ಅಂದು ವಿರಾಟ್​ ಕೊಹ್ಲಿ ಹೇಳಿದ ಆ ಒಂದು ಮಾತೇ ಪಿವಿ ಸಿಂಧು ಜಪಾನ್ ಓಪನ್ ಗೆಲ್ಲಲು ಕಾರಣ...! Virat Kohli

ಅಂದು ವಿರಾಟ್​ ಕೊಹ್ಲಿ ಹೇಳಿದ ಆ ಒಂದು ಮಾತೇ ಪಿವಿ ಸಿಂಧು ಜಪಾನ್ ಓಪನ್ ಗೆಲ್ಲಲು ಕಾರಣ...! Virat Kohli
ಅಂದು ವಿರಾಟ್​ ಕೊಹ್ಲಿ ಹೇಳಿದ ಆ ಒಂದು ಮಾತೇ ಪಿವಿ ಸಿಂಧು ಜಪಾನ್ ಓಪನ್ ಗೆಲ್ಲಲು ಕಾರಣ...! Virat Kohli
Published on

ಪ್ರಮುಖ ಮುಖ್ಯಾಂಶಗಳು

  • ಜಪಾನ್ ಓಪನ್ 2026 ಚಾಂಪಿಯನ್ ಆಗಿ ಇತಿಹಾಸ ಬರೆದ ಪಿ ವಿ ಸಿಂಧು
  • ವಿರಾಟ್ ಕೊಹ್ಲಿ ಸಲಹೆಯಿಂದ ಫಾರ್ಮ್‌ಗೆ ಮರಳಿ ಜಪಾನ್ ಓಪನ್ ಗೆದ್ದ ಸಿಂಧು
  • ಜಪಾನ್‌ನ ಅಕಾನೆ ಯಮಗುಚಿ ಮಣಿಸಿ ಚೊಚ್ಚಲ ಸೂಪರ್ 750 ಪ್ರಶಸ್ತಿ ಗೆದ್ದ ಸಿಂಧು
  • ಕ್ರೀಡಾ ವಿಜ್ಞಾನ ಮತ್ತು ಶಿಸ್ತಿನ ಆಹಾರ ಪದ್ಧತಿಯಿಂದ ಸಿಂಧುಗೆ ಐತಿಹಾಸಿಕ ಜಯ
ನವದೆಹಲಿ: ಕ್ರೀಡಾಪಟುವೊಬ್ಬರು ತಮ್ಮ ಕಠಿಣ ಹಂತದಿಂದ ಹೊರಬರಲು 'ಆತ್ಮವಿಶ್ವಾಸ'ವೇ ಪ್ರಮುಖ ಶಕ್ತಿ ಎಂಬುದಕ್ಕೆ ಪಿ.ವಿ. ಸಿಂಧು ( PV Sindhu ) ಅವರ ಸಾಧನೆಯೇ ಜೀವಂತ ಸಾಕ್ಷಿಯಾಗಿದೆ. ಸತತ ಎರಡು ವರ್ಷಗಳ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡು, 'ಜಪಾನ್ ಓಪನ್ 2026' ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯಳೆಂಬ ಐತಿಹಾಸಿಕ ದಾಖಲೆಯನ್ನು ಸಿಂಧು ಬರೆದಿದ್ದಾರೆ. ಇಲ್ಲಿ ಅಚ್ಚರಿಯ ಸಂಗತಿಯೇನೆಂದರೆ, ಸಿಂಧು ಅವರ ಈ ಅದ್ಭುತ ಚೇತರಿಕೆಯ ಹಿಂದೆ ಅವರ ಅಹೋರಾತ್ರಿ ಶ್ರಮದ ಜೊತೆಗೆ ಕ್ರಿಕೆಟ್​ ಲೋಕದ ಕಿಂಗ್​ ವಿರಾಟ್ ಕೊಹ್ಲಿ ( Virat Kohli ) ನೀಡಿದ ಒಂದು 'ಅಪರೂಪದ ಸಲಹೆ'ಯು ಕೂಡ ಕೆಲಸ ಮಾಡಿದೆ!
ಹೌದು, ಫಾರ್ಮ್‌ಗಾಗಿ ಪರದಾಡುತ್ತಿದ್ದ ಸಮಯದಲ್ಲಿ ಕೊಹ್ಲಿಯನ್ನು ಭೇಟಿಯಾಗಿದ್ದ ಸಿಂಧುಗೆ, "ರನ್ ಅಥವಾ ಅಂಕಗಳನ್ನು ಗಳಿಸುವ ಆಟದ ನೈಜ ಸಂತೋಷವನ್ನು ಮರಳಿ ಕಂಡುಕೊಳ್ಳಿ" ಎಂದು ಕೊಹ್ಲಿ ನೀಡಿದ ಸರಳ ಮಂತ್ರವೇ ಸಿಂಧು ಅವರಲ್ಲಿ ಹೊಸ ಹುಮ್ಮಸ್ಸು ತುಂಬಿ, ಜಪಾನ್ ಅಂಗಳದಲ್ಲಿ ಚಾಂಪಿಯನ್ ಆಗಿ ಮೆರೆಯುವಂತೆ ಮಾಡಿದೆ.
ಕಾಲುಬೆರಳಿನ ಲಿಗಮೆಂಟ್ ಹರಿದುಹೋದ ಕಾರಣ ವೈದ್ಯರು ಸಿಂಧುಗೆ ಮೂರು ತಿಂಗಳ ವಿಶ್ರಾಂತಿಗೆ ಸಲಹೆ ನೀಡಿದ್ದರು. ಈ ವಿಶ್ರಾಂತಿ ಸಮಯದಲ್ಲಿ ಯಾವುದೇ ಅಭ್ಯಾಸ ಇಲ್ಲದೇ ಎಲ್ಲಿ ಫಾರ್ಮ್ ಹೋಗಿಬಿಡುತ್ತದೆಯೋ ಅನ್ನೋ ಆತಂಕ ಸಿಂಧು ಅವರಲ್ಲಿ ಕಾಡತೊಡಗಿತು. ಈ ಮಾನಸಿಕ ಬಳಲಿಕೆಯಿಂದ ಸಿಂಧು ಅವರನ್ನು ಹೊರತರಲು ಅವರ ಪತಿ ವೆಂಕಟ ದತ್ತ ಸಾಯಿ, ಆಕೆಯನ್ನು ಅಟ್ಲಾಂಟಾಗೆ ಕರೆದೊಯ್ದರು. ಆ ಕಠಿಣ ಪರಿಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಅವರು ನೀಡಿದ್ದ ಒಂದು ಸಲಹೆಯನ್ನು ಸಿಂಧುಗೆ ನೆನಪಿಸುವುದು ಅತ್ಯಗತ್ಯವೆಂದು ಭಾವಿಸಿದ ದತ್ತ, ಬ್ಯಾಡ್ಮಿಂಟನ್ ಆಟದ ಮೇಲಿನ ಅಂದಿನ ಪ್ರೀತಿ ಹಾಗೂ ಆಟದ ನೈಜ ಸಂತೋಷವನ್ನು ಮೊದಲಿನಿಂದ ಮರುಕಟ್ಟಿಕೊಳ್ಳುವಂತೆ ಸಿಂಧುರನ್ನು ದತ್ತ ಅವರು ಪ್ರೇರೇಪಿಸಿದರು.
ನಾವು ಅವರ ಆಟದ ಆನಂದವನ್ನು ಮರಳಿ ಕಟ್ಟಿಕೊಡಬೇಕಿತ್ತು. ಆಕೆಯ ಪುನಶ್ಚೇತನದ ಹಂತದಲ್ಲಿ ವಿರಾಟ್ ಕೊಹ್ಲಿ ಅವರ ಮಾತುಗಳು ತಮ್ಮ ಮನಸ್ಸಿನಲ್ಲಿ ನಿರಂತರವಾಗಿ ನೆನಪಾಗುತ್ತಿದ್ದವು. ಅಟ್ಲಾಂಟಾದ ಎಕ್ಸೋಸ್ ಸ್ಪೋರ್ಟ್ಸ್ ಫೆಸಿಲಿಟಿಯಲ್ಲಿ ಕೇವಲ ಒಬ್ಬ ಸಾಮಾನ್ಯ ವ್ಯಕ್ತಿಯಂತೆ, ಕುಟುಂಬದ ಬೆಚ್ಚಗಿನ ವಾತಾವರಣದಲ್ಲಿ ಮೂರು ವಾರಗಳ ಕಾಲ ಪುನಶ್ಚೇತನ ಮತ್ತು ತರಬೇತಿ ಪಡೆದ ಸಿಂಧು ಅವರಲ್ಲಿ ಆಟದ ಮೇಲಿನ ಪ್ರೀತಿಯನ್ನು ಮತ್ತೆ ಚಿಗುರಿಸಲಾಯಿತು. ಅಂತಿಮವಾಗಿ 13 ಜನರ ತಂಡದ ಅಚಲ ಬೆಂಬಲದಿಂದ ಜಪಾನ್ ಓಪನ್ ಫೈನಲ್‌ನಲ್ಲಿ ಅಕಾನೆ ಯಮಗುಚಿ ಅವರನ್ನು ಮಣಿಸಿ ಸಿಂಧು ಚಾಂಪಿಯನ್ ಆಗಿ ಹೊರಹೊಮ್ಮಿದಾಗ, ಅವರ ಇಡೀ ತಂಡವೇ ಭಾವುಕರಾಗಿ ಕಣ್ಣೀರಿಟ್ಟಿತ್ತು ಎಂದು ವೆಂಕಟ ದತ್ತ ಸಾಯಿ ಅವರು ಇಂಡಿಯನ್​ ಎಕ್ಸ್​ಪ್ರೆಸ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಸಿಂಧು ಅವರ ಈ ಯಶಸ್ಸಿನಲ್ಲಿ ಕ್ರೀಡಾ ವಿಜ್ಞಾನ ಅತ್ಯಂತ ಪ್ರಮುಖ ಪಾತ್ರ ವಹಿಸಿತು. ಪ್ಯಾರಿಸ್ ಒಲಿಂಪಿಕ್ಸ್ ನಂತರದ ಅಂಕಿಅಂಶಗಳನ್ನು ಪರಿಶೀಲಿಸಿದಾಗ ಅವರಲ್ಲಿ ಎರಡು ಮುಖ್ಯ ಸಮಸ್ಯೆಗಳು ಕಂಡುಬಂದವು, ಒಂದೆಡೆ ಅವರ ಆಕ್ರಮಣಕಾರಿ ಆಟದ ವೈಖರಿ ಕಡಿಮೆಯಾಗಿತ್ತು, ಮತ್ತೊಂದೆಡೆ ಅಗ್ರ ಶ್ರೇಯಾಂಕದ ಆಟಗಾರರ ವಿರುದ್ಧ ಅಂಕ ಗಳಿಸಲು ಅವರು ಪದೇಪದೆ ಸರಣಿ ದಾಳಿಗಳನ್ನು ನೆಚ್ಚಿಕೊಳ್ಳಬೇಕಾಯಿತು, ಇದರಿಂದ ತಪ್ಪುಗಳು ಹೆಚ್ಚುತ್ತಿದ್ದವು. ಜೊತೆಗೆ, ಹಿಂದೆ ಪಂದ್ಯವೊಂದಕ್ಕೆ ಕೇವಲ ಎರಡು ಬಾರಿಯಷ್ಟೇ ಮಾಡುತ್ತಿದ್ದ 'ಲೈನ್ ಜಡ್ಜ್‌ಮೆಂಟ್'ಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿತ್ತು, ಅಂದರೆ ಅವರು ಸುಲಭವಾಗಿ ಅಂಕ ಗಳಿಸುವ ನಿರೀಕ್ಷೆಯಲ್ಲಿದ್ದರು ಎಂಬುದು ಸ್ಪಷ್ಟವಾಗಿತ್ತು ಎಂದು ದತ್ತ ತಿಳಿಸಿದ್ದಾರೆ.
