

ನವದೆಹಲಿ: ಇಂದಿನಿಂದ ಆರಂಭವಾಗುವ ವಿಶ್ವಕಪ್ ಟೂರ್ನಿಗೆ ಆಗಮಿಸಿರುವ ಪಾಕಿಸ್ತಾನದ ತಂಡ ಭಾರತದ ಆದರಾತಿಥ್ಯವನ್ನು ಸಂಪೂರ್ಣವಾಗಿ ಎಂಜಾಯ್ ಮಾಡುತ್ತಿದೆ ಎಂದು ಬಾಬರ್ ಅಜಾಮ್ ಹೇಳಿದ್ದಾರೆ.
ವಿಶ್ವಕಪ್ ಟೂರ್ನಿಯ ಆರಂಭಕ್ಕೂ ಮುನ್ನ ಆಯೋಜಿಸುವ ಕ್ಯಾಪ್ಟನ್ಸ್ ಡೇ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಪಾಕಿಸ್ತಾನ ನಾಯಕ ಬಾಬರ್ ಅಜಾಮ್ ಮಾತನಾಡಿದರು.
ನಾವು ಅತ್ಯುತ್ತಮ ಆತಿಥ್ಯವನ್ನು ಸ್ವೀಕರಿಸಿದ್ದೇವೆ ಮತ್ತು ನಾವು ಇದನ್ನು ನಿರೀಕ್ಷಿಸಿಯೂ ಇರಲಿಲ್ಲ. ಆದರೆ, ಇಲ್ಲಿನ ಜನರು ನಮಗೆ ಪ್ರತಿಕ್ರಿಯಿಸಿದ ರೀತಿಯನ್ನು ನಮ್ಮ ತಂಡದ ಪ್ರತಿಯೊಬ್ಬರೂ ಆನಂದಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ನಾವು ಹೈದರಾಬಾದ್‌ನಲ್ಲಿ ಒಂದು ವಾರದಿಂದ ಇದ್ದೇವೆ. ಹೀಗಾಗಿ ನಮಗೆ ಭಾರತದಲ್ಲಿ ಇದ್ದೇವೆ ಎಂದು ಅನಿಸುವುದಿಲ್ಲ, ನಾವು ಮನೆಯಲ್ಲಿಯೇ ಇದ್ದೇವೆ ಎಂದು ಅನಿಸಿದೆ. ನಾವು ತುಂಬಾ ಆನಂದಿಸಿದ್ದೇವೆ. ಪ್ರತಿಯೊಬ್ಬರೂ ಶೇ. 100% ಪ್ರಯತ್ನವನ್ನು ಮಾಡಲು ಮತ್ತು ಪಂದ್ಯಾವಳಿಯನ್ನು ಆನಂದಿಸಲು ಇದೊಂದು ಸುವರ್ಣಾವಕಾಶ ಎಂದು ನಾನು ಭಾವಿಸುತ್ತೇನೆಂದು ಬಾಬರ್ ಹೇಳಿದರು.
ಪಾಕಿಸ್ತಾನವು ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಿದೆ. ಆದರೆ, ಎರಡೂ ಪಂದ್ಯಗಳಲ್ಲೂ ಪಾಕ್ ಸೋತಿದೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್, ನಮ್ಮ ತಂಡದ ಸಾಮರ್ಥ್ಯವನ್ನು ಪ್ರದರ್ಶಿಸಲು ಇದು ಒಳ್ಳೆಯ ಸಮಯ. ನಾವು ಚೆನ್ನಾಗಿ ತಯಾರಿಗಿದ್ದೇವೆ ಎಂದು ನನಗನಿಸಿದೆ. 2019ರ ವಿಶ್ವಕಪ್ ನಂತರ ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ತಂಡ ಅರ್ಹತಾ ಅಂಕ ವ್ಯವಸ್ಥೆಯಲ್ಲಿ ಮೂರು ಅಥವಾ ನಾಲ್ಕನೇ ಸ್ಥಾನದಲ್ಲಿದ್ದೇವೆ. ಒಂದು ತಂಡವಾಗಿ ನಾವು ಒಳ್ಳೆಯ ಪ್ರದರ್ಶನ ನೀಡಿದ್ದೇವೆ. ಇದೀಗ ನಮ್ಮ ತಂಡ ರೆಡಿಯಾಗಿದೆ. ಹಿಂದಿನ ವರ್ಷಗಳಲ್ಲಿ ಮಾಡಿದ್ದಕ್ಕಿಂತ ಹೆಚ್ಚಿನದ್ದನ್ನು ಮಾಡುವ ನಿರೀಕ್ಷೆಯಲ್ಲಿ ನಮ್ಮ ತಂಡವಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)