ಇಂದಿನಿಂದ ಟೀಮ್ ಇಂಡಿಯಾಗೆ ಕ್ರಿಕೆಟ್ ಜನಕರ ಸವಾಲು, ಚೆನ್ನೈನಲ್ಲಿ ಮೊದಲ ಟೆಸ್ಟ್

ind vs eng web
Published on

ಚೆನ್ನೈ: ಕಾಂಗರೂ ನೆಲದಲ್ಲಿ ಎಲ್ಲ ರೀತಿಯ ಅಡೆತಡೆಗಳನ್ನು ದಾಟಿ ಅವಿಸ್ಮರಣೀಯ ವಿಕ್ರಮ ಸಾಧಿಸಿರುವ ಭಾರತ ತಂಡ ಇದೀಗ ತವರಿನಲ್ಲಿ ಕ್ರಿಕೆಟ್ ಜನಕರನ್ನು ಬೇಟೆಯಾಡಲು ಸಜ್ಜಾಗಿದೆ. ನಾಯಕ ವಿರಾಟ್ ಕೊಹ್ಲಿ ವಾಪಸಾತಿಯೊಂದಿಗೆ ಬಹುತೇಕ ಪೂರ್ಣ ಬಲ ಪಡೆದುಕೊಂಡಿರುವ ಭಾರತ ತಂಡ ಶುಕ್ರವಾರದಿಂದ ನಡೆಯಲಿರುವ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಜೋ ರೂಟ್ ಸಾರಥ್ಯದ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಕ್ರಿಕೆಟ್ ಆಟವನ್ನು ಧರ್ಮದಂತೆ ಪ್ರೀತಿಸುವ ಭಾರತದಲ್ಲಿ ಕರೊನಾ ಕಾಲದಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಇದಾಗಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೇರುವ ಪೈಪೋಟಿಯಿಂದಾಗಿ ಕೂಡ ಈ ಸರಣಿ ಸಾಕಷ್ಟು ಕುತೂಹಲ ಸೃಷ್ಟಿಸಿದೆ.

ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ತಾಣವೆನಿಸಿರುವ ಚೆಪಾಕ್‌ನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸರಣಿಯ ಮೊದಲ ಎರಡೂ ಪಂದ್ಯಗಳು ನಡೆಯಲಿವೆ. ಆಸೀಸ್ ನೆಲದಲ್ಲಿ ಗೆದ್ದ ವಿಶ್ವಾಸ, ತವರಿನ ಬಲಿಷ್ಠ ದಾಖಲೆ ಮತ್ತಿತರ ಕಾರಣಗಳಿಂದಾಗಿ ಟೀಮ್ ಇಂಡಿಯಾ ಸಹಜವಾಗಿಯೇ ಫೇವರಿಟ್ ಹಣೆಪಟ್ಟಿಯೊಂದಿಗೆ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಆದರೆ ಹಾಲಿ ವಿಶ್ವ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ (ಆಂಡರ್‌ಸನ್) ಮತ್ತು ರನ್ (ರೂಟ್) ಸಾಧಕರೆನಿಸಿರುವ ಇಬ್ಬರೂ ಆಟಗಾರರು ಇಂಗ್ಲೆಂಡ್ ಪಾಳೆಯದಲ್ಲಿದ್ದಾರೆ. ಬೆನ್ ಸ್ಟೋಕ್ಸ್ ಅವರಂಥ ವಿಶ್ವ ನಂ. 1 ಆಲ್ರೌಂಡರ್ ಕೂಡ ಆಂಗ್ಲರ ಬಳಗದಲ್ಲಿದ್ದಾರೆ. ಕಳೆದ 15 ವರ್ಷಗಳಲ್ಲಿ ಭಾರತ ತಂಡಕ್ಕೆ ತವರಿನಲ್ಲಿ ಟೆಸ್ಟ್ ಸರಣಿ ಸೋಲುಣಿಸಿರುವ ಏಕೈಕ ತಂಡವೂ ಇಂಗ್ಲೆಂಡ್ ಆಗಿದೆ. ಇತ್ತೀಚೆಗಷ್ಟೇ ಶ್ರೀಲಂಕಾದಲ್ಲಿ ಸರಣಿ ಗೆದ್ದು, ಏಷ್ಯಾದಲ್ಲೂ ಮಿಂಚಬಲ್ಲೆ ಎಂದು ಇಂಗ್ಲೆಂಡ್ ತಂಡ ನಿರೂಪಿಸಿದೆ. ಹೀಗಾಗಿ ಆಂಗ್ಲರಿಂದ ಪ್ರಬಲ ಪ್ರತಿಸ್ಪರ್ಧೆ ಎದುರಾಗುವ ನಿರೀಕ್ಷೆ ಇದ್ದು, ಜಿದ್ದಾಜಿದ್ದಿನ ಕಾದಾಟದಿಂದ ಈ ಸರಣಿ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ಉಣಬಡಿಸುವುದು ನಿಶ್ಚಿತವೆನಿಸಿದೆ.

ಶತಕದ ಬರ ನೀಗಿಸುವರೇ ಕೊಹ್ಲಿ?

2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಬಳಿಕ ವಿರಾಟ್ ಕೊಹ್ಲಿ ಶತಕವನ್ನೇ ಸಿಡಿಸದ ವರ್ಷ 2020. ಭಾರತದಲ್ಲಿ ಕೊನೆಯದಾಗಿ 2019ರ ನವೆಂಬರ್‌ನಲ್ಲಿ ನಡೆದ ಟೆಸ್ಟ್ (ಕೋಲ್ಕತದಲ್ಲಿ ಅಹರ್ನಿಶಿ ಟೆಸ್ಟ್​) ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಕೊನೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಶತಕವೂ ದಾಖಲಾಗಿದೆ. ಅನಂತರ ಒಂದು ವರ್ಷದಿಂದ ಕರೊನಾ ಹಾವಳಿಯ ನಡುವೆ ಕೊಹ್ಲಿ ಕೂಡ ಶತಕ ಸಿಡಿಸುವುದನ್ನು ಮರೆತಿದ್ದಾರೆ. ಇದೀಗ ಹೆಣ್ಣು ಮಗುವಿನ ತಂದೆಯಾದ ಬಳಿಕ ಪಿತೃತ್ವ ರಜೆ ಮುಗಿಸಿ ಮೊದಲ ಬಾರಿ ಕ್ರಿಕೆಟ್ ಆಡಲಿರುವ ಕೊಹ್ಲಿ, ತಾಜಾತನದಿಂದ ಕಣಕ್ಕಿಳಿಯುವ ನಿರೀಕ್ಷೆ ಇದೆ.

ಡಬ್ಲುಟಿಸಿ, ರ‌್ಯಾಂಕಿಂಗ್ ಲೆಕ್ಕಾಚಾರ

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್‌ಗೆ ಸವಾಲೊಡ್ಡುವ ತಂಡವನ್ನು ಈ ಸರಣಿಯ ಫಲಿತಾಂಶ ನಿರ್ಧರಿಸಲಿದೆ. ಭಾರತ ಕನಿಷ್ಠ 2-0 ಅಥವಾ 2-1ರಿಂದ ಸರಣಿ ಗೆದ್ದರೂ ಡಬ್ಲುಟಿಸಿ ಫೈನಲ್‌ಗೇರಲಿದೆ. ಇಂಗ್ಲೆಂಡ್‌ಗೆ ಕನಿಷ್ಠ 3-0, 3-1 ಅಂತರದ ಗೆಲುವು ಅಗತ್ಯ. ಸರಣಿ ಸಮಬಲಗೊಂಡರೆ ಆಸ್ಟ್ರೇಲಿಯಾ ಫೈನಲ್‌ಗೇರಲಿದೆ. ಇನ್ನು ಭಾರತ ತಂಡ ಕನಿಷ್ಠ 1-0ಯಿಂದ ಸರಣಿ ಗೆದ್ದರೂ ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿ ನಂ. 1 ಪಟ್ಟಕ್ಕೇರಲಿದೆ.

ಭಾರತ:

ಐಸಿಸಿ ಟೆಸ್ಟ್ ರ‌್ಯಾಂಕ್: 2

ಬಲ: ತವರು ನೆಲದ ಬಲಿಷ್ಠ ದಾಖಲೆ; ಆಸೀಸ್ ನೆಲದಲ್ಲಿ ಗೆದ್ದು ಬೀಗಿದ ವಿಶ್ವಾಸ; ಪ್ರಮುಖ ಆಟಗಾರರ ವಾಪಸಾತಿ; ಯುವ ಆಟಗಾರರ ಉತ್ತಮ ನಿರ್ವಹಣೆ.

ದೌರ್ಬಲ್ಯ: ತವರಿನಲ್ಲಿ ಅಶ್ವಿನ್‌ಗೆ ಸಮರ್ಥ ಸ್ಪಿನ್ ಜತೆಗಾರ ಎನಿಸಿದ್ದ ರವೀಂದ್ರ ಜಡೇಜಾ ಗೈರು; ಆಸೀಸ್ ನೆಲದ ಜಯ ಅತಿ ಆತ್ಮವಿಶ್ವಾಸವಾಗಿ ಮಾರ್ಪಟ್ಟರೆ ಅಪಾಯ.

ಟೀಮ್ ನ್ಯೂಸ್: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಮಿಂಚಿರುವ ನಡುವೆಯೂ ವಾಷಿಂಗ್ಟನ್ ಸುಂದರ್ ತಂಡದಿಂದ ಹೊರಗುಳಿಯುವ ನಿರೀಕ್ಷೆ ಇದ್ದು, ಅಕ್ಷರ್ ಪಟೇಲ್ ಟೆಸ್ಟ್ ಪದಾರ್ಪಣೆ ಮಾಡುವುದು ಬಹುತೇಕ ಖಚಿತವೆನಿಸಿದೆ. ಎಡಗೈ ಸ್ಪಿನ್ನರ್ ಆಗಿರುವ ಜತೆಗೆ ಬಹುತೇಕ ರವೀಂದ್ರ ಜಡೇಜಾರಂಥ ಆಟಗಾರರೇ ಆಗಿರುವುದು ಅಕ್ಷರ್‌ಗೆ ಪ್ಲಸ್ ಪಾಯಿಂಟ್. ರಿಷಭ್ ಪಂತ್ ಮೊದಲ ಆದ್ಯತೆಯ ವಿಕೆಟ್ ಕೀಪರ್ ಆಗಿರುತ್ತಾರೆ ಎಂದು ನಾಯಕ ಕೊಹ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೆ 2ನೇ ವೇಗಿಯಾಗಿ ಇಶಾಂತ್ ಶರ್ಮ ಮತ್ತು ಮೊಹಮದ್ ಸಿರಾಜ್ ಅವರಿಬ್ಬರಲ್ಲಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಬಗ್ಗೆ ಕೊಹ್ಲಿ ಸ್ಪಷ್ಟಪಡಿಸಿಲ್ಲ.

ಸಂಭಾವ್ಯ ತಂಡ: ರೋಹಿತ್ ಶರ್ಮ, ಶುಭಮಾನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿ.ಕೀ), ಅಕ್ಷರ್ ಪಟೇಲ್, ಆರ್. ಅಶ್ವಿನ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಇಶಾಂತ್ ಶರ್ಮ/ಮೊಹಮದ್ ಸಿರಾಜ್.

