ಬಾಬರ್​ ಅಜಾಮ್ ನಕಲಿ ನಿವೃತ್ತಿ! ಸ್ಟಾರ್​ ಕ್ರಿಕೆಟಿಗನ ವಿರುದ್ಧ ಸಿಡಿದೆದ್ದ ಪಾಕ್​ ಕ್ರೀಡಾಭಿಮಾನಿಗಳು

Babar Azam
Published on

ನವದೆಹಲಿ: ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತನ್ನ ಕಳಪೆ ಪ್ರದರ್ಶನದ ಕಾರಣದಿಂದಾಗಿ ಪಾಕಿಸ್ತಾನ ಕ್ರಿಕೆಟ್​ ತಂಡದ ಸ್ಟಾರ್​ ಬ್ಯಾಟ್ಸ್​ಮನ್​ ಬಾಬರ್​ ಅಜಾಮ್​, ತನ್ನ ದೇಶದ ಕ್ರೀಡಾಭಿಮಾನಿಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಾಬರ್​ ವಿರುದ್ಧ ಆಕ್ರೋಶಗಳ ಸುರಿಮಳೆಯಾಗುತ್ತಿದೆ.

ಇತ್ತೀಚೆಗೆ ಬಾಂಗ್ಲಾದೇಶದ ವಿರುದ್ಧ ನಡೆದ ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ನಾಲ್ಕು ಇನ್ನಿಂಗ್ಸ್​ ಆಡಿದ ಬಾಬರ್​, ಕೇವಲ 64 ರನ್​ ಕಲೆಹಾಕಿದರು. ಕಳೆದ ವರ್ಷವೂ ತಮ್ಮ ಬ್ಯಾಟಿಂಗ್​ ವೈಫಲ್ಯದಿಂದಾಗಿ ಪಾಕ್​ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಬಾಬರ್​ ವಿಫಲರಾದರು. ಹೀಗಾಗಿ ಬಾಬರ್​ ವಿರುದ್ಧ ಜಾಲತಾಣದಲ್ಲಿ ಪಾಕ್​ ಕ್ರೀಡಾಭಿಮಾನಿಗಳು ಟೀಕೆಗಳ ಸಮರವನ್ನೇ ಸಾರಿದ್ದಾರೆ.

ನಕಲಿ ಸುದ್ದಿ ಹಾಗೂ ಮಾನಹಾನಿ ಮೀಮ್ಸ್​ ಮೂಲಕ ಬಾಬರ್​ ಅನ್ನು ಟಾರ್ಗೆಟ್​ ಮಾಡಲಾಗಿದೆ. ಇದೀಗ ಬಾಬರ್​ ನಿವೃತ್ತಿ​ ಕುರಿತಾದ ನಕಲಿ ಪೋಸ್ಟ್​ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಬಾಬರ್​ ಅಜಾಮ್​ ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ ಟೆಸ್ಟ್​ ಕ್ರಿಕೆಟ್​​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂಬ ನಕಲಿ ಪೋಸ್ಟ್​ ಹರಿಬಿಡಲಾಗಿದೆ. ರಾವಲ್ಪಿಂಡಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಬರ್ ಅಜಮ್ ಅವರು ಮೊದಲ ಇನ್ನಿಂಗ್ಸ್​ನಲ್ಲಿ 31 ಮತ್ತು ಎರಡನೇ ಇನ್ನಿಂಗ್ಸ್​ನಲ್ಲಿ 11 ರನ್​ ಗಳಿಸಿದರು. ಇದನ್ನು ಉಲ್ಲೇಖಿಸಿ ಎಕ್ಸ್​ ವೇದಿಕೆಯಲ್ಲಿ ನಕಲಿ ನಿವೃತ್ತಿ ಪೋಸ್ಟ್ ವೈರಲ್​ ಆಗುತ್ತಿದೆ. ಇದನ್ನು ಅನೇಕರು ನಿಜವೆಂದು ನಂಬಿದ್ದರು. ಆದರೆ, ಅನೇಕ ಮಾಧ್ಯಮಗಳು ವರದಿ ಮಾಡಿದ ಬಳಿಕ ಸುಳ್ಳೆಂದು ಗೊತ್ತಾಗಿದೆ.

ಇನ್ನು 2023ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಹೀನಾಯವಾಗಿ ಸೋತು ಟೂರ್ನಿಯಿಂದ ಹೊರಬಿದ್ದ ಬಳಿಕ ಬಾಬರ್ ತಮ್ಮ ನಾಯಕತ್ವವನ್ನು ತ್ಯಜಿಸಿದರು. ಆದರೆ, 2024ರಲ್ಲಿ ಅಮೆರಿಕ ಮತ್ತು ವೆಸ್ಟ್​ಇಂಡೀಸ್​ ಜಂಟಿಯಾಗಿ ಆಯೋಜನೆ ಮಾಡಿದ ಟಿ20 ವಿಶ್ವಕಪ್‌ಗೆ ಬಾಬರ್​ಗೆ ಮತ್ತೆ ನಾಯಕತ್ವ ನೀಡಲಾಯಿತು. ಆದರೆ, ಟಿ20 ವಿಶ್ವಕಪ್​ನಲ್ಲೂ ಕಳಪೆ ಪ್ರದರ್ಶನ ಮುಂದುವರಿಯಿತು.

ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಬಾಬರ್​ ಅವರ ಇತ್ತೀಚಿನ ಪ್ರದರ್ಶನವು ತೀರಾ ಕಳಪೆಯಾಗಿದೆ. ಕೊನೆಯ 10 ಇನ್ನಿಂಗ್ಸ್‌ಗಳಲ್ಲಿ 19ರ ಸರಾಸರಿಯಲ್ಲಿ ಕೇವಲ 190 ರನ್ ಗಳಿಸಿದ್ದಾರೆ. ಹಾಗೆಯೇ ಏಕದಿನ ಸ್ವರೂಪದಲ್ಲಿ ಅವರ ಸರಾಸರಿ ರನ್​ ಗಳಿಕೆ 34ಕ್ಕೆ ಇಳಿದಿದೆ. ಇನ್ನು ಟಿ20 ಮಾದರಿಯಲ್ಲಿ ಸರಾಸರಿ 38ಕ್ಕೆ ಕುಸಿದಿದೆ. ಹೀಗಾಗಿ ಬಾಬರ್​ ವಿರುದ್ಧ ಪಾಕ್​ನಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ನಿವೃತ್ತಿ ಘೋಷಿಸುವುದೇ ಒಳಿತು. ಇಲ್ಲವಾದಲ್ಲಿ ನಿವೃತ್ತಿಯನ್ನು ನೀಡಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net