ಏಷ್ಯಾಕಪ್​ನಲ್ಲಿ ಅಫ್ಘಾನಿಸ್ತಾನ ಎದುರು ಬಾಂಗ್ಲಾದೇಶ ಜಯಭೇರಿ

ban web
Published on

ಲಾಹೋರ್​: ಆರಂಭಿಕ ಮೆಹಿದಿ ಹಸನ್​ ಮಿರಾಜ್​ (112 ರನ್​, 119 ಎಸೆತ, 7 ಬೌಂಡರಿ, 3 ಸಿಕ್ಸರ್​) ಮತ್ತು ನಜ್ಮುಲ್​ ಹೊಸೈನ್​ ಶಾಂಟೊ (104 ರನ್​, 105 ಎಸೆತ, 9 ಬೌಂಡರಿ, 2 ಸಿಕ್ಸರ್​) ಭರ್ಜರಿ ಶತಕಗಳ ನೆರವಿನಿಂದ ಬಾಂಗ್ಲಾದೇಶ ತಂಡ ಏಷ್ಯಾಕಪ್​ ಏಕದಿನ ಕ್ರಿಕೆಟ್​ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 89 ರನ್​ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ ಶಕೀಬ್​ ಅಲ್​ ಹಸನ್​ ಪಡೆ ಸೂಪರ್-4 ಹಂತಕ್ಕೇರುವ ಆಸೆ ಜೀವಂತ ಉಳಿಸಿಕೊಂಡಿದೆ.

ಪಾಕಿಸ್ತಾನದ ಗದ್ದಾಫಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ದ ಬಾಂಗ್ಲಾ, 5 ವಿಕೆಟ್​ಗೆ 334 ರನ್​ ಪೇರಿಸಿದೆ. ಮೆಹಿದಿ ಹಸನ್​ ಮತ್ತು ಶಾಂಟೊ ಜೋಡಿ 3ನೇ ವಿಕೆಟ್​ಗೆ 190 ಎಸೆತಗಳಲ್ಲಿ 194 ರನ್​ ಸೇರಿಸಿ ಬಾಂಗ್ಲಾ ಇನಿಂಗ್ಸ್​ಗೆ ಆಸರೆಯಾದರು. ಶತಕ ಪೂರೈಸಿದ ಬಳಿಕ ಮೆಹಿದಿ ಗಾಯದಿಂದಾಗಿ ಸ್ವಯಂ ನಿವೃತ್ತಿ ಹೊಂದಿದರು. ಕೊನೆಯಲ್ಲಿ ನಾಯಕ ಶಕೀಬ್​ ಅಲ್​ ಹಸನ್​ (32*ರನ್​, 18 ಎಸೆತ, 4 ಬೌಂಡರಿ, 1 ಸಿಕ್ಸರ್​) ಮೊತ್ತ ಏರಿಸಿದರು. ಅಫ್ಘಾನಿಸ್ತಾನ ಪರ ಅನುಭವಿ ಸ್ಪಿನ್ನರ್​ ರಶೀದ್​ ಖಾನ್​ ಸಹಿತ ಎಲ್ಲ ಬೌಲರ್​ಗಳು ದುಬಾರಿಯಾದರು. ಪ್ರತಿಯಾಗಿ ಅಫ್ಘಾನಿಸ್ತಾನ ತಂಡ ವೇಗಿಗಳಾದ ಟಸ್ಕಿನ್​ ಅಹ್ಮದ್​ (44ಕ್ಕೆ 4) ಮತ್ತು ಶೋರಿುಲ್​ ಇಸ್ಲಾಂ (36ಕ್ಕೆ 3) ದಾಳಿಗೆ ಕುಸಿದು 44.3 ಓವರ್​ಗಳಲ್ಲಿ 245 ರನ್​ಗಳಿಗೆ ಸರ್ವಪತನ ಕಂಡಿತು.

ಬಾಂಗ್ಲಾದೇಶ: 5 ವಿಕೆಟ್​ಗೆ 334 (ನೈಮ್​ 28, ಮೆಹಿದಿ ಹಸನ್​ 112, ಶಾಂಟೊ 104, ಮುಶ್ಪಿಕರ್​ ರಹೀಂ 25, ಶಕೀಬ್​ 32*, ಮುಜೀಬ್​ 62ಕ್ಕೆ 1, ನೈಬ್​ 58ಕ್ಕೆ 1). ಅಫ್ಘಾನಿಸ್ತಾನ: 44.3 ಓವರ್​ಗಳಲ್ಲಿ 245 (ಗುರ್ಬಜ್​ 1, ಜದ್ರಾನ್​ 75, ರಹಮತ್​ 33, ಹಶ್ಮತುಲ್ಲಾ 51, ನಬಿ 3, ರಶೀದ್​ 24, ಟಸ್ಕಿನ್​ ಅಹ್ಮದ್​ 44ಕ್ಕೆ 4, ಶೋರಿುಲ್​ 36ಕ್ಕೆ 3).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net