ಇಂಗ್ಲೆಂಡ್:

ಐಸಿಸಿ ಟೆಸ್ಟ್ ರ‌್ಯಾಂಕ್: 4

ಬಲ: ಶ್ರೀಲಂಕಾದಲ್ಲಿ ಸರಣಿ ಗೆದ್ದ ವಿಶ್ವಾಸ; ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್ ಸೇರ್ಪಡೆ; ಭಾರತದಲ್ಲಿ 2012ರಲ್ಲಿ ಸರಣಿ ಗೆದ್ದ ಸ್ಫೂರ್ತಿ; ಜೋ ರೂಟ್ ಬಲಿಷ್ಠ ಫಾರ್ಮ್.

ದೌರ್ಬಲ್ಯ: ಸ್ಪಿನ್ ಅಸ್ತ್ರಕ್ಕೆ ಕುಸಿಯುವ ಭೀತಿ; ತಂಡದ ತಜ್ಞ ಸ್ಪಿನ್ನರ್‌ಗಳಿಬ್ಬರೂ ಭಾರತದಲ್ಲಿ ಇದುವರೆಗೆ ಆಡಿಲ್ಲ; ಪ್ರವಾಸದ ಆರಂಭದಲ್ಲೇ ಕ್ರೌಲಿ ಗಾಯದ ಹೊಡೆತ.

ಟೀಮ್ ನ್ಯೂಸ್: ಲಂಕಾದಲ್ಲಿ ಕೊನೇ ಟೆಸ್ಟ್ ಆಡಿದ ತಂಡದಲ್ಲಿ 6 ಬದಲಾವಣೆಯ ನಿರೀಕ್ಷೆ ಇದೆ. ಗಾಯಾಳು ಜಾಕ್ ಕ್ರೌಲಿ ಜಾಗದಲ್ಲಿ ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲೆ ಜತೆಗೂಡಿ ಇನಿಂಗ್ಸ್ ಆರಂಭಿಸಲಿದ್ದಾರೆ. ಇದರಿಂದ ಜೋ ರೂಟ್ 3ನೇ ಕ್ರಮಾಂಕಕ್ಕೆ ಬಡ್ತಿ ಪಡೆಯಲಿದ್ದಾರೆ. ಕರೊನಾದಿಂದ ಚೇತರಿಸಿಕೊಂಡ ಮೊಯಿನ್ ಅಲಿ, ಎಡಗೈ ಸ್ಪಿನ್ನರ್ ಜಾಕ್ ಲೀಚ್ ಜತೆಗೆ ಸ್ಪಿನ್ ವಿಭಾಗದ ಜವಾಬ್ದಾರಿ ನಿಭಾಯಿಸಲಿದ್ದಾರೆ. ಅನುಭವಿ ವೇಗಿಗಳಾದ ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್‌ಸನ್ ಅವರಿಬ್ಬರಲ್ಲಿ ಒಬ್ಬರಷ್ಟೇ ಕಣಕ್ಕಿಳಿಬಹುದು.

ಸಂಭಾವ್ಯ ತಂಡ: ಡೊಮಿನಿಕ್ ಸಿಬ್ಲೆ, ರೋರಿ ಬರ್ನ್ಸ್, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಒಲಿವರ್ ಪೋಪ್, ಜೋಸ್ ಬಟ್ಲರ್ (ವಿ.ಕೀ), ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಜೋಫ್ರಾ ಆರ್ಚರ್, ಜಾಕ್ ಲೀಚ್, ಸ್ಟುವರ್ಟ್ ಬ್ರಾಡ್/ಜೇಮ್ಸ್ ಆಂಡರ್‌ಸನ್.

ಪಂದ್ಯ ಆರಂಭ: ಬೆಳಗ್ಗೆ 9.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್.

