ಚಂಡೀಗಢ: ಗೋವು ಕಳ್ಳನೆಂದು ತಪ್ಪಾಗಿ ಭಾವಿಸಿ 19 ವರ್ಷದ 12ನೇ ತರಗತಿ ವಿದ್ಯಾರ್ಥಿಯನ್ನು ಬೆನ್ನಟ್ಟಿ ಹೋಗಿ ಗುಂಡಿಕ್ಕಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಹರಿಯಾಣದ ಫರಿದಾಬಾದ್ನಲ್ಲಿ ನಡೆದಿದೆ. ಆರೋಪಿಗಳು ಸುಮಾರು 25 ಕಿ.ಮೀ ವಿದ್ಯಾರ್ಥಿಯ ಕಾರನ್ನು ಬೆನ್ನಟ್ಟಿ ಹೋಗಿ ಕೊಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ.
ಹತ್ಯೆಯಾದ ವಿದ್ಯಾರ್ಥಿಯನ್ನು ಆರ್ಯನ್ ಮಿಶ್ರಾ ಎಂದು ಗುರುತಿಸಲಾಗಿದೆ. ಆಗಸ್ಟ್ 23ರಂದು ಮಧ್ಯರಾತ್ರಿ ನೂಡಲ್ಸ್ ತಿನ್ನುವ ಬಯಕೆಯಿಂದ ತನ್ನ ಸ್ನೇಹಿತರಾದ ಹರ್ಷಿತ್ ಮತ್ತು ಶಾಂಕಿ ಎಂಬುವರ ಜತೆ ಡಸ್ಟರ್ ಕಾರಿನಲ್ಲಿ ಆರ್ಯನ್ ಹೊರ ಹೋಗಿದ್ದ. ಈ ವೇಳೆ ಗೋವು ಕಳ್ಳರೆಂದು ಭಾವಿಸಿ ಆರ್ಯನ್ನನ್ನು ಆರೋಪಿಗಳು ಗುಂಡಿಕ್ಕಿ ಕೊಂದಿದ್ದಾರೆ.
ಡಸ್ಟರ್ ಮತ್ತು ಫಾರ್ಚುನರ್ ಎಸ್ಯುವಿ ಕಾರಿನಲ್ಲಿ ಕೆಲ ಗೋವು ಕಳ್ಳರು ಸಿಟಿಯನ್ನು ಅಲೆದಾಡುವ ಮೂಲಕ ಗೋವುಗಳ ಮೇಲೆ ಕಣ್ಣಿಡುತ್ತಿದ್ದಾರೆ ಎಂಬ ಮಾಹಿತಿ ಬಂದಿತ್ತು. ಹೀಗಾಗಿ ಅವರನ್ನು ಗೋವು ಕಳ್ಳರೆಂದು ಭಾವಿಸಿ, ಹತ್ಯೆಗೈದೆವು ಎಂದು ಆರೋಪಿಗಳು ಹೇಳಿದ್ದಾರೆ.
ಆರ್ಯನ್ ಇದ್ದ ಡಸ್ಟರ್ ಕಾರನ್ನು ಬೆನ್ನಟ್ಟಿ ಬಂದ ಆರೋಪಿಗಳು ಕಾರನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಹರ್ಷಿತ್ ಡಸ್ಟರ್ ಕಾಡು ಓಡಿಸುತ್ತಿದ್ದನು. ಕಾರಿನ ಹಿಂಭಾಗದಲ್ಲಿ ಶಾಂಕಿ ಮತ್ತು ಇಬ್ಬರು ಮಹಿಳೆಯರು ಸಹ ಕುಳಿತಿದ್ದರು. ಇನ್ನು ಹರ್ಷಿತ್ ಮತ್ತು ಶಾಂಕಿ ಇತ್ತೀಚೆಗೆ ವ್ಯಕ್ತಿಯೊಬ್ಬನೊಂದಿಗೆ ಜಗಳವಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಶಾಂಕಿ ವಿರುದ್ಧ ಪ್ರಕರಣ ಸಹ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಕಾರನ್ನು ನಿಲ್ಲಿಸುವಂತೆ ಸೂಚಿಸಿದಾಗ, ಡಸ್ಟರ್ ಕಾರಿನಲ್ಲಿದ್ದವರು ಈ ಹಿಂದೆ ನಡೆದಿದ್ದ ಜಗಳಕ್ಕೆ ಸಂಬಂಧಿಸಿದ ಅದೇ ವ್ಯಕ್ತಿ ತಮ್ಮನ್ನು ಬೆನ್ನಟ್ಟಿ ಬಂದಿದ್ದಾರೆ ಎಂದು ಭಾವಿಸಿ, ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಕಾರನ್ನು ವೇಗವಾಗಿ ಓಡಿಸಿದ್ದಾರೆ.
