

ಬೆಂಗಳೂರು: ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್, ಅಖಿಲ ಭಾರತ ಚೆಸ್ ಫೆಡರೇಶನ್ ಮತ್ತು ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ ಆಶ್ರಯದಲ್ಲಿ ಬೆಂಗಳೂರು ನಗರ ಜಿಲ್ಲಾ ಚೆಸ್ ಅಸೋಸಿಯೇಷನ್ (BUDCA) ಮೊದಲ ಬೆಂಗಳೂರು ಅಂತಾರಾಷ್ಟ್ರೀಯ ಗ್ರಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ನಿಯನ್ನು ಆಯೋಜಿಸಲು ಸಜ್ಜಾಗಿದೆ. ಕರ್ನಾಟಕ ಸರ್ಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ, ಭಾರತೀಯ ಕ್ರೀಡಾ ಪ್ರಾಧಿಕಾರ, ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್, ನೆಹರು ಯುವ ಕೇಂದ್ರ ಸಂಘಟನೆ, ಭಾರತ ಸರ್ಕಾರ ಮತ್ತು ಎಫ್‌ಐಡಿಇ ಸಹಯೋಗದೊಂದಿಗೆ ಮುಂದಿನ ವರ್ಷ ಜನವರಿ 18ರಿಂದ 26ರವರೆಗೆ ಕಂಠೀರವರ ಒಳಾಂಗಣ ಕ್ರೀಡಾಂಗಣದಲ್ಲಿ ಈ ಚೆಸ್ ಟೂರ್ನಿ ನಡೆಯಲಿದೆ.
ಈ ಟೂರ್ನಿಯಲ್ಲಿ 50 ಗ್ರಾಂಡ್ ಮಾಸ್ಟರ್‌ಗಳು ಸೇರಿದಂತೆ ಭಾರತ ಮತ್ತು ಇತರ 18 ದೇಶಗಳ 1,500 ಆಟಗಾರರು ಭಾಗವಹಿಸಲಿದ್ದಾರೆ. ಈ ಟೂರ್ನಿಯು ಭಾರತದಲ್ಲಿ ಚೆಸ್ ಆಟದ ಬಗ್ಗೆ ಹೆಚ್ಚುತ್ತಿರುವ ಆಸಕ್ತಿ ಮತ್ತು ಜನಪ್ರಿಯತೆಗೆ ಸಾಕ್ಷಿಯಾಗಿದೆ. ಈಗ ಭಾರತ ಉನ್ನತ ಶ್ರೇಯಾಂಕಗಳೊಂದಿಗೆ 80 ಗ್ರಾಂಡ್ ಮಾಸ್ಟರ್‌ಗಳನ್ನು ಹೊಂದಿದೆ. ಡಿ. ಗುಕೇಶ್, ಆರ್. ಪ್ರಗ್ನಾನಂದ, ಅರ್ಜುನ್ ಎರಿಗೈಸಿ ಮತ್ತು ನಿಹಾಲ್ ಸರಿನ್ ಅವರಂಥ ಆಟಗಾರರು ಭಾರತೀಯ ಚೆಸ್ ಅನ್ನು ಮರುವ್ಯಾಖ್ಯಾನಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದಾರೆ. ಇತ್ತೀಚಿನ ಫಿಡೆ ಚೆಸ್ ವಿಶ್ವಕಪ್ನಲ್ಲಿ ಭಾರತದ ಪ್ರಗ್ನಾನಂದ ಅವರು ಫೈನಲ್ ತಲುಪಿದ್ದರು. ಟೂರ್ನಿಗೆ ಸಂಬಂಧಿಸಿದ ಮಾಹಿತಿಗಾಗಿ www.budca64.com ಗೆ ಭೇಟಿ ನೀಡಬಹುದು.