ಮುಖಾಮುಖಿ: 122

ಭಾರತ: 26

ಇಂಗ್ಲೆಂಡ್: 47

ಡ್ರಾ: 49

ಭಾರತದಲ್ಲಿ: 60

ಭಾರತ: 19

ಇಂಗ್ಲೆಂಡ್: 13

ಡ್ರಾ: 28

ಚೆನ್ನೈನಲ್ಲಿ: 9

ಭಾರತ: 5

ಇಂಗ್ಲೆಂಡ್: 3

ಡ್ರಾ: 1

*32: ಭಾರತ ತಂಡ ಚೆನ್ನೈನಲ್ಲಿ ಇದುವರೆಗೆ 32 ಟೆಸ್ಟ್ ಆಡಿದ್ದು, 14ರಲ್ಲಿ ಗೆದ್ದು, 6ರಲ್ಲಿ ಸೋತಿದೆ. 1 ಟೈ ಸಾಧಿಸಿದ್ದು, 11ರಲ್ಲಿ ಡ್ರಾಕ್ಕೆ ತೃಪ್ತಿಪಟ್ಟಿದೆ. ಭಾರತ ತಂಡ ವಿಶ್ವದಲ್ಲಿ ಅತಿ ಹೆಚ್ಚು ಟೆಸ್ಟ್ ಗೆಲುವು ಕಂಡ ಮೈದಾನ ಇದಾಗಿದೆ.

*5: ಚೆನ್ನೈನಲ್ಲಿ 5 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ನಡೆಯುತ್ತಿದೆ. 2016ರಲ್ಲಿ ಕೊನೆಯದಾಗಿ ಇಂಗ್ಲೆಂಡ್ ವಿರುದ್ಧವೇ ಭಾರತ ತಂಡ ಇಲ್ಲಿ ಟೆಸ್ಟ್ ಆಡಿ ಗೆಲುವು ಕಂಡಿತ್ತು.

ಕುತೂಹಲಕಾರಿ ಮುಖಾಮುಖಿಗಳು:

*ವಿರಾಟ್ ಕೊಹ್ಲಿ-ಜೇಮ್ಸ್ ಆಂಡರ್‌ಸನ್

*ರೋಹಿತ್ ಶರ್ಮ-ಜೋಫ್ರಾ ಆರ್ಚರ್

*ಚೇತೇಶ್ವರ ಪೂಜಾರ-ಸ್ಟುವರ್ಟ್ ಬ್ರಾಡ್

*ಜೋ ರೂಟ್-ಜಸ್‌ಪ್ರೀತ್ ಬುಮ್ರಾ

*ಬೆನ್ ಸ್ಟೋಕ್ಸ್-ಆರ್. ಅಶ್ವಿನ್

ತವರಿನ ಪ್ರಾಬಲ್ಯ ಉಳಿಸುವ ತವಕ

ಭಾರತ ತಂಡ ಕಳೆದ 8 ವರ್ಷಗಳಿಂದ ತವರಿನ ಟೆಸ್ಟ್ ಸರಣಿಗಳಲ್ಲಿ ಅಭೇದ್ಯವೆನಿಸಿದೆ. 2012ರ ನವೆಂಬರ್-ಡಿಸೆಂಬರ್‌ನಲ್ಲಿ ಭಾರತ ತಂಡ ಕೊನೆಯದಾಗಿ ತವರಿನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧವೇ ಟೆಸ್ಟ್ ಸರಣಿ ಸೋಲು ಕಂಡಿತ್ತು. ಅನಂತರ 2013ರ ಫೆಬ್ರವರಿಯಿಂದ ತವರಿನಲ್ಲಿ ಆಡಿರುವ ಎಲ್ಲ 12 ಟೆಸ್ಟ್ ಸರಣಿಗಳಲ್ಲೂ ಭಾರತ ತಂಡವೇ ಗೆಲುವು ದಾಖಲಿಸಿದೆ. ಈ ವೇಳೆ ಆಡಿರುವ 34 ಟೆಸ್ಟ್‌ಗಳಲ್ಲಿ ಭಾರತ 28ರಲ್ಲಿ ಜಯಿಸಿದ್ದು, 5ರಲ್ಲಿ ಡ್ರಾ ಸಾಧಿಸಿದೆ. ಭಾರತಕ್ಕೆ ಏಕೈಕ ಸೋಲು 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪುಣೆ ಟೆಸ್ಟ್‌ನಲ್ಲಿ ಎದುರಾಗಿತ್ತು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ಯಾವ ತಂಡವೂ ತವರಿನಲ್ಲಿ ಈ ರೀತಿಯ ಪ್ರಾಬಲ್ಯ ಸಾಧಿಸಿದ ದೃಷ್ಟಾಂತವಿಲ್ಲ. ಕಳೆದ 8 ವರ್ಷಗಳಲ್ಲಿ ತವರಿನಲ್ಲಿ ಶೇ. 82.35 ಗೆಲುವು ದಾಖಲಿಸಿರುವ ಭಾರತ ತಂಡ, ವಿಶ್ವದ ಇತರೆಲ್ಲ ತಂಡಗಳಿಗಿಂತ ಗರಿಷ್ಠ ಗೆಲುವಿನ ಸರಾಸರಿ ಹೊಂದಿದೆ.

