ಚೆಂಡಿಗೆ ಬೆವರು ಹಚ್ಚಿ, ಎಂಜಲು ಬೇಡ!

swat ball-web
Published on

ನವದೆಹಲಿ: ಚೆಂಡು ಪಾಲಿಶ್ ಮಾಡಲು ಎಂಜಲು ಹಚ್ಚುವುದನ್ನು ನಿಷೇಧಿಸಬೇಕೆಂದು ಕನ್ನಡಿಗ ಅನಿಲ್ ಕುಂಬ್ಳೆ ಸಾರಥ್ಯದ ಐಸಿಸಿ ಕ್ರಿಕೆಟ್ ಸಮಿತಿ ಶಿಾರಸು ಮಾಡಿದೆ. ಆದರೆ ಬೌಲರ್‌ಗಳಿಗೆ ಚೆಂಡು ಪಾಲಿಶ್ ಮಾಡಲು ಬೆವರು ಹಚ್ಚುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕ್ರಿಕೆಟ್ ಸಮಿತಿಯ ಸಭೆಯಲ್ಲಿ, ಕರೊನಾ ಭೀತಿಯ ನಡುವೆ ಕ್ರಿಕೆಟಿಗರ ಆರೋಗ್ಯದ ದೃಷ್ಟಿಯಿಂದ ಎಂಜಲು ಹಚ್ಚುವುದನ್ನು ನಿರ್ಬಂಧಿಸಬೇಕೆಂದು ಐಸಿಸಿಗೆ ಶಿಾರಸು ಮಾಡಲಾಗಿದೆ. ಆದರೆ ಚೆಂಡಿಗೆ ಬೆವರು ಹಚ್ಚುವುದನ್ನು ಮುಂದುವರಿಸಬಹುದಾಗಿದೆ. ಬೆವರಿನಿಂದ ಕರೊನಾ ಸೋಂಕು ಹರಡುತ್ತದೆ ಯಾವುದೇ ವೈಜ್ಞಾನಿಕ ಪುಷ್ಠಿ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ. ಜತೆಗೆ ಚೆಂಡಿನ ಪಾಲಿಶ್‌ಗೆ ಮೇಣ, ವ್ಯಾಸಲಿನ್ ಮತ್ತಿತರ ಕೃತಕ ವಸ್ತುಗಳನ್ನು ಬಳಸುವುದಕ್ಕೆ ಅವಕಾಶ ನೀಡುವುದು ಬೇಡ. ಅಂಥದ್ದನ್ನು ಬಳಸಿದರೆ ಅದನ್ನು ಚೆಂಡು ವಿರೂಪ ಎಂದೇ ಪರಿಗಣಿಸಬೇಕು ಎಂದೂ ಸಮಿತಿ ಅಭಿಪ್ರಾಯಪಟ್ಟಿದೆ. ಬ್ಯಾಟ್ಸ್‌ಮನ್‌ಗಳ ಮೇಲುಗೈ ಆಗದಂತೆ ತಡೆಯಲು ಪಿಚ್‌ಗಳನ್ನು ಬೌಲರ್-ಸ್ನೇಹಿಯಾಗಿ ಮಾಡಬೇಕು ಎಂದೂ ಸಮಿತಿ ಸದಸ್ಯರು ಹೇಳಿದ್ದಾರೆ.

