More

    ಕ್ರೀಡೆ ಪುನರಾರಂಭ ಸುಲಭವಲ್ಲ! ಸ್ಟೇಡಿಯಂ ತೆರೆದರೂ ತಪ್ಪದ ಕರೊನಾ ಭೀತಿ

    ಕರೊನಾ ಭೀತಿ ಸಂಪೂರ್ಣ ನಿವಾರಣೆ ಆಗದಿದ್ದರೂ, ಕ್ರೀಡಾ ಚಟುವಟಿಕೆ ಪುನರಾರಂಭಕ್ಕೆ ವೇದಿಕೆ ಸಜ್ಜಾಗುತ್ತಿವೆ. ಆದರೆ ಇತರ ಕೆಲ ಚಟುವಟಿಕೆಗಳಂತೆ ವೃತ್ತಿಪರ ಕ್ರೀಡೆಯನ್ನು ಮತ್ತೆ ಆರಂಭಿಸುವುದು ಸುಲಭವಲ್ಲ. ಕ್ರೀಡೆಯನ್ನು ಪುನರಾರಂಭ ಮಾಡಬೇಕಾದರೆ ಹಲವು ಸವಾಲುಗಳನ್ನು ದಿಟ್ಟವಾಗಿ ಎದುರಿಸಬೇಕಾಗುತ್ತದೆ. ಹಿಂದಿನ ಸಹಜಸ್ಥಿತಿಗೆ ಬರಲು ತಿಂಗಳುಗಳಲ್ಲ, ವರ್ಷಗಳೇ ಬೇಕಾಗಬಹುದು. ವೃತ್ತಿಪರ ಕ್ರೀಡೆಗಳ ಪುನರಾರಂಭಕ್ಕೆ ಇರುವ ಸವಾಲುಗಳ ಸಂಕ್ಷಿಪ್ತ ವಿವರ ಇಲ್ಲಿದೆ.

    ಎಲ್ಲರಿಗೂ ಕರೊನಾ ವೈರಸ್ ಟೆಸ್ಟ್: ಈಗಾಗಲೆ ಯುರೋಪ್​ನಲ್ಲಿ ಫುಟ್​ಬಾಲ್ ಚಟುವಟಿಕೆಗಳನ್ನು ಮತ್ತೆ ಆರಂಭಿಸುವ ಪ್ರಯತ್ನದ ಮೊದಲ ಭಾಗವಾಗಿ ಎಲ್ಲ ಆಟಗಾರರಿಗೂ ಕರೊನಾ ಟೆಸ್ಟ್ ಮಾಡಲಾಗಿದೆ. ಭಾರತದಲ್ಲೂ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಶಿಬಿರಗಳಿಗೆ ಮರಳುವಾಗ ಕರೊನಾ ಟೆಸ್ಟ್​ಗೆ ಒಳಪಡುವುದು ಅಗತ್ಯವಾಗಿದೆ. ಈ ಪ್ರಕ್ರಿಯೆಗೆ 5-7 ದಿನಗಳ ಸಮಯ ಬೇಕಾಗುತ್ತದೆ. ಕ್ರೀಡಾ ಸಂಸ್ಥೆಗಳ ವೆಚ್ಚವೂ ಏರಿಕೆಯಾಗಲಿದೆ.

    ದೇಶ-ವಿದೇಶ ಪ್ರಯಾಣ ತಾಪತ್ರಯ: ಲಾಕ್​ಡೌನ್ ಸಡಿಲಗೊಂಡಿದ್ದರೂ, ಎಲ್ಲ ರೀತಿಯ ಸಾರಿಗೆ ವ್ಯವಸ್ಥೆಗಳು ಒಮ್ಮೆಲೆ ಪೂರ್ಣ ಪ್ರಮಾಣದಲ್ಲಿ ಆರಂಭ ಕಂಡಿಲ್ಲ. ಇದರಿಂದ ಕ್ರೀಡಾಪಟುಗಳಿಗೆ ಅಭ್ಯಾಸ, ತರಬೇತಿ ಶಿಬಿರಗಳನ್ನು ಸೇರಿಕೊಳ್ಳುವುದು ಕಠಿಣವಾಗಿದೆ. ದೂರದೂರದ ನಗರಗಳಿಗೆ ಪ್ರಯಾಣಿಸಲು ತಾಪತ್ರಯ ಎದುರಾಗಲಿದೆ.

    ಕಡ್ಡಾಯ ಕ್ವಾರಂಟೈನ್: ಕ್ರೀಡಾಪಟುಗಳು ಹೊಸ ಸ್ಥಳಕ್ಕೆ ಹೋದಾಗ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಹೀಗಾಗಿ ಅಲ್ಲಿಗೆ ಹೊಂದಿಕೊಳ್ಳಲು ಅಭ್ಯಾಸ ನಡೆಸುವುದು ಅಥವಾ ಅಭ್ಯಾಸ ಪಂದ್ಯಗಳನ್ನು ಆಡುವುದು ವಾಡಿಕೆ. ಆದರೆ ಕರೊನಾ ನಂತರದಲ್ಲಿ ಕ್ರೀಡಾಪಟುಗಳು ಹೊಸ ಸ್ಥಳ ಅಥವಾ ವಿದೇಶಕ್ಕೆ ಹೋದಾಗ ಕ್ವಾರಂಟೈನ್​ಗೆ ಒಳಪಡುವುದು ಕಡ್ಡಾಯವಾಗಬಹುದು. ತವರು ದೇಶ ಪೋರ್ಚುಗಲ್​ನಿಂದ ಸೆರೀ ಎ ಪುನರಾರಂಭದ ಸಿದ್ಧತೆಗಾಗಿ ಜುವೆಂಟಸ್ ತಂಡ ಕೂಡಿಕೊಳ್ಳಲು ಇಟಲಿಗೆ ಹೋದ ಫುಟ್​ಬಾಲ್ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ 14 ದಿನಗಳ ಕ್ವಾರಂಟೈನ್​ನಲ್ಲಿದ್ದರು. ಐಪಿಎಲ್​ಗೆ ವಿದೇಶಿ ಆಟಗಾರರು ಬಂದರೂ ಇದೇ ಸವಾಲು ಎದುರಾಗಲಿದೆ.

    ಒಬ್ಬ ಪಾಸಿಟಿವ್ ಆದರೂ ಎಲ್ಲ ಬಂದ್!:ಜರ್ಮನಿಯಲ್ಲಿ ಫುಟ್​ಬಾಲ್ ಲೀಗ್​ಗೆ ಮರುಚಾಲನೆ ನೀಡುವ ಮುನ್ನ ನಡೆಸಿದ ಪರೀಕ್ಷೆಯಲ್ಲಿ ಕೆಲ ಆಟಗಾರರ ವರದಿ ಪಾಸಿಟಿವ್ ಬಂದಿತ್ತು. ಒಂದು ತಂಡವನ್ನೇ ಕ್ವಾರಂಟೈನ್ ಮಾಡಲಾಗಿದೆ. ಇದರಿಂದ ಟೂರ್ನಿ ಆರಂಭದ ಬಗ್ಗೆಯೇ ಅನುಮಾನ ಮೂಡಿತ್ತು. ಇದೇ ರೀತಿ, ಆಟಗಾರನೊಬ್ಬ ಪಾಸಿಟಿವ್ ಆದರೂ ಇತರ ಕ್ರೀಡೆಗಳಿಗೂ ಸವಾಲು ಎದುರಾಗಲಿದೆ. ಉದಾಹರಣೆಗೆ, ಕರೊನಾ ಭೀತಿಯ ನಡುವೆಯೂ ಐಪಿಎಲ್ ಶುರುವಾಗಿ ಟೂರ್ನಿ ನಡುವೆ ಪಂದ್ಯದಲ್ಲಿ ಪಾಲ್ಗೊಂಡಿದ್ದ ಒಬ್ಬರಿಗೆ ಪಾಸಿಟಿವ್ ಬಂದರೂ, ಆ ತಂಡ ಕ್ವಾರಂಟೈನ್ ಆಗಲಿದ್ದು, ಟೂರ್ನಿ ತೂಗುಯ್ಯಾಲೆಯಲ್ಲಿ ನಿಲ್ಲುತ್ತದೆ.