ಇದರ ಜೊತೆಗೆ ಅವರ ಆಹಾರ ಪದ್ಧತಿಯೂ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಜಪಾನ್ ಓಪನ್‌ಗೂ ಮುನ್ನ ತಮ್ಮ ತರಬೇತುದಾರರ ಸಲಹೆಯಂತೆ ಸಿಂಧು ತೂಕ ಇಳಿಸಿಕೊಂಡು, 3.5 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡರು. ಪ್ರೋಟೀನ್‌ಗಾಗಿ ಕೋಳಿ ಮಾಂಸ ಅವರ ಮುಖ್ಯ ಆಹಾರವಾಗಿದ್ದರೂ, ಟೋಕಿಯೋದಲ್ಲಿ ಐತಿಹಾಸಿಕ ಪ್ರಶಸ್ತಿ ಗೆದ್ದು ಚಾಂಪಿಯನ್ ಆದ ನಂತರ ಅವರಿಗೆ ನೆಚ್ಚಿನ ಐಸ್‌ಕ್ರೀಮ್ ನೀಡುವ ಮೂಲಕ ಯಶಸ್ಸನ್ನು ಸಂಭ್ರಮಿಸಲಾಯಿತು ಎಂದು ವೆಂಕಟ ದತ್ತ ಸಾಯಿ ತಿಳಿಸಿದರು.
ಪಂದ್ಯದ ವಿಚಾರಕ್ಕೆ ಬಂದರೆ, ತಮ್ಮ ಅದ್ಭುತ ಶಕ್ತಿ, ಚಾಣಾಕ್ಷ ತಂತ್ರಗಾರಿಕೆ ಹಾಗೂ ಅಪ್ರತಿಮ ಮಾನಸಿಕ ದೃಢತೆಯನ್ನು ಪ್ರದರ್ಶಿಸಿದ 31 ವರ್ಷದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಜಪಾನ್‌ನ ಸ್ಟಾರ್​ ಆಟಗಾರ್ತಿ ಅಕಾನೆ ಯಮಗುಚಿ ಅವರನ್ನು 21-17, 21-17 ನೇರ ಗೇಮ್‌ಗಳಿಂದ ಮಣಿಸಿ ಚೊಚ್ಚಲ ಜಪಾನ್ ಓಪನ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಐತಿಹಾಸಿಕ ಜಯವು ಅವರ ಮೊದಲ ಸೂಪರ್ 750 ಪ್ರಶಸ್ತಿಯಾಗಿದ್ದು, ಈ ಪ್ರತಿಷ್ಠಿತ ಟೂರ್ನಿಯನ್ನು ಗೆದ್ದ ಭಾರತದ ಇತಿಹಾಸದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಸಿಂಧು ಅವರು ಪಾತ್ರರಾಗಿದ್ದಾರೆ.
2024ರ ಸೈಯದ್ ಮೋದಿ ಇಂಟರ್ನ್ಯಾಷನಲ್ ಟೂರ್ನಿಯಲ್ಲಿ ಕೊನೆಯ ಬಾರಿಗೆ ಪ್ರಶಸ್ತಿ ಗೆದ್ದಿದ್ದ ಪಿ.ವಿ. ಸಿಂಧು ಅವರಿಗೆ ಈ ಜಪಾನ್ ಓಪನ್ ಜಯವು 2019ರ ವಿಶ್ವ ಚಾಂಪಿಯನ್‌ಶಿಪ್ ಮುಕುಟದ ನಂತರ ಸಿಕ್ಕ ಅತಿ ದೊಡ್ಡ ಗೆಲುವಾಗಿದೆ. ಮೊದಲ ಗೇಮ್‌ನಲ್ಲಿ ತೀವ್ರ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂದರೂ, ಸಿಂಧು ತಮ್ಮ ಮಾರಕ ಕ್ರಾಸ್-ಕೋಟ್ ಡ್ರಾಪ್ಸ್ ಮತ್ತು