ಬೆಂಗಳೂರಿನಲ್ಲಿರುವ ಕಂಠೀರವ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಶುಭಾ ಹೆಬ್ಬಾರ್ (ಕಾರ್ಯದರ್ಶಿ, BUDCA), ಸೌಮ್ಯ ಎಂ ಯು (ಅಧ್ಯಕ್ಷರು, BUDCA), ಡಿ.ಪಿ.ಅನಂತ (ಅಧ್ಯಕ್ಷರು, KSCA), ಅರವಿಂದ್ ಶಾಸ್ತ್ರಿ (ಕಾರ್ಯದರ್ಶಿ, KSCA), ಡಬ್ಲ್ಯುಐಎಂ ಮಿಸ್ ಇಶಾ ಶರ್ಮಾ, ಸುಜಾತಾ ಅರ್ಜುನ್ (ಜಂಟಿ ಕಾರ್ಯದರ್ಶಿ BUDCA), ವಿದ್ಯಾ ಗುರುರಾಜ್ (ಖಜಾಂಚಿ, BUDCA), ಭಾರ್ಗವಿ ಭಾರತ್ (ಉಪಾಧ್ಯಕ್ಷರು, BUDCA), ನಳಿನಿ ಕುಮಾರ (ಉಪಾಧ್ಯಕ್ಷರು, BUDCA), ಜಯಂತಿ ಹನುಮಂತ (ಉಪಾಧ್ಯಕ್ಷರು, BUDCA) ಮತ್ತು ವಸಂತ ಬಿ ಹೆಚ್ (ಜಂಟಿ ಕಾರ್ಯದರ್ಶಿ, KSCA) ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.
ಟೂರ್ನಿಯ ಮುಖ್ಯಾಂಶಗಳು:
ಬಹುಮಾನದ ಮೊತ್ತ: ಒಟ್ಟು 50 ಲಕ್ಷ ರೂ. ಬಹುಮಾನ ಹೊಂದಿರುವ ಈ ಸ್ಪರ್ಧೆಯಲ್ಲಿ ಪ್ರಪಂಚದಾದ್ಯಂತದ ಉನ್ನತ ಪ್ರತಿಭೆಗಳು ಭಾಗವಹಿಸಲಿವೆ.
ಚಾಲೆಂಜರ್ ಟೂರ್ನಿ: 2000 Elo ಗಿಂತ ಕಡಿಮೆ ರೇಟಿಂಗ್ ಹೊಂದಿರುವ ಸುಮಾರು 1000 ಆಟಗಾರರು ಜನವರಿ 18 ರಿಂದ 22, 2024 ರವರೆಗೆ ಚಾಲೆಂಜರ್ ಟೂರ್ನಿಯಲ್ಲಿ ಸ್ಪರ್ಧಿಸಲಿದ್ದಾರೆ.
ಗೌರವಾನ್ವಿತ ಅತಿಥಿಗಳು: ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಫರೀದ್ ಮತ್ತು ನೆಹರು ಯುವ ಕೇಂದ್ರ ಸಂಘಟನೆಯ ಪ್ರಾದೇಶಿಕ ನಿರ್ದೇಶಕ ಎಂ.ಎನ್.ನಟರಾಜ್, BUDCA ಅಧ್ಯಕ್ಷೆ ಸೌಮ್ಯ MU ಮತ್ತು ತಂಡ BUDCA ಈ ಟೂರ್ನಿಗೆ ಸಾಕ್ಷಿಯಾಗಲಿದೆ.
ಮಹಿಳಾ ಇಂಟರ್ನ್ಯಾಷನಲ್ ಮಾಸ್ಟರ್: ಕರ್ನಾಟಕದ ಏಕೈಕ ಮಹಿಳಾ ಇಂಟರ್ನ್ಯಾಷನಲ್ ಮಾಸ್ಟರ್ ಆಗಿರುವ WIM ಇಶಾ ಶರ್ಮ ಅವರು ಟೂರ್ನಿಯ ಅವಿಭಾಜ್ಯ ಅಂಗವಾಗಿದ್ದು, ಚೆಸ್‌ನಲ್ಲಿ ಮಹಿಳೆಯರಿಗೆ ಪ್ರೋತ್ಸಾಹ ಮತ್ತು ಸ್ಫೂರ್ತಿ ನೀಡಲಿದ್ದಾರೆ.