    ಸಾಮಾಜಿಕ ಅಂತರ ಅಗತ್ಯ: ಕರೊನಾ ಹರಡುವಿಕೆ ತಡೆಗಟ್ಟಲು ಇರುವ ಪ್ರಮುಖ ನಿಯಮ ಸಾಮಾಜಿಕ ಅಂತರ. ಆದರೆ ಕ್ರೀಡಾ ಚಟುವಟಿಕೆಗಳ ವೇಳೆ ಇದೇ ಅತಿದೊಡ್ಡ ಸವಾಲಾಗಿರುತ್ತದೆ. ಅದರಲ್ಲೂ ದೈಹಿಕ ಸ್ಪರ್ಶದ ಕ್ರೀಡೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಖಂಡಿತಾ ಸಾಧ್ಯವಾಗದು. ಬಹುಶಃ ಇಂಥ ಕ್ರೀಡೆಗಳನ್ನು ಸದ್ಯಕ್ಕೆ ಪುನರಾರಂಭ ಮಾಡುವುದೇ ಸಾಧ್ಯವಾಗದು. ಕನಿಷ್ಠ ಅಭ್ಯಾಸಕ್ಕೂ ಅವಕಾಶ ಲಭಿಸುವುದು ಅನುಮಾನ. ಇನ್ನು ಕ್ರಿಕೆಟ್, ಫುಟ್​ಬಾಲ್, ಹಾಕಿಯಂಥ ಕ್ರೀಡೆಗಳನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಆಡುವುದು ಕಠಿಣವಲ್ಲ.

    ಪ್ರೇಕ್ಷಕರಿಲ್ಲದ ಆಟ ನೀರಸ: ಕ್ರೀಡಾಸ್ಪರ್ಧೆಗಳ ಪುನರಾರಂಭಕ್ಕೆ ಎಲ್ಲೆಡೆ ಅನುಸರಿಸಲು ಮುಂದಾಗಿರುವ ಮೊದಲ ನಿಯಮ, ಪ್ರೇಕ್ಷಕರಿಗೆ ಅವಕಾಶ ನೀಡದಿರುವುದು. ಆದರೆ ಪ್ರೇಕ್ಷಕರೇ ಇಲ್ಲದ ಕ್ರೀಡೆ ನಿಜಕ್ಕೂ ಮಜಾ ನೀಡಲಿದೆಯೇ ಎಂಬ ಪ್ರಶ್ನೆಯೂ ಮೂಡುತ್ತದೆ. ಫುಟ್​ಬಾಲ್, ಕ್ರಿಕೆಟ್​ನಂಥ ಕ್ರೀಡೆಗಳಿಗೆ ಪ್ರೇಕ್ಷಕರೂ ಪ್ರಮುಖ ಅಂಗ. ಅವರ ಹಷೋದ್ಗಾರದಿಂದಲೇ ಪಂದ್ಯದ ಉತ್ಸಾಹವೇ ಬದಲಾಗಿ ಬಿಡುತ್ತದೆ. ಹೀಗಾಗಿ ಖಾಲಿ ಕ್ರೀಡಾಂಗಣದಲ್ಲಿ ಆಡುವುದು ನೀರಸವೆನಿಸಬಹುದು ಮತ್ತು ಆಟಗಾರರೂ ಉತ್ಸಾಹ ಕಳೆದುಕೊಳ್ಳಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts