

ನವದೆಹಲಿ: ಮುಂಬೈನಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಮತ್ತೆ ಭಾರಿ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಬಿಸಿಸಿಐ, ಆ ನಗರದಲ್ಲಿ ಮಾತ್ರ ಐಪಿಎಲ್ 14ನೇ ಆವೃತ್ತಿಯನ್ನು ಆಯೋಜಿಸುವ ಯೋಚನೆಯಿಂದ ಹಿಂದೆ ಸರಿದಿದ್ದು, ಬೆಂಗಳೂರು ಸಹಿತ 4-5 ನಗರಗಳಲ್ಲಿ ಟೂರ್ನಿಯ ಪಂದ್ಯಗಳನ್ನು ನಡೆಸುವ ಬಗ್ಗೆ ಚಿಂತಿಸಿದೆ.
ವಾಂಖೆಡೆ, ಬ್ರಬೋರ್ನ್, ಡಿವೈ ಪಾಟೀಲ್ ಮತ್ತು ರಿಲಯನ್ಸ್ ಸ್ಟೇಡಿಯಂನಂಥ 4 ಕ್ರೀಡಾಂಗಣಗಳನ್ನು ಹೊಂದಿರುವುದರಿಂದ ಬಿಸಿಸಿಐ ಈ ಮುನ್ನ, ಮುಂಬೈನಲ್ಲೇ ಬಯೋ-ಬಬಲ್ ನಿರ್ಮಿಸಿ 8 ವಾರಗಳ ಕಾಲ ಟೂರ್ನಿ ಆಯೋಜಿಸುವ ಬಗ್ಗೆ ಚರ್ಚಿಸಿತ್ತು. ಆದರೆ ಇದೀಗ ಮಹಾರಾಷ್ಟ್ರ ರಾಜ್ಯದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಮತ್ತೆ ದಿಢೀರ್ ಏರಿಕೆ ಕಂಡಿದೆ.
‘ಐಪಿಎಲ್ ಟೂರ್ನಿ ಆರಂಭಕ್ಕೆ ಇನ್ನು ಸರಿಸುಮಾರು ಒಂದು ತಿಂಗಳಷ್ಟೇ ಬಾಕಿ ಉಳಿದಿದೆ. ಹೀಗಾಗಿ ಕೆಲ ನಿರ್ಧಾರಗಳನ್ನು ಬೇಗನೆ ತೆಗೆದುಕೊಳ್ಳಬೇಕಾಗಿದೆ. ಈಗಿನಂತೆ ಕರೊನಾ ಪ್ರಕರಣಗಳ ಸಂಖ್ಯೆ ಏರುತ್ತ ಸಾಗಿದರೆ, ಮುಂಬೈನಂಥ ಒಂದೇ ನಗರದಲ್ಲಿ ಐಪಿಎಲ್ ಟೂರ್ನಿ ಆಯೋಜಿಸುವುದು ಅಪಾಯಕಾರಿಯಾಗುತ್ತದೆ. ಹೀಗಾಗಿ ಹೈದರಾಬಾದ್, ಬೆಂಗಳೂರು, ಕೋಲ್ಕತದಲ್ಲೂ ಪಂದ್ಯಗಳನ್ನು ಆಯೋಜಿಸಲು ಚಿಂತನೆ ನಡೆದಿದೆ. ಅಹಮದಾಬಾದ್‌ನಲ್ಲಿ ಪ್ಲೇಆ್ ಮತ್ತು ಫೈನಲ್ ನಡೆಯುವ ನಿರೀಕ್ಷೆ ಇದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.