2022ರ ಐಪಿಎಲ್‌ಗೆ ಎರಡಲ್ಲ, ಒಂದೇ ತಂಡ ಸೇರ್ಪಡೆಯಂತೆ; ಕಾರಣವೇನು ಗೊತ್ತೇ?

ipl trophy web
Published on

ನವದೆಹಲಿ: ಮುಂದಿನ ವರ್ಷದ ಐಪಿಎಲ್ ಟೂರ್ನಿಗೆ 2 ಹೊಸ ತಂಡಗಳನ್ನು ಸೇರ್ಪಡೆಗೊಳಿಸಲು ಬಿಸಿಸಿಐ ಎಜಿಎಂನಲ್ಲಿ ಸಮ್ಮತಿ ದೊರೆತಿದ್ದರೂ, ಇದೀಗ ಒಂದು ಮಾತ್ರ ಹೊಸ ತಂಡವನ್ನು ಸೇರಿಸಿಕೊಳ್ಳಲು ಮಂಡಳಿ ಒಲವು ತೋರಿದೆ. 2022ರಲ್ಲಿ 10 ತಂಡಗಳ ಐಪಿಎಲ್ ಆಯೋಜಿಸಲು ಕೆಲ ಅಡಚಣೆಗಳು ಎದುರಾಗಿರುವುದರಿಂದಾಗಿ ಬಿಸಿಸಿಐ ಸದ್ಯಕ್ಕೆ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದು, ತಂಡಗಳ ಸಂಖ್ಯೆಯನ್ನು 9ಕ್ಕಷ್ಟೇ ಏರಿಸಲು ಬಯಸಿದೆ.

ಹಾಲಿ ಆರ್ಥಿಕ ಪರಿಸ್ಥಿತಿಯಲ್ಲಿ 2ನೇ ತಂಡಕ್ಕೆ ಹೆಚ್ಚಿನ ಮೌಲ್ಯ ಸಿಗುವ ಬಗ್ಗೆ ಬಿಸಿಸಿಐ ಅನುಮಾನ ಹೊಂದಿದೆ. ಹೀಗಾಗಿ ಈಗ 1 ತಂಡವನ್ನು ಮಾತ್ರ ಸೇರಿಸಿಕೊಂಡು, ವಾಣಿಜ್ಯ ಮಾರುಕಟ್ಟೆಯ ಸ್ಥಿತಿ ಸುಧಾರಣೆಯಾದಾಗ ಮತ್ತೊಂದು ತಂಡವನ್ನು ಸೇರಿಸಿಕೊಳ್ಳುವ ಮತ್ತು ಇನ್ನಷ್ಟು ಹೆಚ್ಚಿನ ಆದಾಯ ಗಳಿಸುವ ಬಗ್ಗೆ ಬಿಸಿಸಿಐ ಚಿಂತಿಸಿದೆ.

ಈಗಲೇ 2 ಹೊಸ ತಂಡಗಳ ಸೇರ್ಪಡೆಗೆ ಬಿಸಿಸಿಐ ಹಿಂದೇಟು ಹಾಕಲು ಇನ್ನೊಂದು ಕಾರಣವೇನೆಂದರೆ, ಟೂರ್ನಿಯ ಸ್ವರೂಪವನ್ನು ಬದಲಾಯಿಸಬೇಕಾಗಿರುವುದು. 9ನೇ ತಂಡದ ಸೇರ್ಪಡೆಯಿಂದ ಹಾಲಿ ಸ್ವರೂಪದಲ್ಲೇ ಟೂರ್ನಿ ಮುಂದುವರಿದರೂ, ಪಂದ್ಯಗಳ ಸಂಖ್ಯೆ 74ಕ್ಕೇರುತ್ತದೆ. ಇದಕ್ಕೆ ಸಮಯ ಹೊಂದಿಸುವುದು ಬಿಸಿಸಿಐ ಕಷ್ಟವೆನಿಸಿಲ್ಲ.

10 ತಂಡಗಳ ಟೂರ್ನಿಯಿಂದ ಪಂದ್ಯಗಳ ಸಂಖ್ಯೆ ಹೆಚ್ಚಾಗುವುದರಿಂದ ಐಸಿಸಿಯಿಂದ ಹೆಚ್ಚಿನ ಅವಧಿಯನ್ನು ಕೇಳಬೇಕಾಗುತ್ತದೆ. ಸದ್ಯದ ಎಫ್​ಟಿಪಿ ಅನ್ವಯ ಐಸಿಸಿ, ಇನ್ನೂ ಒಂದು ತಿಂಗಳ ಹೆಚ್ಚುವರಿ ಅವಧಿಗೆ ಒಪ್ಪಿಕೊಳ್ಳುವುದು ಕಷ್ಟವೆನಿಸುತ್ತಿದೆ. ಹೀಗಾಗಿ 2023-31ರ ಮುಂದಿನ ಎಫ್​ಟಿಪಿಯಲ್ಲಷ್ಟೇ ಹೆಚ್ಚಿನ ಅವಧಿ ಸಿಗುವ ನಿರೀಕ್ಷೆ ಇದ್ದು, ಐಪಿಎಲ್‌ನಲ್ಲಿ ತಂಡಗಳ ಸಂಖ್ಯೆ 10ಕ್ಕೇರಿಸಲು 2023ರ ಸೂಕ್ತ ಸಮಯವೆನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net