ತವರಿನಲ್ಲಿ ಬರೀ ಹುಲಿಯಲ್ಲ, ಹೆಬ್ಬುಲಿ!

ವಿದೇಶದಲ್ಲೂ ಹುಲಿ ಎಂದು ಆಸೀಸ್ ನೆಲದಲ್ಲಿ ಸಾಬೀತು ಪಡಿಸಿರುವ ಭಾರತ ತಂಡ, ಕಳೆದ 8 ವರ್ಷಗಳಲ್ಲಿ ತವರಿನಲ್ಲಿ ಬರೀ ಹುಲಿಯಾಗಿರದೆ, ಹೆಬ್ಬುಲಿಯಂತೆ ಘರ್ಜಿಸಿದೆ. 2013ರ ಬಳಿಕ ತವರಿನಲ್ಲಿ ಕನಿಷ್ಠ ಒಂದೂ ಕೂಡ ಟೆಸ್ಟ್ ಸರಣಿ ಸೋಲದಿರುವ ಏಕೈಕ ತಂಡ ಭಾರತವಾಗಿದೆ. ಈ ಅವಧಿಯಲ್ಲಿ ತವರಿನಲ್ಲಿ ಕಂಡಿರುವ 28 ಗೆಲುವುಗಳಲ್ಲಿ 12 ಇನಿಂಗ್ಸ್ ಅಂತರದಿಂದ ಬಂದಿದ್ದರೆ, 9ರಲ್ಲಿ 100ಕ್ಕೂ ಅಧಿಕ ರನ್ ಅಂತರದಿಂದ ಜಯಿಸಿದೆ. 4ರಲ್ಲಿ 8 ಅಥವಾ ಅದಕ್ಕಿಂತ ಹೆಚ್ಚಿನ ವಿಕೆಟ್ ಅಂತರದಲ್ಲಿ ಜಯಿಸಿದೆ. 3ರಲ್ಲಿ 75 ರನ್ ಅಂತರದಲ್ಲಿ ಜಯಿಸಿದ್ದರೆ, 2ರಲ್ಲಿ 6 ವಿಕೆಟ್‌ಗಳಿಂದ ಗೆದ್ದಿದೆ. 2013ರ ಬಳಿಕ ಆಡಿರುವ 2 ಅಥವಾ ಅದಕ್ಕಿಂತ ಹೆಚ್ಚಿನ ಟೆಸ್ಟ್ ಪಂದ್ಯಗಳ 10 ಸರಣಿಗಳಲ್ಲಿ 6ರಲ್ಲಿ ಭಾರತ ತಂಡ ಕ್ಲೀನ್‌ಸ್ವೀಪ್ ಸಾಧಿಸಿದೆ. ಆಸ್ಟ್ರೇಲಿಯಾ ವಿರುದ್ಧ 4-0 (2013), ದಕ್ಷಿಣ ಆಫ್ರಿಕಾ ವಿರುದ್ಧ 3-0 (2019), ನ್ಯೂಜಿಲೆಂಡ್ ವಿರುದ್ಧ 3-0 (2016) ಕ್ಲೀನ್‌ಸ್ವೀಪ್ ಸಾಧಿಸಿರುವುದು ಈ ಪೈಕಿ ಪ್ರಮುಖವಾದುದು. ಈ ಅಂಕಿ-ಅಂಶ ಗಮನಿಸಿದಾಗ ಭಾರತ ತವರಿನಲ್ಲಿ ಎಷ್ಟು ಬಲಿಷ್ಠ ನಿರ್ವಹಣೆ ತೋರಿದೆ ಎಂಬುದು ಸಾಬೀತಾಗುತ್ತದೆ.