ನಿಖರವಾದ ಸ್ಮಾಶ್‌ಗಳ ಮೂಲಕ ಎದುರಾಳಿ ಯಮಗುಚಿ ಅವರ ಲಯವನ್ನು ತಪ್ಪಿಸುವಲ್ಲಿ ಯಶಸ್ವಿಯಾದರು. ಒತ್ತಡದ ಕ್ಷಣಗಳಲ್ಲಿ ಅದ್ಭುತ ಮಾನಸಿಕ ದೃಢತೆ ಪ್ರದರ್ಶಿಸಿದ ಭಾರತೀಯ ತಾರೆ, ಸತತ ಪ್ರಮುಖ ಪಾಯಿಂಟ್‌ಗಳನ್ನು ಗಳಿಸಿ ಮೊದಲ ಗೇಮ್ ಅನ್ನು 21-17 ರಿಂದ ತಮ್ಮದಾಗಿಸಿಕೊಂಡರು. ಮೊದಲ ಗೇಮ್ ಗೆದ್ದ ಉತ್ಸಾಹದಲ್ಲಿದ್ದ ಸಿಂಧು, ಎರಡನೇ ಗೇಮ್‌ನಲ್ಲಿ ತಮ್ಮ ಆಟದ ತೀವ್ರತೆಯನ್ನು ಎಲ್ಲೂ ಕಡಿಮೆ ಮಾಡಲಿಲ್ಲ. ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾದ ಅವರು, ಸಾಮಾನ್ಯವಾಗಿ ಶಾಂತಚಿತ್ತರಾಗಿರುತ್ತಿದ್ದ ಯಮಗುಚಿ ಅವರು ಸಮತೋಲನ ಆಟವನ್ನು ಸಂಪೂರ್ಣವಾಗಿ ಹಳಿ ತಪ್ಪಿಸಿದರು. ಇದರಿಂದಾಗಿ ಜಪಾನ್ ಆಟಗಾರ್ತಿ ಸತತವಾಗಿ ತಪ್ಪುಗಳನ್ನು ಮಾಡುವಂತಾಯಿತು.
ದಾಳಿಯಷ್ಟೇ ಅಲ್ಲದೆ ಸಿಂಧು ಅವರ ರಕ್ಷಣಾತ್ಮಕ ಆಟವೂ ಅಷ್ಟೇ ಪ್ರಭಾವಶಾಲಿಯಾಗಿತ್ತು. ಯಮಗುಚಿ ಅವರ ಚಾಣಾಕ್ಷ ನೆಟ್ ಪ್ಲೇ ಅನ್ನು ಮೊದಲೇ ಗ್ರಹಿಸುತ್ತಿದ್ದ ಸಿಂಧು, ಮರಳಿ ಅವರ ಮೇಲೆಯೇ ಒತ್ತಡ ಹೇರುತ್ತಿದ್ದರು. ಸ್ಥಳೀಯ ಟೋಕಿಯೊ ಪ್ರೇಕ್ಷಕರ ಬೆಂಬಲದೊಂದಿಗೆ ಯಮಗುಚಿ ಪಂದ್ಯದ ಕೊನೆಯಲ್ಲಿ ತಿರುಗಿಬೀಳಲು ಪ್ರಯತ್ನಿಸಿದರಾದರೂ, ಸಿಂಧು ಕಿಂಚಿತ್ತೂ ದೃತಿಗೆಡಲಿಲ್ಲ. ತಮ್ಮ 2019ರ ವಿಶ್ವ ಚಾಂಪಿಯನ್‌ಶಿಪ್‌ನ ಐತಿಹಾಸಿಕ ಪ್ರದರ್ಶನವನ್ನು ನೆನಪಿಸುವಂತಹ ಶಿಸ್ತಿನ ಆಟದೊಂದಿಗೆ ಎರಡನೇ ಗೇಮ್ ಅನ್ನು ಸಹ 21-17 ರಿಂದ ಗೆದ್ದು ಇತಿಹಾಸ ಬರೆದರು.
ವಿಶ್ವದ ನಂ. 3 ಆಟಗಾರ್ತಿಯನ್ನು ಅವರದೇ ತಾಯ್ನಾಡಿನಲ್ಲಿ ಅತ್ಯಂತ ಚಾಣಾಕ್ಷತನ ಮತ್ತು ತಾಳ್ಮೆಯಿಂದ ಮಣಿಸುವ ಮೂಲಕ, ಪಿ.ವಿ. ಸಿಂಧು ತಾವು ಮತ್ತೆ ತಮ್ಮ ಹಳೆಯ ಲಯಕ್ಕೆ ಮರಳಿದ್ದಾಗಿ ಇಡೀ ಬ್ಯಾಡ್ಮಿಂಟನ್ ಜಗತ್ತಿಗೆ ಬಲವಾದ ಸಂದೇಶ ರವಾನಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net