ಯಾವಾಗ ಆರ್ಯನ್ ಮತ್ತು ಸ್ನೇಹಿತರು ಅಲ್ಲಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದರೋ ಅವರನ್ನು ಗೋವು ಕಳ್ಳರೆಂದು ಭಾವಿಸಿದ ಆರೋಪಿಗಳು ಅವರನ್ನು ಬೆನ್ನಟ್ಟಲು ಪ್ರಾರಂಭಿಸಿದ್ದಾರೆ. ಹರ್ಷಿತ್, ಕಾರನ್ನು ಸುಮಾರು 25 ಕಿಲೋಮೀಟರ್ ಓಡಿಸಿ ಪಲ್ವಾಲ್ ಟೋಲ್ ಪ್ಲಾಜಾದಲ್ಲಿ ತಡೆಗೋಡೆಗೆ ಗುದ್ದಿದ್ದಾನೆ. ಇದೇ ವೇಳೆ ಆರೋಪಿಗಳು ಡಸ್ಟರ್ ಕಾರಿನ ಮೇಲೆ ಗುಂಡು ಹಾರಿಸಿದ್ದು, ಗುಂಡು ಹಿಂಬದಿಯ ಕಿಟಕಿಯ ಮೂಲಕ ಹೋಗಿ ಶಾಟ್‌ಗನ್‌ನಲ್ಲಿ ಕುಳಿತಿದ್ದ ಆರ್ಯನ್‌ಗೆ ಹೊಡೆದಿದೆ. ಆರ್ಯನ್‌ಗೆ ಗುಂಡು ತಗುಲಿರುವುದನ್ನು ನೋಡಿದ ಹರ್ಷಿತ್, ಅಲ್ಲಿಂದ ಪರಾರಿಯಾಗಿದ್ದಾನೆ. ಇತ್ತ ಆರೋಪಿಗಳು ಕಾರಿನ ಹತ್ತಿರ ಬಂದು ಆರ್ಯನ್ ಎದೆಗೆ ಮತ್ತೊಂದು ಗುಂಡು ಹಾರಿಸಿದ್ದಾರೆ. ಇದರ ಪರಿಣಾಮವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬಂಧಿತ ಆರೋಪಿಗಳನ್ನು ಅನಿಲ್ ಕೌಶಿಕ್, ವರುಣ್, ಕೃಷ್ಣ, ಆದೇಶ್ ಮತ್ತು ಸೌರವ್ ಎಂದು ಗುರುತಿಸಲಾಗಿದೆ ಎಂದು ಫರಿದಾಬಾದ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳು ಆರಂಭದಲ್ಲಿ ಕೊಲೆ ಬಳಸಿದ ಶಸ್ತ್ರಾಸ್ತ್ರವನ್ನು ನಾಲೆಗೆ ಎಸೆದಿರುವುದಾಗಿ ಹೇಳಿ ದಾರಿತಪ್ಪಿಸಲು ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಅನಿಲ್ ಅವರ ನಿವಾಸದಿಂದ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ. (ಏಜೆನ್ಸೀಸ್)
ಪ್ರೇಯಸಿ ನೋಡಲು ಬುರ್ಖಾ ಧರಿಸಿ ಬಂದು ಸ್ಥಳೀಯರ ಕೈಗೆ ತಗ್ಲಾಕ್ಕೊಂಡ ಯುವಕ! ನಂತರ ನಡೆದಿದ್ದಿಷ್ಟು…
ಭಾರಿ ಮಳೆಗೆ ಆಂಧ್ರ, ತೆಲಂಗಾಣ ತತ್ತರ! ಸಿಎಂ ಪರಿಹಾರ ನಿಧಿಗೆ 25 ಲಕ್ಷ ರೂ. ನೀಡಿದ ‘ಕಲ್ಕಿ’ ಚಿತ್ರತಂಡ