

ಬೆಂಗಳೂರು: ವಿಶ್ವದ ಶ್ರೀಮಂತ ಟಿ20 ಲೀಗ್ ಐಪಿಎಲ್ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವದ ಬಗ್ಗೆ ಯೋಗಗುರು ಬಾಬಾ ರಾಮ್ದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆ ಆಸಕ್ತಿ ವಹಿಸಿರುವ ಬೆನ್ನಲ್ಲೇ ಟ್ವಿಟರ್ನಲ್ಲಿ 'ಪತಂಜಲಿ ಐಪಿಎಲ್' ಭರ್ಜರಿ ಟ್ರೆಂಡಿಂಗ್ಗೆ ಬಂದಿದೆ. ಜತೆಗೆ ಕ್ರಿಕೆಟ್ ಪ್ರೇಮಿಗಳು ವಿವಿಧ ಟ್ರೋಲ್ಗಳ ಮೂಲಕ ಈ ಬೆಳವಣಿಗೆಯ ಬಗ್ಗೆ ಸಂತೋಷ ಹಂಚಿಕೊಂಡಿದ್ದಾರೆ.
ಸ್ವದೇಶಿ ಆಯುರ್ವೇದ ಉತ್ಪನ್ನದ ಕಂಪನಿ ವಿಶ್ವದ ಶ್ರೀಮಂತ ಟಿ20 ಲೀಗ್ನ ಪ್ರಾಯೋಜಕತ್ವಕ್ಕೆ ಮುಂದಾಗಿರುವುದು ಹಲವು ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ ಹುಟ್ಟಿಸಿದೆ. ಸ್ವದೇಶಿ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇದೊಂದು ದೊಡ್ಡ ಬೆಳವಣಿಗೆ ಎನಿಸಲಿದೆ. ಚೀನಾದ ಮೊಬೈಲ್ ಕಂಪನಿ ಐಪಿಎಲ್ ಪ್ರಾಯೋಜಕತ್ವ ತ್ಯಜಿಸಿದ ಬೆನ್ನಲ್ಲೇ, ಕೆಲ ಕ್ರಿಕೆಟ್ ಪ್ರೇಮಿಗಳು ಸ್ವದೇಶಿ ಪತಂಜಲಿ ಸಂಸ್ಥೆ ಪ್ರಾಯೋಜಕತ್ವ ವಹಿಸಲಿ ಎಂದು ಕಾಲೆಳೆದಿದ್ದರು. ಆದರೆ ಇದೀಗ ನಿಜಕ್ಕೂ ಪತಂಜಲಿ ಸಂಸ್ಥೆ ಐಪಿಎಲ್ ಪ್ರಾಯೋಜಕತ್ವಕ್ಕೆ ಆಸಕ್ತಿ ತೋರುವ ಮೂಲಕ ಅಭಿಮಾನಿಗಳ ತಮಾಷೆಯನ್ನೇ ನಿಜ ಮಾಡಲು ಮುನ್ನಡೆದಿದೆ.
ಇದನ್ನೂ ಓದಿ: ಐಪಿಎಲ್ ಪ್ರಾಯೋಜಕತ್ವ ವಹಿಸಲು ಪತಂಜಲಿ ಆಸಕ್ತಿ!
ಐಪಿಎಲ್ಗೆ ಪತಂಜಲಿ ಪ್ರಾಯೋಜಕತ್ವ ವಹಿಸಿದರೆ ಕ್ರಿಕೆಟಿಗರೂ, ಯೋಗಗುರು ಬಾಬಾ ರಾಮ್ದೇವ್ ಅವರಂತೆ ಯೋಗ ಮಾಡಲಿದ್ದಾರೆ ಎಂದು ಟ್ರೋಲ್ಗಳು ಹರಿದಾಡುತ್ತಿವೆ. ಜತೆಗೆ ಚಿಯರ್ಲೀಡರ್ಗಳು ಇನ್ನು ಪ್ರತಿ ಬಾರಿ ಬೌಂಡರಿ, ಸಿಕ್ಸರ್ ಸಿಡಿದಾಗ ಸೂರ್ಯನಮಸ್ಕಾರ ಮಾಡುವರೇ ಎಂಬ ಪ್ರಶ್ನೆಯನ್ನೂ ಎಸೆದಿದ್ದಾರೆ. ಪಂದ್ಯಶ್ರೇಷ್ಠ ಆಟಗಾರರಿಗೆ ಇನ್ನು 'ದಂತಕಾಂತಿ ಪ್ಲೇಯರ್ ಆಫ್ ದಿ ಮ್ಯಾಚ್ ಅವಾರ್ಡ್' ನೀಡುವರೇ ಎಂದೂ ಕಾಲೆಳೆಯಲಾಗಿದೆ.