ವಿಶ್ವಕಪ್​ನಲ್ಲಿ ಭಾರತದ ಅಜೇಯ ಪಟ್ಟಕ್ಕೆ ಇಂದು ಆಂಗ್ಲರ ಸವಾಲು; ಲಖನೌದಲ್ಲಿ ಸಿಡಿಯುವುದೇ ಗೆಲುವಿನ ಸಿಕ್ಸರ್​?

ind vs eng web
Published on

ಲಖನೌ: ಸತತ 5 ಗೆಲುವಿನೊಂದಿಗೆ ಭರ್ಜರಿ ಲಯದಲ್ಲಿರುವ ಆತಿಥೇಯ ಭಾರತ ತಂಡಕ್ಕೆ ಏಕದಿನ ವಿಶ್ವಕಪ್​ನಲ್ಲಿ ಭಾನುವಾರ, ಹಾಲಿ ಚಾಂಪಿಯನ್​ ಪಟ್ಟದಿಂದ ಕೆಳಗಿಳಿಯುವ ಸನಿಹದಲ್ಲಿರುವ ಇಂಗ್ಲೆಂಡ್​ ತಂಡದ ಸವಾಲು ಎದುರಾಗಲಿದೆ. ರೋಹಿತ್​ ಶರ್ಮ ಬಳಗ ಸತತ 6ನೇ ಗೆಲುವಿನೊಂದಿಗೆ ಸೆಮಿಫೈನಲ್​ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಳ್ಳುವ ತವಕದಲ್ಲಿದ್ದರೆ, ಭಾರತದ ಅಜೇಯ ಓಟಕ್ಕೆ ಕಡಿವಾಣ ಹಾಕುವ ಮೂಲಕ ಪ್ರತಿಷ್ಠೆ ಕಾಯ್ದುಕೊಳ್ಳುವ ಹಂಬಲ ಜೋಸ್​ ಬಟ್ಲರ್​ ಬಳಗದ್ದಾಗಿದೆ.

ಕಳೆದ ವರ್ಷದ ಟಿ20 ವಿಶ್ವಕಪ್​ ಗೆಲುವು ಸೇರಿದಂತೆ ಸೀಮಿತ ಓವರ್​ ಕ್ರಿಕೆಟ್​ನಲ್ಲಿ ಇತ್ತೀಚೆಗೆ ಉತ್ತಮ ಯಶಸ್ಸಿನ ಸಾಧನೆ ಆಂಗ್ಲರದ್ದಾಗಿತ್ತು. ಆದರೆ ಹಾಲಿ ಟೂರ್ನಿಯಲ್ಲಿ ಲಯ ಕಂಡುಕೊಳ್ಳುವಲ್ಲಿ ಎಡವಿದ್ದಾರೆ. ಆಂಗ್ಲರ ಆಕ್ರಮಣಕಾರಿ ಕಾರ್ಯತಂತ್ರ ಭಾರತೀಯ ವಾತಾವರಣದಲ್ಲಿ ಸಂಪೂರ್ಣ ಕೈಕೊಟ್ಟಿದೆ. ಹೀಗಾಗಿ ಈಗ ಆತಿಥೇಯರ ವಿರುದ್ಧವೇ ಲಯಕ್ಕೆ ಮರಳುವ ಯೋಜನೆ ಆಂಗ್ಲರದ್ದಾಗಿದ್ದರೆ, ಭಾರತ ತನ್ನ ಅಜೇಯ ಓಟವನ್ನು ವಿಸ್ತರಿಸುವ ಉತ್ಸಾಹದಲ್ಲಿದೆ.

