ಐಪಿಎಲ್‌ನಿಂದ ಬಿಸಿಸಿಐ ಗಳಿಸಿದ ಆದಾಯವೆಷ್ಟು ಗೊತ್ತೇ?

bcci ipl web
Published on

ನವದೆಹಲಿ: ಕರೊನಾ ವೈರಸ್ ಹಾವಳಿಯ ನಡುವೆ ಈ ವರ್ಷ ನಡೆದಿರುವ ಪ್ರಮುಖ ಕ್ರೀಡಾಕೂಟ ಐಪಿಎಲ್ ಟಿ20 ಟೂರ್ನಿ. ಅರಬ್ ರಾಷ್ಟ್ರ ಯುಎಇಯಲ್ಲಿ ನಡೆದ ಭಾರತದ ಪ್ರತಿಷ್ಠಿತ ಕ್ರಿಕೆಟ್ ಟೂರ್ನಿ, ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ನಡೆದರೂ ಭರ್ಜರಿ ಯಶ ಕಂಡಿತ್ತು. ಇದರಿಂದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬರೋಬ್ಬರಿ 4 ಸಾವಿರ ಕೋಟಿ ರೂಪಾಯಿ ಆದಾಯ ಗಳಿಸಿದೆ. ಬಿಸಿಸಿಐನ ಖಜಾಂಚಿ ಅರುಣ್ ಧುಮಾಲ್ ಅವರೇ ಇದನ್ನು ಬಹಿರಂಗಪಡಿಸಿದ್ದಾರೆ.

ಈ ಬಾರಿ ಐಪಿಎಲ್ ಟೂರ್ನಿಯ ಟಿವಿ ವೀಕ್ಷಕರ ಸಂಖ್ಯೆ ಕಳೆದ ವರ್ಷಕ್ಕಿಂತ ಶೇ. 25ರಷ್ಟು ಅಧಿಕವಾಗಿತ್ತು. ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ನಡುವಿನ ಉದ್ಘಾಟನಾ ಪಂದ್ಯ ಅತಿಹೆಚ್ಚು ವೀಕ್ಷಕರ ದಾಖಲೆ ಬರೆದಿತ್ತು ಎಂದೂ ಧುಮಾಲ್ ತಿಳಿಸಿದ್ದಾರೆ.

ಐಪಿಎಲ್ ಟೂರ್ನಿಯ ಬಯೋ-ಬಬಲ್‌ನಲ್ಲಿ ಒಟ್ಟು 1,800 ಮಂದಿ ಇದ್ದರು. ಅವರಿಗೆ ಒಟ್ಟಾರೆ 30 ಸಾವಿರಕ್ಕೂ ಅಧಿಕ ಕೊವಿಡ್-19 ಪರೀಕ್ಷೆ ನಡೆಸಲಾಗಿದೆ. ಇದರಿಂದಾಗಿ ಟೂರ್ನಿಯ 60 ಪಂದ್ಯಗಳೂ ವೈರಸ್‌ನಿಂದ ಯಾವುದೇ ರೀತಿಯ ತೊಂದರೆಗೆ ಒಳಗಾಗದೆ ನಡೆದವು ಎಂದು ಧುಮಾಲ್ ತಿಳಿಸಿದ್ದಾರೆ.

ಮೂಲ ವೇಳಾಪಟ್ಟಿಯ ಪ್ರಕಾರ ಮಾರ್ಚ್ 23ರಿಂದ ಮೇ 17ರವರೆಗೆ ಭಾರತದಲ್ಲಿ ನಡೆಯಬೇಕಾಗಿದ್ದ ಟೂರ್ನಿ ಕರೊನಾ ಹಾವಳಿಯಿಂದಾಗಿ ಮುಂದೂಡಿಕೆಯಾಗಿತ್ತು. ಬಳಿಕ ಯುಎಇಗೆ ಸ್ಥಳಾಂತರಗೊಂಡು ಸೆಪ್ಟೆಂಬರ್ 19ರಿಂದ ನವೆಂಬರ್ 10ವರೆಗೆ ನಡೆದಿತ್ತು. ಫೆಬ್ರವರಿ ನಂತರದಲ್ಲಿ ವಿಶ್ವದ ಯಾವುದೇ ಭಾಗದಲ್ಲಿ ನಡೆದಿರುವ ಅತ್ಯಂತ ಪ್ರಮುಖವಾದ ಕ್ರೀಡಾಕೂಟ ಇದಾಗಿದೆ.

ಶೇ. 35 ವೆಚ್ಚ ಕಡಿತ

ಈ ಬಾರಿ ಐಪಿಎಲ್ ಟೂರ್ನಿ ಸಂಪೂರ್ಣವಾಗಿ ವಿದೇಶದಲ್ಲಿ ನಡೆದರೂ ಬಿಸಿಸಿಐ, ಕಳೆದ ವರ್ಷಕ್ಕಿಂತ ಶೇ. 35ರಷ್ಟು ವೆಚ್ಚ ಕಡಿತ ಮಾಡುವಲ್ಲಿ ಸಲವಾಗಿದೆ ಎಂದೂ ಧುಮಾಲ್ ತಿಳಿಸಿದ್ದಾರೆ. ಟೂರ್ನಿ ಆಯೋಜನೆಗೆ ಯುಎಇ ಮತ್ತು ಶ್ರೀಲಂಕಾ ಮಂಡಳಿಯಿಂದ ಅಧಿಕೃತ ಆಹ್ವಾನ ಬಂದಿತ್ತು. ಈ ಹಿಂದೆ ಐಪಿಎಲ್ ಆತಿಥ್ಯ ವಹಿಸಿದ್ದ ಕಾರಣದಿಂದಾಗಿ ನಾವು ಯುಎಇಯನ್ನು ಆಯ್ಕೆ ಮಾಡಿದ್ದೆವು. ಅಲ್ಲಿ ಕ್ರೀಡಾಂಗಣಗಳಿಗೆ ಬಸ್ ಮೂಲಕ ಪ್ರಯಾಣ ಮಾಡಬಹುದಾಗಿದ್ದ ಕಾರಣದಿಂದಲೂ ವೆಚ್ಚ ಕಡಿತವಾಯಿತು ಎಂದು ತಿಳಿಸಿದ್ದಾರೆ.

ನಾವು ಕರೊನಾ ಕಾಲದಲ್ಲಿ ಐಪಿಎಲ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸುವ ಬಗ್ಗೆ ಅನುಮಾನ ಪಟ್ಟಿದ್ದವರೇ ನಂತರ ಬಂದು ಅಭಿನಂದನೆ ತಿಳಿಸಿದರು. ಈ ಬಾರಿ ಐಪಿಎಲ್ ಟೂರ್ನಿ ನಡೆಯದೇ ಹೋಗಿದ್ದರೆ ಕ್ರಿಕೆಟಿಗರಿಗೆ ಒಂದು ವರ್ಷ ನಷ್ಟವಾಗುತ್ತಿತ್ತು ಎಂದು ಅರುಣ್ ಧುಮಾಲ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net