಕಪ್ ತಂಡವನ್ನು ಕೂಡಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಕೂದಲು ಉದುರುವ ಸಮಸ್ಯೆ ಹೊಂದಿದ್ದ ಶಮಿ ಈಗ ದುಬಾರಿ ವೆಚ್ಚದಲ್ಲಿ ತಲೆಗೂದಲಿನ ಕಸಿ ಮಾಡಿಸಿಕೊಂಡು ಮರಳಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
32 ವರ್ಷದ ಮೊಹಮದ್ ಶಮಿ ಅವರ ತಲೆಗೂದಲು ಇತ್ತೀಚೆಗೆ ಭಾರಿ ಪ್ರಮಾಣದಲ್ಲಿ ಉದುರಲು ಆರಂಭಿಸಿತ್ತು. ಇದರಿಂದಾಗಿ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಅವರ ಜನ್ಮದಿನ ವೇಳೆ ಸಹ-ಆಟಗಾರ ರಿಷಭ್ ಪಂತ್, 'ನಿಮ್ಮ ಕೂದಲು ಮತ್ತು ವಯಸ್ಸು ಎರಡೂ ವೇಗವಾಗಿ ಹೋಗುತ್ತಿದೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಲೆಳೆದಿದ್ದರು. ಇದರಿಂದಾಗಿ ಬೇಸತ್ತು ಶಮಿ ತಲೆಗೂದಲು ಕಸಿಗೆ ಮೊರೆ ಹೋಗಿದ್ದಾರೆ.
ಯುಜೆನಿಕ್ಸ್ ಹೇರ್ ಸೈನ್ಸಸ್ನ ವೈದ್ಯರಿಂದ ಶಮಿ ತಲೆಗೂದಲು ಕಸಿ ಮಾಡಿಸಿಕೊಂಡಿದ್ದಾರೆ. ಡೈರೆಕ್ಟ್ ಹೇರ್ ಟ್ರಾನ್ಸ್ಪ್ಲಂಟ್ (ಡಿಎಚ್ಟಿ) ತಂತ್ರಜ್ಞಾನದ ಮೂಲಕ ಶಮಿ ತಲೆಗೂದಲು ಕಸಿ ಮಾಡಲಾಗಿದೆ. ಇದು ಸುಮಾರು ಒಂದೂವರೆ ಲಕ್ಷ ರೂ. ಮೊತ್ತದ ಚಿಕಿತ್ಸೆಯಾಗಿದೆ ಎನ್ನಲಾಗಿದೆ. ಕಳೆದ ವೆಸ್ಟ್ ಇಂಡೀಸ್ ಪ್ರವಾಸ ಮತ್ತು ಐರ್ಲೆಂಡ್ ಪ್ರವಾಸಗಳಲ್ಲಿ ಶಮಿ ಆಡಿರಲಿಲ್ಲ. ಇದೇ ಸಮಯವನ್ನು ಅವರು ತಲೆಗೂದಲು ಕಸಿ ಚಿಕಿತ್ಸೆಗೆ ಬಳಸಿಕೊಂಡಿದ್ದಾರೆ. ಬದಲಾದ ಲುಕ್ನಲ್ಲಿ ಶಮಿ ಅವರಿಂದ ಇನ್ನಷ್ಟು ಹರಿತವಾದ ದಾಳಿಯ ನಿರೀಕ್ಷೆ ಕ್ರಿಕೆಟ್ ಪ್ರೇಮಿಗಳದ್ದಾಗಿದೆ.