ಕಿವೀಸ್​ ವಿರುದ್ಧ ಧರ್ಮಶಾಲಾದಲ್ಲಿ ಪಂದ್ಯ ಆಡಿದ ಒಂದು ವಾರದ ಬಳಿಕ ಭಾರತ ತಂಡ ವಿಶ್ವಕಪ್​ನಲ್ಲಿ ಮರಳಿ ಕಣಕ್ಕಿಳಿಯುತ್ತಿದ್ದು, ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಗೈರಿನಲ್ಲಿ ತಂಡದ ಸಮತೋಲನ ಕಾಯ್ದುಕೊಳ್ಳುವ ಅನಿವಾರ್ಯತೆಯಲ್ಲಿದೆ. ಆಡಿದ ಐದು ಪಂದ್ಯಗಳಲ್ಲೂ ಭಾರತ ಚೇಸಿಂಗ್​ನಲ್ಲೇ ಯಶಸ್ಸು ಕಂಡಿದೆ. ಹೀಗಾಗಿ ಭಾರತ ವಿಶ್ವಕಪ್​ನಲ್ಲಿ ಇದುವರೆಗೂ ಸಂಪೂರ್ಣ 50 ಓವರ್​ ಬ್ಯಾಟಿಂಗ್​ ಮಾಡಿಲ್ಲ. ಈ ಬಾರಿ ಮೊದಲು ಬ್ಯಾಟಿಂಗ್​ ಮಾಡುವ ಅವಕಾಶ ಸಿಕ್ಕರೆ, ಮಧ್ಯಮ-ಕೆಳ ಕ್ರಮಾಂಕಕ್ಕೆ ನಿಜವಾದ ಸತ್ವಪರೀಕ್ಷೆ ಎದುರಾಗಲಿದೆ. ಮುಖ್ಯವಾಗಿ ಶ್ರೇಯಸ್​ ಅಯ್ಯರ್​ ಮತ್ತು ಸೂರ್ಯಕುಮಾರ್​ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ. ಮೊತ್ತ ರಕ್ಷಿಸಿಕೊಳ್ಳುವಲ್ಲಿ ಭಾರತೀಯ ಬೌಲರ್​ಗಳಿಗೂ ಸವಾಲು ಎದುರಾಗಲಿದೆ. ಆಗ 6ನೇ ಬೌಲರ್​ ಕೊರತೆ ಎದುರಾಗದಂತೆ ನೋಡಿಕೊಳ್ಳುವ ಒತ್ತಡವೂ ಇರಲಿದೆ.

ಭಾರತಕ್ಕೆ ಸೇಡಿನ ತವಕ

ಭಾರತ ತಂಡ ಇತ್ತೀಚೆಗಿನ ವರ್ಷಗಳಲ್ಲಿ ಐಸಿಸಿ ಟೂರ್ನಿಗಳಲ್ಲಿ ಆಂಗ್ಲರ ಎದುರು ಹೆಚ್ಚಿನ ಯಶ ಕಂಡಿಲ್ಲ. 2019ರ ಏಕದಿನ ವಿಶ್ವಕಪ್​ ಲೀಗ್​ ಹಂತದಲ್ಲಿ ಸೋತಿದ್ದ ಭಾರತ, 2022ರ ಟಿ20 ವಿಶ್ವಕಪ್​ನಲ್ಲೂ ಸೆಮಿೈನಲ್​ನಲ್ಲಿ ಶರಣಾಗಿತ್ತು. ಇವೆರಡು ಸೋಲುಗಳಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಈಗ ಭಾರತ ತಂಡದ ಮುಂದಿದೆ. 2013ರ ಚಾಂಪಿಯನ್ಸ್​ ಟ್ರೋಫಿಯಲ್ಲಿ ಗೆದ್ದಿರುವುದು, ಐಸಿಸಿ ಟೂರ್ನಿಗಳಲ್ಲಿ ಆಂಗ್ಲರ ಎದುರು ಭಾರತಕ್ಕೆ ಕೊನೇ ಗೆಲುವಾಗಿದೆ. ಏಕದಿನ ವಿಶ್ವಕಪ್​ನಲ್ಲಿ 2003ರಲ್ಲಿ ಕೊನೆಯದಾಗಿ ಭಾರತ ಗೆದ್ದಿದೆ. 2011ರ ತವರಿನ ವಿಶ್ವಕಪ್​ನಲ್ಲಿ ಟೈಗೆ ತೃಪ್ತಿಪಟ್ಟಿತ್ತು.

ಟೀಮ್​ ನ್ಯೂಸ್​:

ಭಾರತ: ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಈ ಪಂದ್ಯಕ್ಕೂ ಅಲಭ್ಯರಾಗಿರುವುದರಿಂದ ಸೂರ್ಯಕುಮಾರ್​ ಸ್ಥಾನ ಉಳಿಸಿಕೊಳ್ಳಬಹುದು. ಆದರೆ ಕಳೆದ ಪಂದ್ಯದಲ್ಲಿ 5 ವಿಕೆಟ್​ ಗೊಂಚಲು ಪಡೆದ ಹೊರತಾಗಿಯೂ ವೇಗಿ ಮೊಹಮದ್​ ಶಮಿ ಸ್ಥಾನ ಗ್ಯಾರಂಟಿ ಇಲ್ಲ. ಸ್ಪಿನ್​ ಸ್ನೇಹಿ ಪಿಚ್​ನಲ್ಲಿ ಅನುಭವಿ ಸ್ಪಿನ್ನರ್​ ಆರ್. ಅಶ್ವಿನ್​ಗೆ ಅವಕಾಶದ ನಿರೀಕ್ಷೆ ಇದೆ. ಆಗ ಸಿರಾಜ್​-ಶಮಿ ಅವರಲ್ಲಿ ಒಬ್ಬರಷ್ಟೇ ಆಡಬಹುದು. 6ನೇ ಬೌಲರ್​ ಕೊರತೆ ನೀಗಿಸಲು ಕೊಹ್ಲಿ-ಗಿಲ್​ ಅರೆಕಾಲಿಕ ಬೌಲರ್​ಗಳಾಗಿ ದಾಳಿಗಿಳಿಯುವ ಸಾಧ್ಯತೆಗಳಿವೆ.

ಇಂಗ್ಲೆಂಡ್​: ಸತತ ಸೋಲಿನ ನಡುವೆಯೂ ಇಂಗ್ಲೆಂಡ್​ ತಂಡದಲ್ಲಿ ದೊಡ್ಡ ಮಟ್ಟದ ಬದಲಾವಣೆಯ ಸಾಧ್ಯತೆಗಳಿಲ್ಲ. ಆಲ್ರೌಂಡರ್​ಗಳೇ ವೈಫಲ್ಯ ಕಾಣುತ್ತಿರುವುದರಿಂದ ತಂಡ ಸಂಯೋಜನೆಯೂ ಪಕ್ವತೆ ಪಡೆದುಕೊಂಡಿಲ್ಲ. ಯುವ ಬ್ಯಾಟರ್​ ಹ್ಯಾರಿ ಬ್ರೂಕ್​ ತಂಡಕ್ಕೆ ಮರಳಿದರೆ ಮೊಯಿನ್​ ಅಲಿ ಸ್ಥಾನ ಬಿಟ್ಟುಕೊಡಬಹುದು. ಮಾರ್ಕ್​ ವುಡ್​ ಬದಲಿಗೆ ಗಸ್​ ಅಟ್ಕಿನ್​ಸನ್​ ಮರಳಬಹುದು.

*2: ಏಕದಿನ ವಿಶ್ವಕಪ್​ ಇತಿಹಾಸದಲ್ಲಿ ಇದುವರೆಗೆ 2 ಬಾರಿ ಮಾತ್ರ ಹಾಲಿ ಚಾಂಪಿಯನ್​ ತಂಡ ಸೆಮಿಫೈನಲ್​ಗೇರಲು ವಿಲವಾಗಿದೆ. 1992ರಲ್ಲಿ ಆಸೀಸ್​ ಮತ್ತು 1999ರಲ್ಲಿ ಲಂಕಾ ಈ ವೈಫಲ್ಯ ಕಂಡಿತ್ತು. ಇಂಗ್ಲೆಂಡ್​ ಸೋತರೆ 3ನೇ ತಂಡವಾಗಿ ಆ ಪಟ್ಟಿಗೆ ಅಧಿಕೃತವಾಗಿ ಸೇರ್ಪಡೆಯಾಗಲಿದೆ.

ಏಕದಿನ ಮುಖಾಮುಖಿ: 106

ಭಾರತ: 57, ಇಂಗ್ಲೆಂಡ್​: 44, ಟೈ: 2, ರದ್ದು: 3

ವಿಶ್ವಕಪ್​ ಮುಖಾಮುಖಿ: 8

ಭಾರತ: 3, ಇಂಗ್ಲೆಂಡ್​: 4, ಟೈ: 1.

ಆರಂಭ: ಮಧ್ಯಾಹ್ನ 2.00

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಡಿಡಿ.

