ಕುಸ್ತಿಪಟು ಭಜರಂಗ್​ ಪೂನಿಯಾ ಪದ್ಮಶ್ರೀ ಪ್ರಶಸ್ತಿ ವಾಪಸ್​; ಪ್ರಧಾನಿ ಮೋದಿ ಭೇಟಿಗೆ ಪೊಲೀಸರಿಂದ ತಡೆ!

bhajragn web
Published on

ನವದೆಹಲಿ: ಬ್ರಿಜ್​ಭೂಷಣ್​ ಶರಣ್​ ಸಿಂಗ್​ ಆಪ್ತ ಸಂಜಯ್​ ಸಿಂಗ್​ ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎ್​ಐ) ಅಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಪ್ರತಿಭಟಿಸಿ ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರಕ್ಕೆ ವಾಪಸ್​ ನೀಡಲು ಒಲಿಂಪಿಕ್ಸ್​ ಪದಕ ವಿಜೇತ ಕುಸ್ತಿಪಟು ಭಜರಂಗ್​ ಪೂನಿಯಾ ಶುಕ್ರವಾರ ನಿರ್ಧರಿಸಿದ್ದಾರೆ.

"ನನ್ನ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮರಳಿಸುತ್ತಿದ್ದೇನೆ. ಅವರಿಗೆ ಪತ್ರವೊಂದನ್ನೂ ಬರೆದಿರುವೆ' ಎಂದು ಭಜರಂಗ್​ ಎಕ್ಸ್​ನಲ್ಲಿ ಪೋಸ್ಟ್​ ಹಾಕಿದ್ದಾರೆ. ಗುರುವಾರವಷ್ಟೇ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ಸಾ ಮಲಿಕ್​, ಬ್ರಿಜ್​ ಆಯ್ಕೆಯನ್ನು ಪ್ರತಿಭಟಿಸಿ ಕುಸ್ತಿಗೆ ವಿದಾಯ ಘೋಷಿಸಿದ್ದರು.

"ಡಿಸೆಂಬರ್​ 21ರಂದು ನಡೆದ ಚುನಾವಣೆಯಲ್ಲಿ ಬ್ರಿಜ್​ಭೂಷಣ್​ ಬಣ ಡಬ್ಲ್ಯುಎ್​ಐನಲ್ಲಿ ಮತ್ತೆ ಅಧಿಕಾರ ಹಿಡಿದಿದೆ. ನಾವು ಇಡೀ ರಾತ್ರಿ ಕಣ್ಣೀರು ಹಾಕಿದೆವು. ಏನು ಮಾಡಬೇಕೆಂದೇ ಗೊತ್ತಾಗಲಿಲ್ಲ. ಸರ್ಕಾರ ನಮಗೆ ಸಾಕಷ್ಟು ನೀಡಿದೆ. 2019ರಲ್ಲಿ ಪದ್ಮಶ್ರೀ ನೀಡಿತ್ತು. ಅರ್ಜುನ, ಖೇಲ್​ರತ್ನ ಪ್ರಶಸ್ತಿಗಳನ್ನೂ ಪಡೆದಿರುವೆ. ಆದರೆ ಮಹಿಳೆಯೊಬ್ಬರು ಭದ್ರತೆಯ ಕೊರತೆಯಿಂದ ಕ್ರೀಡೆಯನ್ನು ತ್ಯಜಿಸಿರುವುದು ಬೇಸರ ತಂದಿದೆ. ಕ್ರೀಡೆ ನಮ್ಮ ಮಹಿಳಾ ಕ್ರೀಡಾಪಟುಗಳನ್ನು ಸಬಲೀಕರಣಗೊಳಿಸಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, "ಬೇಟಿ ಬಚಾವೊ, ಬೇಟಿ ಪಡಾವೊ' ಅಭಿಯಾನದ ರಾಯಭಾರಿಯೇ ಕ್ರೀಡೆಯನ್ನು ತ್ಯಜಿಸುವಂತಾಗಿದೆ. ನಮ್ಮ ಮಹಿಳಾ ಕುಸ್ತಿಪಟುಗಳಿಗೆ ಅವಮಾನವಾಗುತ್ತಿರುವಾಗ ನಾನು ಪದ್ಮಶ್ರೀ ಪುರಸತನಾಗಿ ಬದುಕಲಾರೆ. ಹೀಗಾಗಿ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿರುವೆ' ಎಂದು 29 ವರ್ಷದ ಭಜರಂಗ್​ ಹೇಳಿದ್ದಾರೆ.

ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಭಜರಂಗ್​, "ಡಿಯರ್​ ಪಿಎಂ ಜೀ, ನೀವು ಹಲವು ಕಾರ್ಯಗಳಲ್ಲಿ ಬಿಜಿಯಾಗಿರಬಹುದು. ಆದರೆ ನಾನು ದೇಶದ ಕುಸ್ತಿಪಟುಗಳತ್ತ ನಿಮ್ಮ ಗಮನವನ್ನು ಸೆಳೆಯಲು ಇದನ್ನು ಬರೆಯುತ್ತಿದ್ದೇನೆ. ಬ್ರಿಜ್​ಭೂಷಣ್​ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ಈ ವರ್ಷ ಜನವರಿಯಲ್ಲಿ ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ಮಾಡಿದ್ದು ನಿಮಗೆ ಗೊತ್ತಿರಬಹುದು. ನಾನೂ ಅದರಲ್ಲಿ ಪಾಲ್ಗೊಂಡಿದ್ದೆ. ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದ ಬಳಿಕ ಪ್ರತಿಭಟನೆ ನಿಲ್ಲಿಸಲಾಗಿತ್ತು. ಆದರೆ 3 ತಿಂಗಳ ಬಳಿಕವೂ ಬ್ರಿಜ್​ಭೂಷಣ್​ ವಿರುದ್ಧ ಎ್​ಐಆರ್​ ದಾಖಲಾಗಲಿಲ್ಲ. ಏಪ್ರಿಲ್​ನಲ್ಲಿ ನಾವು ಮತ್ತೆ ಬೀದಿಗೆ ಇಳಿದಾಗ ಕೊನೆಗೂ ಪೊಲೀಸರು ಕನಿಷ್ಠ ಎ್​ಐಆರ್​ ದಾಖಲಿಸಿದರು. ಬ್ರಿಜ್​ ವಿರುದ್ಧ ಜನವರಿಯಲ್ಲಿ 19 ದೂರುಗಳಿದ್ದರೆ, ಏಪ್ರಿಲ್​ನಲ್ಲಿ 7ಕ್ಕೆ ಇಳಿದಿತ್ತು. ಅಂದರೆ ಬ್ರಿಜ್​ 12 ಮಹಿಳಾ ಕುಸ್ತಿಪಟುಗಳ ಮೇಲೆ ತನ್ನ ಪ್ರಭಾವ ಬೀರಿದ್ದರು. ನಮ್ಮ ಪ್ರತಿಭಟನೆ 40 ದಿನಗಳ ಕಾಲ ನಡೆದಿತ್ತು. ಬಳಿಕ ನಮ್ಮನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಲಾಯಿತು. ಬಳಿಕ ಏನು ಮಾಡಬೇಕೆಂದು ಗೊತ್ತಾಗದೆ ನಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ವಿಸರ್ಜಿಸಲು ತೆರಳಿದ್ದೆವು. ಆಗ ರೈತನಾಯಕರು ನಮ್ಮನ್ನು ತಡೆದರು. ಇದೇ ವೇಳೆ ನಿಮ್ಮ ಸಂಪುಟದ ಸಚಿವರು ನಮ್ಮನ್ನು ಕರೆದು ನ್ಯಾಯ ಒದಗಿಸುವ ಭರವಸೆ ನಿಡಿದರು. ನಾವು ಗೃಹ ಸಚಿವರನ್ನೂ ಭೇಟಿಯಾದೆವು ಮತ್ತು ಅವರೂ ನ್ಯಾಯದ ಭರವಸೆ ನೀಡಿದರು. ಹೀಗಾಗಿ ನಾವು ಪ್ರತಿಭಟನೆ ನಿಲ್ಲಿಸಿದ್ದೆವು' ಎಂದು ವಿವರಿಸಿದ್ದಾರೆ.

ಪ್ರಧಾನಿ ಭೇಟಿಗೆ ತಡೆ

ಸಂಜಯ್​ ಸಿಂಗ್​ ಆಯ್ಕೆಯನ್ನು ಪ್ರತಿಭಟಿಸಿ ಪತ್ರವೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಲು ಭಜರಂಗ್​ ಪೂನಿಯಾ ಶುಕ್ರವಾರ ಸಂಸತ್​ಗೆ ತೆರಳಲು ಮುಂದಾದರು. ಅವರನ್ನು ದೆಹಲಿ ಪೊಲೀಸರು ಕರ್ತವ್ಯ ಪಥದಲ್ಲೇ ತಡೆದರು. "ಪ್ರಧಾನಿ ಭೇಟಿಗೆ ನನ್ನ ಬಳಿ ಯಾವುದೇ ಅನುಮತಿ ಇಲ್ಲ. ನೀವು ಈ ಪತ್ರವನ್ನು ಪ್ರಧಾನಿಗೆ ತಲುಪಿಸಿ. ಯಾಕೆಂದರೆ ನನಗೆ ಒಳಗೆ ಹೋಗಲಾಗದು. ನಾನು ಪ್ರತಿಭಟಿಸುತ್ತಿಲ್ಲ ಅಥವಾ ಆಕ್ರಮಣಕಾರಿ ವರ್ತನೆಯನ್ನೂ ತೋರಿಸುತ್ತಿಲ್ಲ' ಎಂದು ಭಜರಂಗ್​, ತನ್ನನ್ನು ತಡೆದ ಪೊಲೀಸರಿಗೆ ತಿಳಿಸಿದರು.

ವೈಯಕ್ತಿಕ ನಿರ್ಧಾರವೆಂದ ಕ್ರೀಡಾ ಸಚಿವಾಲಯ

ಪದ್ಮಶ್ರೀ ಪ್ರಶಸ್ತಿ ಮರಳಿಸುವುದು ಭಜರಂಗ್​ ಪೂನಿಯಾರ ವೈಯಕ್ತಿಕ ನಿರ್ಧಾರವಾಗಿದೆ. ಆದರೆ ಈ ನಿರ್ಧಾರವನ್ನು ಹಿಂಪಡೆಯುವಂತೆ ಅವರ ಮನವೊಲಿಸಲು ಪ್ರಯತ್ನಿಸುವುದಾಗಿ ಕೇಂದ್ರ ಕ್ರೀಡಾ ಸಚಿವಾಲಯ ತಿಳಿಸಿದೆ. ಡಬ್ಲ್ಯುಎ್​ಐ ಚುನಾವಣೆಯನ್ನು ಸ್ವತಂತ್ರ ಮತ್ತು ಪಾರದರ್ಶಕವಾಗಿ ನಡೆಸಲಾಗಿದೆ. ಅಲ್ಲದೆ ನ್ಯಾಯಬದ್ಧ ಮತ್ತು ಪ್ರಜಾಪ್ರಭುತ್ವ ಮಾದರಿಯಲ್ಲೇ ಚುನಾವಣೆ ನಡೆದಿದೆ ಎಂದು ಸಚಿವಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net