

ಬೆಂಗಳೂರು: ಕರ್ನಾಟಕ ತಂಡದ ಮಾಜಿ ನಾಯಕ ಹಾಗೂ ಅನುಭವಿ ಬ್ಯಾಟರ್ ಮನೀಷ್ ಪಾಂಡೆ ನಾಯಕತ್ವದ ಹುಬ್ಬಳ್ಳಿ ಟೈಗರ್ಸ್ ತಂಡ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡು ಬೀಗಿತು. ಬಿರುಸಿನ 50 ರನ್ ಸಿಡಿಸಿ ಹುಬ್ಬಳ್ಳಿ ತಂಡ ಬೃಹತ್ ಮೊತ್ತ ಪೇರಿಸಲು ನೆರವಾದ ಮನೀಷ್ ಪಾಂಡೆ ನಂತರ ಅದ್ಭುತ ನಿರ್ವಹಣೆಯ ಮೂಲಕವೂ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದರು. ಮೈಸೂರು ವಾರಿಯರ್ಸ್ ವಿರುದ್ಧದ ಫೈನಲ್ ಪಂದ್ಯದ ನಿರ್ಣಾಯಕ ಕೊನೇ ಓವರ್ನಲ್ಲಿ ಮನೀಷ್ ಪಾಂಡೆ ಬೌಂಡರಿ ಗೆರೆ ಬಳಿಕ ಅದ್ಭುತವಾಗಿ ಸಿಕ್ಸರ್ ತಡೆದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಹುಬ್ಬಳ್ಳಿ ತಂಡ 8 ವಿಕೆಟ್ಗೆ 203 ರನ್ ಪೇರಿಸಿದರೆ, ಪ್ರತಿಯಾಗಿ 19 ಓವರ್ಗಳಲ್ಲಿ 6 ವಿಕೆಟ್ಗೆ 192 ರನ್ ಗಳಿಸಿದ ಮೈಸೂರಿಗೆ ಕೊನೇ ಓವರ್ನಲ್ಲಿ 12 ರನ್ ಬೇಕಿತ್ತು. ಆಗ ಯುವ ವೇಗಿ ಮನ್ವಂತ್ ಕುಮಾರ್ ಮೊದಲ ಎಸತದಲ್ಲಿ ವಿಕೆಟ್ ಕಬಳಿಸಿದರೆ, 2ನೇ ಎಸೆತದಲ್ಲಿ 1 ಲೆಗ್ಬೈ ರನ್ ಬಿಟ್ಟುಕೊಟ್ಟರು. ಉಳಿದ 4 ಎಸೆತಗಳಲ್ಲಿ 11 ರನ್ ಬೇಕಿದ್ದಾಗ, ಓವರ್ನ 3ನೇ ಎಸೆತದಲ್ಲಿ ಎಡಗೈ ಬ್ಯಾಟರ್ ಜೆ. ಸುಚಿತ್ ಹೊಡೆದ ಚೆಂಡು ಲಾಂಗ್&ಆ್ ಬೌಂಡರಿ ಗೆರೆ ದಾಟಿ ಬಹುತೇಕ ಸಿಕ್ಸರ್ ಆಗುವುದರತ್ತ ಸಾಗಿತ್ತು. ಆಗ ಮನೀಷ್ ಪಾಂಡೆ ಗಾಳಿಯಲ್ಲಿ ಹಾರಿ ಅದ್ಭುತವಾಗಿ ಚೆಂಡನ್ನು ತಡೆದು ಬೌಂಡರಿ ಗೆರೆಯ ಒಳಗೆ ಬೀಳಿಸಿದರು. ಬ್ಯಾಟರ್ಗಳು ಆಗ ಒಂದು ರನ್ ಮಾತ್ರ ಓಡಿದರು. ಈ ಮೂಲಕ ಮನೀಷ್ ಪಾಂಡೆ ತಂಡಕ್ಕೆ 5 ರನ್ ರಸಿಕೊಟ್ಟರು. ಅಲ್ಲದೆ ಜೆ. ಸುಚಿತ್ಗೆ ಸ್ಟ್ರೈಕ್ ಕೂಡ ತಪ್ಪಿತು. 4ನೇ ಎಸೆತದಲ್ಲಿ ಒಂದು ಬೈ ರನ್ ಕಸಿದ ಬಾಲಂಗೋಚಿ ಮೋನಿಷ್ ರೆಡ್ಡಿ ಮತ್ತೆ ಸುಚಿತ್ಗೆ ಸ್ಟ್ರೈಕ್ ನೀಡಿದರು. ಕೊನೇ 2 ಎಸೆತಗಳಲ್ಲಿ 9 ರನ್ ಕಸಿಯಬೇಕಾದ ಒತ್ತಡದಲ್ಲಿ, 5ನೇ ಎಸೆತಕ್ಕೆ ಸುಚಿತ್ ಔಟಾದರೆ, ಕೊನೇ ಎಸೆತದಲ್ಲಿ ಮತ್ತೆ ರನ್ ಬರಲಿಲ್ಲ. ಈ ಮೂಲಕ ಹುಬ್ಬಳ್ಳಿ ಟೈಗರ್ಸ್ 8 ರನ್ಗಳಿಂದ ಗೆದ್ದಿತು. ಮನೀಷ್ ಪಾಂಡೆ ಸಿಕ್ಸರ್ ರಸಿದ್ದು ಹುಬ್ಬಳ್ಳಿಗೆ ರನ್ ಮಾತ್ರ ಉಳಿಸಿದ್ದಲ್ಲ, ಮೈಸೂರಿನ ಮೇಲಿನ ಒತ್ತಡವನ್ನೂ ಹೆಚ್ಚಿಸಿತು. ಹೀಗಾಗಿ ಮನೀಷ್ ಅದ್ಭುತ ಫೀಲ್ಡಿಂಗೇ ಗೆಲುವಿಗೆ ಕಾರಣ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.