ಡ್ರೆಸ್ಸಿಂಗ್ ರೂಂನಲ್ಲಿ ಜಾರಿ ಬಿದ್ದು ಗಾಯಗೊಂಡ ಕ್ರೌಲಿ

ಇಂಗ್ಲೆಂಡ್ ತಂಡಕ್ಕೆ ಭಾರತ ಪ್ರವಾಸದ ಆರಂಭದಲ್ಲೇ ಗಾಯದ ಹೊಡೆತ ಬಿದ್ದಿದೆ. ಆರಂಭಿಕ ಜಾಕ್ ಕ್ರೌಲಿ ಚೆಪಾಕ್ ಕ್ರೀಡಾಂಗಣದ ಡ್ರೆಸ್ಸಿಂಗ್ ರೂಂನಲ್ಲಿ ಮಾರ್ಬಲ್ ನೆಲದ ಮೇಲೆ ಜಾರಿ ಬಿದ್ದ ಪರಿಣಾಮ ಬಲ ಮಣಿಕಟ್ಟಿಗೆ ಗಾಯ ಮಾಡಿಕೊಂಡಿದ್ದು, ಸರಣಿಯ ಮೊದಲೆರಡು ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಬುಧವಾರ 23ನೇ ಜನ್ಮದಿನದ ಸಂಭ್ರಮದಲ್ಲಿದ್ದಾಗಲೇ ಕ್ರೌಲಿಗೆ ಈ ಗಾಯವಾಗಿರುವುದು ವಿಪರ‌್ಯಾಸ. 10 ಟೆಸ್ಟ್‌ಗಳಲ್ಲಿ 616 ರನ್ ಗಳಿಸಿರುವ ಅವರು ಇತ್ತೀಚೆಗೆ ಲಂಕಾ ಪ್ರವಾಸದಲ್ಲಿ 4 ಇನಿಂಗ್ಸ್‌ಗಳಲ್ಲಿ ಕೇವಲ 35 ರನ್ ಗಳಿಸಿ ವೈಲ್ಯ ಕಂಡಿದ್ದರು.

*ನಮಗೆ ಚೇತೇಶ್ವರ ಪೂಜಾರ ವಿಕೆಟ್ ಅತ್ಯಂತ ಅಮೂಲ್ಯವಾದುದು. ಯಾರ್ಕ್‌ಷೈರ್‌ನಲ್ಲಿ ಅವರ ಜತೆ ಕೆಲ ಪಂದ್ಯಗಳನ್ನು ಆಡಿರುವೆ. ಅವರೊಬ್ಬ ಅಮೋಘ ಆಟಗಾರ. ಭಾರತ ವಿರುದ್ಧ ಮೇಲುಗೈ ಸಾಧಿಸಲು ನಮಗೆ ಪೂಜಾರ ವಿಕೆಟ್ ಪ್ರಮುಖವಾದುದು.

