ಯೋ-ಯೋ ಟೆಸ್ಟ್​ ಅಂಕ ಗಳಿಕೆ ಬಗ್ಗೆ ವಿರಾಟ್​ ಕೊಹ್ಲಿ ಪೋಸ್ಟ್​ಗೆ ಬಿಸಿಸಿಐ ಗರಂ!

kohli fit web
Published on

ಬೆಂಗಳೂರು: ಟೀಮ್​ ಇಂಡಿಯಾ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಗುರುವಾರ ತನ್ನ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಫಿಟ್ನೆಸ್​ ಪರೀಕ್ಷೆಯ ಯೋ-ಯೋ ಟೆಸ್ಟ್​ನಲ್ಲಿ ಪಡೆದ ಅಂಕವನ್ನು ಬಹಿರಂಗಪಡಿಸಿದರು. ಇದರ ಬೆನ್ನಲ್ಲೇ ಬಿಸಿಸಿಐ ಗರಂ ಆಗಿದ್ದು, ಆಟಗಾರರಿಗೆ ಸಂಬಂಧಿಸಿದ ಗೌಪ್ಯ ಮಾಹಿತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬಾರದು ಎಂದು ಎಲ್ಲ ಕ್ರಿಕೆಟಿಗರಿಗೆ ನಿರ್ಬಂಧ ವಿಧಿಸಿದೆ.

ಏಷ್ಯಾಕಪ್​ಗೆ ಪೂರ್ವಭಾವಿಯಾಗಿ ಬಿಸಿಸಿಐ ಆಯೋಜಿಸಿರುವ ವಿಶೇಷ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಬೆಂಗಳೂರಿನ ನ್ಯಾಷನಲ್​ ಕ್ರಿಕೆಟ್​ ಆಕಾಡೆಮಿಗೆ (ಎನ್​ಸಿಎ) ಆಗಮಿಸಿರುವ ವಿರಾಟ್​ ಕೊಹ್ಲಿ, ಅದಕ್ಕೂ ಮುನ್ನ ಗುರುವಾರ ನಡೆದ ಕ್ರಿಕೆಟ್​ ಆಟಗಾರರ ಯೋ&ಯೋ ಟೆಸ್ಟ್​ನಲ್ಲಿ ವಿರಾಟ್​ ಕೊಹ್ಲಿ 17.2 ಅಂಕ ಕಲೆಹಾಕಿದರು. ಇದನ್ನು ಅಭಿಮಾನಿಗಳ ಜತೆಗೆ ಅವರು ಹಂಚಿಕೊಂಡ ಬೆನ್ನಲ್ಲೇ ಬಿಸಿಸಿಐ, ಇದು ಆಟಗಾರರ ಒಪ್ಪಂದದ ಉಲ್ಲಂನೆ ಎಂದು ಕಿಡಿಕಾರಿದೆ.

ಆಟಗಾರರು ತರಬೇತಿಯ ಚಿತ್ರಗಳನ್ನು ಬೇಕಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಬಹುದು. ಆದರೆ ವಿವಿಧ ಪರೀಕ್ಷೆಗಳ ಅಂಕ ಗಳಿಕೆಯನ್ನು ಹಂಚಿಕೊಳ್ಳುವಂತಿಲ್ಲ ಎಂದು ಬಿಸಿಸಿಐ ತಿಳಿಸಿದೆ.

ಫಿಟ್ನೆಸ್​ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವ ಟೀಮ್​ ಇಂಡಿಯಾದ ಮಾಜಿ ನಾಯಕ ವಿರಾಟ್​ ಕೊಹ್ಲಿ ಜಿಮ್​ನಲ್ಲಿ ಕಸರತ್ತು ನಡೆಸುವ ಹಲವು ಪೋಸ್ಟ್​ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವ ಮೂಲಕ ಫಿಟ್ನೆಸ್​ ಬಗ್ಗೆ ಅರಿವು ಮೂಡಿಸು ಬಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net