More

    ಭಾರತದ ಗೆಲುವಿಗೆ ನೆರವಾಗಿ ತಂದೆಗೆ ಶ್ರದ್ಧಾಂಜಲಿ ಸಲ್ಲಿಸುವೆ ಎಂದ ಸಿರಾಜ್

    ಸಿಡ್ನಿ: ತಂದೆಯ ನಿಧನದ ನಡುವೆಯೂ ತವರಿಗೆ ಮರಳದೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮುಂದುವರಿಸಿರುವ ವೇಗಿ ಮೊಹಮದ್ ಸಿರಾಜ್, ಭಾರತ ತಂಡದ ಗೆಲುವಿಗೆ ನೆರವಾಗುವ ಮೂಲಕ ತಂದೆಗೆ ಶ್ರದ್ಧಾಂಜಲಿ ಸಲ್ಲಿಸುವುದಾಗಿ ಹೇಳಿದ್ದಾರೆ.

    ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರ ಮಿಂಚಿ ಭಾರತೀಯ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ಸಿರಾಜ್ ಅವರ ತಂದೆ ಮೊಹಮದ್ ಗೌಸ್ ದೀರ್ಘಕಾಲದ ಅನಾರೋಗ್ಯದಿಂದಾಗಿ ಕಳೆದ ವಾರ ಹೈದರಾಬಾದ್‌ನಲ್ಲಿ ನಿಧನ ಹೊಂದಿದ್ದರು. ಇದರಿಂದ ಸಿರಾಜ್‌ಗೆ ಕೂಡಲೆ ತವರಿಗೆ ಮರಳುವ ವ್ಯವಸ್ಥೆಯನ್ನು ಮಾಡಲು ಬಿಸಿಸಿಐ ಮುಂದಾಗಿದ್ದರೂ, ಅವರು ಅದನ್ನು ನಿರಾಕರಿಸಿ ಕರ್ತವ್ಯನಿಷ್ಠೆಯನ್ನು ಪಾಲಿಸುವ ಸಲುವಾಗಿ ಭಾರತ ತಂಡದೊಂದಿಗೆ ಆಸೀಸ್ ಪ್ರವಾಸದಲ್ಲಿ ಮುಂದುವರಿಯಲು ನಿರ್ಧರಿಸಿದ್ದರು.

    2007ರಲ್ಲಿ ಹದಿಹರೆಯದ ಕ್ರಿಕೆಟಿಗರಾಗಿದ್ದಾಗ ತಂದೆಯನ್ನು ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ಅವರ ಮಾತುಗಳು ತಮ್ಮ ಮನೋಬಲ ಹೆಚ್ಚಿಸಿದೆ ಎಂದೂ ಸಿರಾಜ್ ಹೇಳಿದ್ದಾರೆ. ತಂದೆಯ ನಿಧನದ ನಡುವೆಯೂ ಮರುದಿನ ರಣಜಿ ಪಂದ್ಯದಲ್ಲಿ ದೆಹಲಿ ಪರ ಆಡಿದ್ದ ವಿರಾಟ್ ಕೊಹ್ಲಿ, ಕರ್ನಾಟಕ ತಂಡದ ವಿರುದ್ಧ 97 ರನ್ ಸಿಡಿಸಿ ಮಾನಸಿಕ ದೃಢತೆ ಪ್ರದರ್ಶಿಸಿದ್ದರು. ಈಗ ಟೀಮ್ ಇಂಡಿಯಾ ನಾಯಕರಾಗಿರುವ ಅದೇ ವಿರಾಟ್ ಕೊಹ್ಲಿ, ‘ಕಠಿಣ ಪರಿಸ್ಥಿತಿಯಲ್ಲಿ ಧೈರ್ಯದಿಂದ ಇರುವಂತೆ’ ಹೇಳಿರುವ ಮಾತುಗಳು ತಮಗೆ ಸಾಂತ್ವಾನ ತುಂಬಿವೆ ಎಂದಿದ್ದಾರೆ.

    ‘ಟೆನ್ಶನ್ ತೆಗೆದುಕೊಳ್ಳಬೇಡ ಎಂದು ವಿರಾಟ್ ಭಾಯ್ ಹೇಳಿದ್ದಾರೆ. ನೀನು ಭಾರತ ತಂಡದ ಪರ ಆಡಬೇಕೆಂದು ನಿನ್ನ ತಂದೆ ಬಯಸಿದ್ದರು. ಹೀಗಾಗಿ ಯಾವುದೇ ಮಾನಸಿಕ ಒತ್ತಡ ತೆಗೆದುಕೊಳ್ಳಬೇಡ ಎಂದು ಕೊಹ್ಲಿ ಹೇಳಿದ್ದಾರೆ. ನಾಯಕನ ಈ ಸಕಾರಾತ್ಮಕ ಮಾತುಗಳು ನನಗೆ ಬಲ ತುಂಬಿದೆ’ ಎಂಬುದಾಗಿ 26 ವರ್ಷದ ಸಿರಾಜ್, ಬಿಸಿಸಿಐ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ.

    ಆಟೋ ಚಾಲಕರಾಗಿದ್ದ ಮೊಹಮದ್ ಗೌಸ್, ಸಿರಾಜ್ ಅವರ ಕ್ರಿಕೆಟ್ ವೃತ್ತಿಜೀವನದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ‘ನನಗಿದು ದೊಡ್ಡ ನಷ್ಟ. ಅವರ ನನ್ನ ಜೀವನದ ಪ್ರಮುಖ ಬೆಂಬಲ ಶಕ್ತಿಯಾಗಿದ್ದರು. ನಾನು ದೇಶದ ಪರ ಆಡಿ ಮಿಂಚಬೇಕೆಂದು ಅವರು ಬಯಸಿದ್ದರು. ಈಗ ನಾನು ಅವರ ಕನಸು ನನಸಾಗಿಸುವತ್ತ ಗಮನಹರಿಸಿರುವೆ’ ಎಂದು ಸಿರಾಜ್ ಹೇಳಿದ್ದಾರೆ.

    ಈ ದುಃಖದ ಸಮಯದಲ್ಲಿ ಭಾರತ ತಂಡದ ಸಹ-ಆಟಗಾರರು ತಮಗೆ ಬೆಂಬಲವಾಗಿ ನಿಂತಿದ್ದಾರೆ ಎಂದಿರುವ ಸಿರಾಜ್, ತವರಿಗೆ ಮರಳದೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮುಂದುವರಿಯುವಂತೆ ತಾಯಿಯೂ ತಮಗೆ ಸಲಹೆ ನೀಡಿದ್ದರು ಎಂದಿದ್ದಾರೆ. ‘ತಂದೆ ದೈಹಿಕವಾಗಿ ನನ್ನ ಜತೆಗಿರದಿದ್ದರೇನಂತೆ, ಜೀವನದಲ್ಲಿ ಯಾವಾಗಲೂ ಅವರು ನನ್ನೊಂದಿಗೆ ಇರುತ್ತಾರೆ’ ಎಂದು ಸಿರಾಜ್ ತಿಳಿಸಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts