

ನವದೆಹಲಿ: ಟೆಸ್ಟ್, ಏಕದಿನ, ಟಿ20 ಆಯಿತು ಇನ್ನು ಟಿ10 ಕ್ರಿಕೆಟ್ ಶುರುವಾಗುವ ಸೂಚನೆ ಹರಡಿದೆ. ಐಪಿಎಲ್ ರೀತಿಯಲ್ಲೇ ಮುಂದಿನ ವರ್ಷದ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ತಲಾ 10 ಓವರ್ಗಳ ಪಂದ್ಯದ ಟಿ10 ಲೀಗ್ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಮಂಡಳಿ ಕಾರ್ಯದರ್ಶಿ ಜಯ್ ಷಾ ಈ ಪ್ರಸ್ತಾವಿತ ಲೀಗ್ನ ನೀಲನಕ್ಷೆಯನ್ನು ಸಿದ್ಧಪಡಿಸುತ್ತಿದ್ದಾರೆ ಎನ್ನಲಾಗಿದೆ.
ಈ ಹೊಸ ಲೀಗ್ಅನ್ನು "ಐಪಿಎಲ್ 2.0' ಎಂದೂ ಬಣ್ಣಿಸಲಾಗುತ್ತಿದೆ. 2008ರಲ್ಲಿ ಐಪಿಎಲ್ ಆರಂಭಗೊಂಡ ಬಳಿಕ ಬಿಸಿಸಿಐ ಆದಾಯ ಭಾರಿ ಏರಿಕೆ ಕಂಡಿದೆ. ಟಿ10 ಲೀಗ್ನಿಂದ ಬಿಸಿಸಿಐ ಇನ್ನಷ್ಟು ಆದಾಯ ಗಳಿಸುವ ನಿರೀಕ್ಷೆ ಇದೆ. ಈಗಾಗಲೆ ಕೆಲ ದೇಶಗಳಲ್ಲಿ ಆರಂಭಗೊಂಡಿರುವ ಟಿ10 ಲೀಗ್ನ ಯಶಸ್ಸಿನಿಂದ ಸ್ಫೂರ್ತಿ ಪಡೆದು ಬಿಸಿಸಿಐ ಕೂಡ ಇದರತ್ತ ಆಸಕ್ತಿ ತೋರಿದೆ.
ಟಿ10 ಲೀಗ್ನಲ್ಲಿ ಐಪಿಎಲ್ ತಂಡಗಳೇ ಕಣಕ್ಕಿಳಿಯದೆ, ಇಲ್ಲಿನ ಫ್ರಾಂಚೈಸಿಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡುವ ಯೋಜನೆಯನ್ನೂ ಬಿಸಿಸಿಐ ಹೊಂದಿದೆ. ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಟಿ10 ಲೀಗ್ ಆಯೋಜಿಸುವ ಚಿಂತನೆ ಇದೆ.