ರಾಹುಲ್​ಗೆ 'ತವರಿನ' ಸಂಭ್ರಮ

ವಿಕೆಟ್​ ಕೀಪರ್​-ಬ್ಯಾಟರ್​ ಹಾಗೂ ಕನ್ನಡಿಗ ಕೆಎಲ್​ ರಾಹುಲ್​ಗೆ ಏಕನಾ ಕ್ರೀಡಾಂಗಣದಲ್ಲಿ ಭಾನುವಾರ ತವರಿನಲ್ಲೇ ಆಡಿದ ಅನುಭವ ಸಿಗಲಿದೆ. ಐಪಿಎಲ್​ನಲ್ಲಿ ಲಖನೌ ಸೂಪರ್​ಜೈಂಟ್ಸ್​ ತಂಡದ ನಾಯಕರಾಗಿರುವುದರಿಂದ ಸ್ಥಳಿಯ ಪ್ರೇಕ್ಷಕರಿಂದ ರಾಹುಲ್​ಗೆ ಹೆಚ್ಚಿನ ಬೆಂಬಲ ಸಿಗಲಿದೆ. ಈ ಮೈದಾನದಲ್ಲಿನ ಅವರ ಅನುಭವವೂ ಭಾರತ ತಂಡಕ್ಕೆ ಉಪಯುಕ್ತವೆನಿಸಲಿದೆ. ಇನ್ನು ಉತ್ತರ ಪ್ರದೇಶದ ರಿಸ್ಟ್​ ಸ್ಪಿನ್ನರ್​ ಕುಲದೀಪ್​ ಯಾದವ್​ಗೆ ಇದು ತವರು ರಾಜ್ಯದ ಮೈದಾನವೆನಿಸಿದೆ.

ಐಪಿಎಲ್​ ಸ್ಟಾರ್​ಗಳ ವೈಫಲ್ಯ ಆಂಗ್ಲರ ಹಿನ್ನಡೆಗೆ ಕಾರಣ!

ಐಪಿಎಲ್​ನಲ್ಲಿ ಮಿಂಚಿರುವ ಆಟಗಾರರು ವಿಶ್ವಕಪ್​ನಲ್ಲೂ ಗಮನಾರ್ಹ ನಿರ್ವಹಣೆ ತೋರುತ್ತಿರುವುದು ದಣ ಆಫ್ರಿಕಾ, ನ್ಯೂಜಿಲೆಂಡ್​, ಆಸ್ಟ್ರೆಲಿಯಾ ತಂಡಗಳಿಗೆ ಯಶಸ್ಸು ತಂದುಕೊಟ್ಟಿದೆ. ಇತ್ತ ಇಂಗ್ಲೆಂಡ್​ಗೆ ಐಪಿಎಲ್​ ಸ್ಟಾರ್​ಗಳ ವೈಫಲ್ಯವೇ ದೊಡ್ಡ ಹಿನ್ನಡೆ ತಂದಿದೆ. ಇತ್ತೀಚೆಗಿನ ವರ್ಷಗಳಲ್ಲಿ ಐಪಿಎಲ್​ನಲ್ಲಿ ಮಿಂಚುತ್ತ ಬಂದಿರುವ ಜೋಸ್​ ಬಟ್ಲರ್​, ಜಾನಿ ಬೇರ್​ಸ್ಟೋ, ಬೆನ್​ ಸ್ಟೋಕ್ಸ್​, ಮೊಯಿನ್​ ಅಲಿ, ಸ್ಯಾಮ್​ ಕರನ್​, ಲಿಯಾಮ್​ ಲಿವಿಂಗ್​ಸ್ಟೋನ್​ ವಿಶ್ವಕಪ್​ನಲ್ಲಿ ಹೆಚ್ಚಿನ ಕೊಡುಗೆ ನೀಡಿಲ್ಲ.

ಸಚಿನ್​ ಸರಿಗಟ್ಟುವರೇ ಕೊಹ್ಲಿ?

ವಿರಾಟ್​ ಕೊಹ್ಲಿ ಲಖನೌದಲ್ಲಿ ಶತಕ ಸಿಡಿಸಿದರೆ ದಿಗ್ಗಜ ಸಚಿನ್​ ತೆಂಡುಲ್ಕರ್​ ಅವರ 49 ಶತಕಗಳ ಏಕದಿನ ಕ್ರಿಕೆಟ್​ ವಿಶ್ವದಾಖಲೆ ಸರಿಗಟ್ಟುವ ಅವಕಾಶವಿದೆ. ಧರ್ಮಶಾಲಾದಲ್ಲಿ ಕೇವಲ 5 ರನ್​ಗಳಿಂದ ಈ ಅವಕಾಶದಿಂದ ವಂಚಿತರಾಗಿದ್ದ ಕೊಹ್ಲಿ ಲಖನೌ ಲಕ್​ ತರುವುದೇ ಎಂಬ ಕುತೂಹಲ ಅಭಿಮಾನಿಗಳದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net