ಕ್ರಿಕೆಟ್ ಪುನರಾರಂಭದ ವೇಳೆ ಈ ಮಧ್ಯಂತರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ದಿಗ್ಗಜ ರಾಹುಲ್ ದ್ರಾವಿಡ್ ಅವರನ್ನೂ ಒಳಗೊಂಡ ಸಮಿತಿ ಶಿಾರಸು ಮಾಡಿದೆ. ಮೇ 28ರಂದು ನಡೆಯಲಿರುವ ಐಸಿಸಿ ಸಭೆಯಲ್ಲಿ ಈ ಶಿಾರಸುಗಳಿಗೆ ಅಂಗೀಕಾರ ದೊರೆಯುವ ನಿರೀಕ್ಷೆ ಇದೆ. ಇದರಿಂದ ಕ್ರಿಕೆಟ್ ಚಟುವಟಿಕೆ ಪುನರಾರಂಭಗೊಂಡಾಗ ಈ ಶಿಾರಸುಗಳು ನಿಯಮಗಳಾಗಿ ಜಾರಿಗೆ ಬರಲಿವೆ. ಮಹೇಲ ಜಯವರ್ಧನೆ, ಆಂಡ್ರೋ ಸ್ಟ್ರಾಸ್, ಬೆಲಿಂಡಾ ಕ್ಲಾರ್ಕ್ ಮತ್ತು ಮಿಕ್ಕಿ ಆರ್ಥರ್, ರಿಚರ್ಡ್ ಎಲ್ಲಿಂಗ್‌ವರ್ತ್ ಸಮಿತಿಯ ಇತರ ಸದಸ್ಯರಾಗಿದ್ದಾರೆ.

ಚೆಂಡು ಪಾಲಿಶ್ ಯಾಕೆ?
ಪ್ರಮುಖವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಬೌಲರ್‌ಗಳು ಚೆಂಡನ್ನು ಸ್ವಿಂಗ್ ಮಾಡಲು ಚೆಂಡಿನ ಒಂದು ಬದಿಯನ್ನು ಒರಟು, ಮತ್ತೊಂದು ಬದಿಯನ್ನು ಹೊಳಪು ಮಾಡುವುದು ಅಗತ್ಯವಾಗಿರುತ್ತದೆ. ಹೀಗೆ ಚೆಂಡಿನ ಒಂದು ಬದಿಯನ್ನು ಪಾಲಿಶ್ ಮಾಡಲು ಆಟಗಾರರು ಎಂಜಲು ಮತ್ತು ಬೆವರನ್ನು ಚೆಂಡಿಗೆ ಹಚ್ಚಿ ಉಜ್ಜುತ್ತಾರೆ.

ತಟಸ್ಥ ಅಂಪೈರ್‌ಗಳು ಬೇಡ
ಎಲ್ಲ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಇಬ್ಬರೂ ತಟಸ್ಥವಲ್ಲದ ಅಂಪೈರ್‌ಗಳನ್ನು (ಆತಿಥೇಯ ದೇಶದ) ನೇಮಿಸಬೇಕೆಂಬ ಪ್ರಸ್ತಾಪವನ್ನೂ ಇಡಲಾಗಿದೆ. ಡಿಆರ್‌ಎಸ್ ಇರುವುದರಿಂದ ಅಂಪೈರ್‌ಗಳ ತೀರ್ಪಿನಲ್ಲಿ ನಿಖರತೆ ಇರುತ್ತದೆ. ಜತೆಗೆ ಪ್ರಯಾಣವನ್ನೂ ತಪ್ಪಿಸಿದಂತಾಗಲಿದೆ ಎಂದು ಸಮಿತಿ ಹೇಳಿದೆ. ಜತೆಗೆ ಪ್ರತಿ ಇನಿಂಗ್ಸ್‌ನಲ್ಲಿ ಡಿಆರ್‌ಎಸ್ ಸಂಖ್ಯೆಯನ್ನು 2ರಿಂದ 3ಕ್ಕೆ ಹೆಚ್ಚಿಸಬೇಕೆಂದು ಶಿಾರಸು ಮಾಡಲಾಗಿದೆ. ಪಾರದರ್ಶಕತೆಗಾಗಿ ಕ್ರಿಕೆಟ್‌ನಲ್ಲಿ 2002ರಿಂದ ತಟಸ್ಥ ಅಂಪೈರ್‌ಗಳ ಬಳಕೆ ಜಾರಿಯಲ್ಲಿದೆ. ಟೆಸ್ಟ್‌ನಲ್ಲಿ ಇಬ್ಬರೂ ತಟಸ್ಥ ಅಂಪೈರ್‌ಗಳಿದ್ದರೆ, ಏಕದಿನದಲ್ಲಿ ಒಬ್ಬರು ತಟಸ್ಥ ಅಂಪೈರ್ ಇರಬೇಕೆಂಬ ನಿಯಮವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net