ಅವರಂತೆ ಬ್ಯಾಟ್​ ಮಾಡಲು ನನ್ನಿಂದ ಸಾಧ್ಯವಿಲ್ಲ: ಚೇತೇಶ್ವರ್​ ಪೂಜಾರ ಹೊಗಳಿದ ವಿದೇಶಿ ಸ್ಟಾರ್ ಬ್ಯಾಟರ್​

ವಿಜಯವಾಣಿ - 2024-08-04T171528.779
Published on

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದಲ್ಲಿ ತಮ್ಮ ಬ್ಯಾಟಿಂಗ್ ವೈಖರಿಯಿಂದಲೇ ಎಲ್ಲರ ಗಮನಸೆಳೆದಿರುವ ಚೇತೇಶ್ವರ್​ ಪೂಜಾರ, ಏಕದಿನ ಮತ್ತು ಟಿ20 ಪಂದ್ಯಗಳಿಗಿಂತಲೂ ಹೆಚ್ಚು ಹೆಸರುವಾಸಿಯಾಗಿರುವುದು ಟೆಸ್ಟ್​ ಅಖಾಡದಲ್ಲಿ. ಟೆಸ್ಟ್​ ಮ್ಯಾಚ್​ಗಳಲ್ಲಿ ಕ್ರೀಸ್​ಗೆ ಅಂಟಿ ನಿಲ್ಲುವ ಪೂಜಾರಾ, ಎದುರಾಳಿ ಬೌಲರ್​ಗಳ ಬೆವರಿಳಿಸುವಲ್ಲಿ ನಿಸ್ಸೀಮರು. ಇಂದಿಗೂ ಕೂಡ ಚೇತೇಶ್ವರ್​​ ಬ್ಯಾಟಿಂಗ್​ ಶೈಲಿಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಇದೆಲ್ಲದರ ನಡುವೆ ಬಾಂಗ್ಲಾದೇಶದ ಸ್ಟಾರ್​ ಬ್ಯಾಟರ್​​ ಪೂಜಾರಾರಂತೆ ತಾನು ಬ್ಯಾಟಿಂಗ್ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿರುವುದು ಇದೀಗ ಕ್ರಿಕೆಟ್ ಪ್ರಿಯರಲ್ಲಿ ಭಾರೀ ಆಶ್ಚರ್ಯ ಮೂಡಿಸಿದೆ.

ಬಾಂಗ್ಲಾ ಕ್ರಿಕೆಟ್​ ತಂಡದ ಓಪನಿಂಗ್ ಬ್ಯಾಟ್ಸ್​ಮನ್​ ಜಾಕಿರ್ ಹಸನ್​ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡುವ ವೇಳೆ ಪೂಜಾರರನ್ನು ಹಾಡಿಹೊಗಳಿದ್ದಾರೆ. "ಟೆಸ್ಟ್ ಕ್ರಿಕೆಟ್​ನಲ್ಲಿ ಖಂಡಿತ ಅವರಂತೆ ನಾನು ಆಡಲು ಸಾಧ್ಯವೇ ಇಲ್ಲ. ಒಂದು ಗಟ್ಟಿಯಾದ ಇನ್ನಿಂಗ್ಸ್​ ಆಡುವ ಸಾಮರ್ಥ್ಯ ಅವರಿಗಿದೆ. ಟೆಸ್ಟ್ ಫಾರ್ಮೆಟ್​ನಲ್ಲಿ ಟೀಮ್ ಇಂಡಿಯಾದ ಬೆಸ್ಟ್ ಬ್ಯಾಟ್ಸ್​ಮನ್​ ಪೂಜಾರ. ತಂಡದ ಯಶಸ್ಸಿಗೆ ಕಾರಣ ಅವರ ಮೂರನೇ ಕ್ರಮಾಂಕದ ಬ್ಯಾಟಿಂಗ್. ಬಲಿಷ್ಠ ಟೀಮ್​ಗಳ ವಿರುದ್ಧ ಪೂಜಾರ ಆಡಿರುವ ಇನ್ನಿಂಗ್ಸ್​ ಈಗಲೂ ನನಗೆ ನೆನಪಿದೆ" ಎಂದಿದ್ದಾರೆ.

“ನಮ್ಮ ಬ್ಯಾಟರ್‌ಗಳು ಕೂಡ ಅವರಂತೆಯೇ ಬ್ಯಾಟಿಂಗ್ ಮಾಡಬಹುದು. ಆದ್ರೆ, ಅದು ನಡೆಯುತ್ತಿರುವ ಪಂದ್ಯದ ಪರಿಸ್ಥಿತಿ ಮತ್ತು ಟೀಮ್​ನ ಪ್ಲ್ಯಾನಿಂಗ್​ ಮೇಲೆ ಅವಲಂಬಿಸಿರುತ್ತದೆ. ಈ ವಿಷಯದಲ್ಲಿ ಭಾರತೀಯ ಬ್ಯಾಟ್ಸ್​ಮನ್​ಗಳ ಪಾತ್ರ ಸಂಪೂರ್ಣವಾಗಿ ವಿಭಿನ್ನ. ಟೆಸ್ಟ್​ ಇನ್ನಿಂಗ್ಸ್​ ರನ್​ಗಳ ಕೊಡುಗೆ ಜತೆಗೆ ಕ್ರೀಸ್​ನಲ್ಲಿ ಹೆಚ್ಚು ಕಾಲ ನಿಂತು ಆಡುವ ಸಾಮರ್ಥ್ಯ ಪೂಜಾರಗೆ ಮಾತ್ರ ಇರುವುದು. ತಮ್ಮ ಎದುರಾಳಿ ಬೌಲರ್​ಗಳನ್ನು ಪರದಾಡಿಸುವಲ್ಲಿ ಅವರು ನಿಸ್ಸೀಮರು" ಎಂದು ಗುಣಗಾನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net