

ಬೆಂಗಳೂರು: ಐಪಿಎಲ್-17ರ 2 ಗುಂಪುಗಳನ್ನು ಬಿಸಿಸಿಐ ಬಹಿರಂಗಪಡಿಸಿದ್ದು, ಮುಂಬೈ, ಕೆಕೆಆರ್, ರಾಜಸ್ಥಾನ, ಡೆಲ್ಲಿ, ಲಖನೌ ಎ ಗುಂಪಿನಲ್ಲಿವೆ. ಸಿಎಸ್ಕೆ, ಆರ್ಸಿಬಿ, ಸನ್ರೈಸರ್ಸ್, ಪಂಜಾಬ್, ಗುಜರಾತ್ ಬಿ ಗುಂಪಿನಲ್ಲಿವೆ. ಪ್ರತಿ ತಂಡ ತನ್ನ ಗುಂಪಿನ ತಂಡಗಳ ವಿರುದ್ಧ ಒಮ್ಮೆ ಮತ್ತು ಎದುರಾಳಿ ಗುಂಪಿನ ತಂಡಗಳ ಎದುರು ತಲಾ 2 ಪಂದ್ಯಗಳನ್ನು ಆಡಲಿದೆ. ಇದರಿಂದ ಉದ್ಘಾಟನಾ ಪಂದ್ಯದಲ್ಲೇ ಸಿಎಸ್ಕೆ ವಿರುದ್ಧ ಆಡಿರುವ ಆರ್ಸಿಬಿ ತಂಡ ಇನ್ನು ಪ್ಲೇಆಫ್ ಅಥವಾ ಫೈನಲ್ ಹೊರತಾಗಿ ಮತ್ತೆ ಅದನ್ನು ಎದುರಿಸುವ ಅವಕಾಶವಿಲ್ಲ.
ಅಹಮದಾಬಾದ್ನಲ್ಲಿ ಪ್ಲೇಆಫ್, ಚೆನ್ನೈನಲ್ಲಿ ಫೈನಲ್
ಐಪಿಎಲ್-17ರ ಫೈನಲ್ ಪಂದ್ಯ ಮೇ 26ರಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ಕಿಂಗ್ಸ್ನ ತವರು ಮೈದಾನವಾದ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದಲ್ಲದೆ ಮೊದಲ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದ್ದರೆ, 2ನೇ ಕ್ವಾಲಿಫೈಯರ್ ಚೆನ್ನೈನಲ್ಲಿ ನಡೆಯಲಿದೆ ಎನ್ನಲಾಗಿದೆ. ಬಿಸಿಸಿಐ ಶೀಘ್ರದಲ್ಲೇ ಐಪಿಎಲ್ನ 2ನೇ ಹಂತದ ವೇಳಾಪಟ್ಟಿ ಬಿಡುಗಡೆಗೊಳಿಸುವ ನಿರೀಕ್ಷೆ ಇದೆ.