ಇಂದು ಬೆಂಗಳೂರಿನಲ್ಲಿ ಬಿಸಿಸಿಐ ವಾರ್ಷಿಕ ಮಹಾಸಭೆ; ಕೆಲ ಮಹತ್ವದ ನಿರ್ಧಾರಗಳ ನಿರೀಕ್ಷೆ...

web bcci
Published on

ಬೆಂಗಳೂರು: ವಿಶ್ವದ ಶ್ರೀಮಂತ ಕ್ರಿಕೆಟ್​ ಸಂಸ್ಥೆಯಾದ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯ (ಬಿಸಿಸಿಐ) 93ನೇ ವಾರ್ಷಿಕ ಮಹಾಸಭೆ (ಎಜಿಎಂ) ಭಾನುವಾರ ಉದ್ಯಾನನಗರಿಯಲ್ಲಿ ನಡೆಯಲಿದೆ. ಐಸಿಸಿ ಸಭೆಯಲ್ಲಿ ಪಾಲ್ಗೊಳ್ಳಲು ಭಾರತದ ಇಬ್ಬರು ಪ್ರತಿನಿಧಿಗಳನ್ನು ಆರಿಸುವುದು ಸಭೆಯ ಪ್ರಮುಖ ಅಜೆಂಡಾ ಆಗಿದೆ. ಡಿಸೆಂಬರ್​ನಲ್ಲಿ ಐಸಿಸಿ ಚೇರ್ಮನ್​ ಹುದ್ದೆಗೇರಲಿರುವ ಬಿಸಿಸಿಐ ಕಾರ್ಯದರ್ಶಿ ಜಯ್​ ಷಾಗೆ ಉತ್ತರಾಧಿಕಾರಿಯನ್ನು ಆರಿಸುವುದು ಸಭೆಯ ಅಜೆಂಡಾದಲ್ಲಿ ಇಲ್ಲ.

ಮುಂದಿನ ತಿಂಗಳು ಯುಎಇಯಲ್ಲಿ ನಡೆಯಲಿರುವ ಮಹಿಳೆಯರ ಟಿ20 ವಿಶ್ವಕಪ್​ ಅಂತ್ಯದಲ್ಲಿ ದುಬೈನಲ್ಲಿ ಐಸಿಸಿಯ ಸಮಾವೇಶವೊಂದು ನಿಗದಿಯಾಗಿದೆ. ವಿಶ್ವಕಪ್ ಫೈನಲ್​ ಅಕ್ಟೋಬರ್​ 20ರಂದು ದುಬೈನಲ್ಲಿ ನಿಗದಿಯಾಗಿದ್ದು, ಅಲ್ಲಿಯವರೆಗೆ ಅವರೇ ಬಿಸಿಸಿಐ ಕಾರ್ಯದರ್ಶಿಯಾಗಿರಲಿದ್ದು, ಡಿಸೆಂಬರ್​ 1ರಂದು ಐಸಿಸಿ ಚೇರ್ಮನ್​ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಹೀಗಾಗಿ ಈ ಸಭೆಯಲ್ಲಿ ಜಯ್​ ಷಾ ಅವರೇ ಭಾರತದ ಪ್ರತಿನಿಧಿಯಾಗಿರಲಿದ್ದಾರೆ.

ಸೌರವ್​ ಗಂಗೂಲಿ ಬಿಸಿಸಿಐ ಅಧ್ಯಕ್ಷ ಹುದ್ದೆಯಿಂದ ನಿರ್ಗಮಿಸಿದ ನಂತರದಲ್ಲಿ ಜಯ್​ ಷಾ ಅವರೇ ಐಸಿಸಿ ಸಭೆಗಳಿಗೆ ಭಾರತದ ಪ್ರತಿನಿಧಿಯಾಗಿದ್ದರು. ಬಿಸಿಸಿಐ ಅಧ್ಯಕ್ಷ ರೋಜರ್​ ಬಿನ್ನಿ ಅವರೂ ಐಸಿಸಿ ಸಭೆಗಳಿಗೆ ಪರ್ಯಾಯ ನಿರ್ದೇಶಕರಾಗಿ ಭಾರತದ ಪ್ರತಿನಿಧಿಯಾಗಿದ್ದಾರೆ. ಆದರೆ ಅವರ ಒಂದು ವರ್ಷದ ಅಧಿಕಾರಾವಧಿ ಮಾತ್ರ ಬಾಕಿ ಇದ್ದು, ಅವರು ಇದೇ ಪಾತ್ರದಲ್ಲಿ ಮುಂದುವರಿಯುವರೇ ಅಥವಾ ಬೇರೆಯವರನ್ನು ಆರಿಸಲಾಗುವುದೇ ಎಂಬುದನ್ನು ಕಾದುನೋಡಬೇಕಿದೆ.

