ನಮ್ಮತ್ರ ಇದೆಲ್ಲ ನಡೆಯಲ್ಲ… ಟ್ರೋಫಿ ಜತೆ ಮಲಗಿ ಭಾರತಕ್ಕೆ ವಾರ್ನಿಂಗ್​ ಕೊಟ್ರಾ ಬಾಂಗ್ಲಾ ಕ್ಯಾಪ್ಟನ್?

Bangla Captain
Published on

ನವದೆಹಲಿ: ಬಾಂಗ್ಲಾದೇಶ ಕ್ರಿಕೆಟ್​ ತಂಡ ಬಯಸಿದ್ದನ್ನು ಸಾಧಿಸಿ, ಬೀಗುತ್ತಿದೆ. ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಪಾಕಿಸ್ತಾನದ ವಿರುದ್ಧ ಸಮಬಲ ಸಾಧಿಸುವುದಾಗಿ ಹೇಳಿದ್ದ ತಂಡ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನದನ್ನು ಮಾಡಿದೆ. ಪಾಕ್​ ತಂಡವನ್ನು ಸತತ ಎರಡು ಟೆಸ್ಟ್‌ ಪಂದ್ಯಗಳಲ್ಲಿ ಸೋಲಿಸಿ, ಸರಣಿಯನ್ನು 2-0 ರಿಂದ ಕ್ಲೀನ್​ ಸ್ವೀಪ್​ ಮಾಡಿದೆ. ಸುಲಭವಾಗಿ ಗೆಲ್ಲುತ್ತೇವೆ ಎಂದು ಸರಣಿಯನ್ನು ಹಗುರವಾಗಿ ತೆಗೆದುಕೊಂಡ ಆತಿಥೇಯ ತಂಡ ನೆಲಕಚ್ಚಿದೆ.

ನಿನ್ನೆ (ಸೆ.03) ಕೊನೆಗೊಂಡ ಎರಡನೇ ಟೆಸ್ಟ್​ ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾ ತಂಡ ಪಾಕಿಸ್ತಾನ ನೆಲದಲ್ಲೇ ಪಾಕ್​ ತಂಡವನ್ನು 6 ವಿಕೆಟ್​ಗಳಿಂದ ವೈಟ್ ವಾಶ್ ಮಾಡಿದೆ. ಬಾಂಗ್ಲಾ ಗೆಲುವನ್ನು ಆಟಗಾರರು ಮತ್ತು ಅಭಿಮಾನಿಗಳು ಸಂಪೂರ್ಣವಾಗಿ ಆಚರಿಸಿದ್ದಾರೆ. ಪಂದ್ಯ ಗೆದ್ದಾಗ ಅವರ ಖುಷಿಗೆ ಮಿತಿಯೇ ಇರಲಿಲ್ಲ. ಪರಸ್ಪರ ಅಪ್ಪಿಕೊಂಡು ಸಂಭ್ರಮಿಸಿದ್ದಾರೆ. ಆದರೆ, ಇವರೆಲ್ಲರಿಗಿಂತ ಬಾಂಗ್ಲಾ ನಾಯಕ ನಜ್ಮುಲ್ ಹೊಸೈನ್ ಶಾಂಟೊ ಸಂಭ್ರಮಿಸಿದ ರೀತಿ ಚರ್ಚೆಗೆ ಗ್ರಾಸವಾಗಿದೆ.

ತನ್ನ ನಾಯಕತ್ವದಲ್ಲಿ ಪಾಕ್​ ವಿರುದ್ಧ ಟೆಸ್ಟ್​ ಸರಣಿ ಗೆದ್ದ ಖುಷಿಯಲ್ಲಿ ತೇಲಾಡಿದ ಬಾಂಗ್ಲಾ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂಟೊ, ರಾತ್ರಿ ಮಲಗುವಾಗಲೂ ಟ್ರೋಫಿಯನ್ನು ಪಕ್ಕದಲ್ಲೇ ಇಟ್ಟು ಮಲಗಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಹೀಗೊಂದು ಸಂಭ್ರಮ ಶುರುವಾಗಿದ್ದು ಟೀಮ್​​ ಇಂಡಿಯಾ ನಾಯಕ ರೋಹಿತ್ ಶರ್ಮ ಅವರಿಂದ.

ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಆಯೋಜಿಸಿದ್ದ ಟಿ20 ವಿಶ್ವಕಪ್-2024ರಲ್ಲಿ ಭಾರತ ಗೆಲುವು ಸಾಧಿಸಿದ್ದು ಗೊತ್ತೇ ಇದೆ. ಫೈನಲ್ ಪಂದ್ಯದ ನಂತರ, ಹಿಟ್‌ಮ್ಯಾನ್ ಮಲಗಲು ಹೋದರು. ಈ ವೇಳೆ ವಿಶ್ವಕಪ್ ಅನ್ನು ಇದೇ ರೀತಿ ಬದಿಗಿಟ್ಟಕೊಂಡಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಆ ಸಮಯದಲ್ಲಿಯೂ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದವು. ಇದೀಗ ನಜ್ಮುಲ್ ಶಾಂಟೊ, ರೋಹಿತ್​ರನ್ನು ನಕಲು ಮಾಡಿದ್ದಾರೆ ಎಂದು ಎಲ್ಲರು ಮಾತನಾಡಿಕೊಳ್ಳುತ್ತಿದ್ದಾರೆ.

ಬಾಂಗ್ಲಾ ನಾಯಕ ತನ್ನ ಪಕ್ಕದಲ್ಲಿ ಟ್ರೋಫಿಯೊಂದಿಗೆ ನಿದ್ದೆ ಮಾಡುತ್ತಿರುವ ಫೋಟೋಗಳಿಗೆ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ವಿಶ್ವಕಪ್ ಎಲ್ಲಿ? ಪಾಕಿಸ್ತಾನದ ವಿರುದ್ಧ ಗೆದ್ದ ಟ್ರೋಫಿ ಎಲ್ಲಿ? ಎರಡೂ ಒಂದೇನಾ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟೀಮ್​ ಇಂಡಿಯಾ ಜೊತೆ ಮುಂದಿನ ಸರಣಿ ಇರುವುದರಿಂದ ಹಿಟ್ ಮ್ಯಾನ್ ಅನುಕರಣೆ ಮಾಡಿ ಪ್ರಚೋದನೆ ನೀಡುತ್ತಿದ್ದಾರೆ. ಆದರೆ, ಇದೆಲ್ಲ ನಮ್ಮತ್ರ ನಡೆಯಲ್ಲ ಎಂಬ ಕಾಮೆಂಟ್​ಗಳು ಕೂಡ ಬಂದಿವೆ. ಇನ್ನು ಈ ಫೋಟೋ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net