|ಜೋ ರೂಟ್, ಇಂಗ್ಲೆಂಡ್ ನಾಯಕ

ಖಾಲಿ ಸ್ಟೇಡಿಯಂನಲ್ಲಿ ಪಂದ್ಯ

ಸರಿಸುಮಾರು ಒಂದು ವರ್ಷದ ಬಳಿಕ ಭಾರತದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪುನರಾರಂಭ ಕಾಣುವ ಸಂಭ್ರಮವಿದ್ದರೂ, ಕರೊನಾ ಹಾವಳಿಯಿಂದಾಗಿ ಮೊದಲ ಟೆಸ್ಟ್ ಪಂದ್ಯ ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. 2ನೇ ಟೆಸ್ಟ್‌ಗೆ ಶೇ. 50 ಪ್ರೇಕ್ಷಕರಿಗೆ ಪ್ರವೇಶ ಲಭಿಸುವ ನಿರೀಕ್ಷೆ ಇದೆ.

ಪಿಚ್ ರಿಪೋರ್ಟ್

ಚೆಪಾಕ್ ಪಿಚ್ ಸಾಂಪ್ರದಾಯಿಕವಾಗಿ ಸ್ಪಿನ್ ಸ್ನೇಹಿಯಾಗಿದೆ. ಪಿಚ್‌ನಲ್ಲಿ ಮೊದಲೆರಡು ದಿನ ಸ್ವಲ್ಪ ಬೌನ್ಸ್ ಇದ್ದರೂ, 3ನೇ ದಿನದಿಂದ ಸಂಪೂರ್ಣ ಸ್ಪಿನ್ ಸ್ನೇಹಿಯಾಗಿರಲಿದೆ. ಆಸ್ಟ್ರೇಲಿಯಾದ ಸ್ಪೀಡ್ ಪಿಚ್‌ನಲ್ಲಿ ಆಡಿ ಮರಳಿರುವ ಭಾರತ ತಂಡ ಸ್ಪಿನ್ ಪಿಚ್‌ಗೆ ಹೊಂದಿಕೊಳ್ಳುವ ಸವಾಲು ಎದುರಿಸುತ್ತಿದ್ದರೆ, ಇಂಗ್ಲೆಂಡ್ ತಂಡ ಲಂಕಾದಲ್ಲಿ ಸ್ಪಿನ್ ಪಿಚ್‌ಗಳಲ್ಲೇ ಆಡಿದ ಲಾಭ ಹೊಂದಿದೆ.

ಭಾರತದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ

ವರ್ಷ ಪಂದ್ಯ ಫಲಿತಾಂಶ

1933-34 2 ಇಂಗ್ಲೆಂಡ್‌ಗೆ 2-0 ಜಯ

1951-52 5 1-1ರಿಂದ ಡ್ರಾ

1961-62 5 ಭಾರತಕ್ಕೆ 2-0 ಜಯ

1963-64 5 0-0ಯಿಂದ ಡ್ರಾ

1972-73 5 ಭಾರತಕ್ಕೆ 1-0 ಜಯ

1976-77 5 ಇಂಗ್ಲೆಂಡ್‌ಗೆ 3-1 ಜಯ

1979-80 1 ಇಂಗ್ಲೆಂಡ್‌ಗೆ 1-0 ಜಯ

1981-82 6 ಭಾರತಕ್ಕೆ 1-0 ಜಯ

1984-85 5 ಇಂಗ್ಲೆಂಡ್‌ಗೆ 2-1 ಜಯ

1992-93 3 ಭಾರತಕ್ಕೆ 3-0 ಜಯ

2001-02 3 ಭಾರತಕ್ಕೆ 1-0 ಜಯ

2005-06 3 1-1 ರಿಂದ ಸರಣಿ ಡ್ರಾ

2008-09 2 ಭಾರತಕ್ಕೆ 1-0 ಗೆಲುವು

2012-13 4 ಇಂಗ್ಲೆಂಡ್‌ಗೆ 2-1 ಜಯ

2016-17 5 ಭಾರತಕ್ಕೆ 4-0 ಜಯ

ಒಟ್ಟು ಸರಣಿ: 15, ಭಾರತ: 7, ಇಂಗ್ಲೆಂಡ್: 5, ಡ್ರಾ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net