ಮಹಾಸಭೆಯ ಪ್ರಮುಖ ಅಜೆಂಡಾ

*ಐಸಿಸಿ ಸಭೆಗಳಿಗೆ ಭಾರತದ ಇಬ್ಬರು ಪ್ರತಿನಿಧಿಗಳ ಆಯ್ಕೆ.

*ಐಪಿಎಲ್​ ಆಡಳಿತ ಮಂಡಳಿಗೆ ಭಾರತೀಯ ಕ್ರಿಕೆಟರ್ಸ್​ ಸಂಸ್ಥೆಯ (ಐಸಿಎ) ಪ್ರತಿನಿಧಿಯ ಸೇರ್ಪಡೆಗೆ ಅನುಮೋದನೆ.

*ವಿವಿಧ ಕ್ರಿಕೆಟ್​ ಸಮಿತಿ, ಉಪಸಮಿತಿಗಳ ರಚನೆ.

*2024-25ರ ಸಾಲಿನ ವಾರ್ಷಿಕ ಬಜೆಟ್​ಗೆ ಅನುಮೋದನೆ.

*ಲೈಂಗಿಕ ಕಿರುಕುಳ ತಡೆಗಟ್ಟುವಿಕೆಗೆ ರಚಿಸಲಾಗಿರುವ ಮಂಡಳಿತ ಆಂತರಿಕ ಸಮಿತಿಯ ವರದಿಯ ಬಗ್ಗೆ ಚರ್ಚೆ.

ಹೊಸ ಕಾರ್ಯದರ್ಶಿ ಆಯ್ಕೆಗೆ ಎಸ್​ಜಿಎಂ?

ಬಿಸಿಸಿಐ ಎಜಿಎಂನಲ್ಲಿ ಮುಂದಿನ ಕಾರ್ಯದರ್ಶಿ ಆಯ್ಕೆಯ ಬಗ್ಗೆ ಚರ್ಚೆ ನಡೆಯದಿದ್ದರೂ, ನಂತರದಲ್ಲಿ ಬಿಸಿಸಿಐ ಇದಕ್ಕಾಗಿ ವಿಶೇಷ ಮಹಾಸಭೆಯನ್ನು (ಎಸ್​ಜಿಎಂ) ನಿಗದಿಪಡಿಸುವ ನಿರೀಕ್ಷೆ ಇದೆ. ಸದ್ಯಕ್ಕೆ ಮುಂದಿನ ಕಾರ್ಯದರ್ಶಿ ಹುದ್ದೆಗೆ ಗುಜರಾತ್​ ಕ್ರಿಕೆಟ್​ ಸಂಸ್ಥೆ ಕಾರ್ಯದರ್ಶಿ ಅನಿಲ್​ ಪಟೇಲ್​ ಮತ್ತು ದೆಹಲಿ ಕ್ರಿಕೆಟ್​ ಸಂಸ್ಥೆ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ಅರುಣ್​ ಜೇಟ್ಲಿ ಪುತ್ರ ರೋಹನ್​ ಜೇಟ್ಲಿ ಹೆಸರು ಚಾಲ್ತಿಯಲ್ಲಿವೆ. ಈ ಪೈಕಿ 66 ವರ್ಷದ ಅನಿಲ್​ ಪಟೇಲ್​ ಅವರೇ ಸದ್ಯಕ್ಕೆ ಅನುಭವದ ಆಧಾರದಲ್ಲಿ ಮುಂಚೂಣಿಯಲ್ಲಿದ್ದಾರೆ. ಅಲ್ಲದೆ, ಅವರು ಜಯ್​ ಷಾಗೆ ಆಪ್ತರು ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್​ ಷಾ ಗುಜರಾತ್​ ಕ್ರಿಕೆಟ್​ ಸಂಸ್ಥೆ ಅಧಿಕಾರದಲ್ಲಿದ್ದಾಗ ನಿಕಟವರ್ತಿಯಾಗಿದ್ದರು. ಎಸ್​ಜಿಎಂ ದಿನಾಂಕ ಎಜಿಎಂ ನಂತರದಲ್ಲಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net