

ನವದೆಹಲಿ: ಹೈದರಾಬಾದ್ನ ಆರ್ಜಿಐ ಸ್ಟೇಡಿಯಂನ ನಾರ್ತ್ ಸ್ಟ್ಯಾಂಡ್ಗೆ ಇಡಲಾಗಿದ್ದ ಟೀಮ್ ಇಂಡಿಯಾ ಮಾಜಿ ನಾಯಕ ಮೊಹಮದ್ ಅಜರುದ್ದೀನ್ ಅವರ ಹೆಸರನ್ನು ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ (ಎಚ್ಸಿಎ) ಒಂಬುಡ್ಸ್ಮನ್ ಸೂಚನೆಯ ಮೇರೆಗೆ ತೆರವುಗೊಳಿಸಲಾಗಿದೆ. ಇದನ್ನು ವಿರೋಧಿಸಿರುವ ಅಜರುದ್ದೀನ್ ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ. ಎಚ್ಸಿಎ ಎಥಿಕ್ಸ್ ಅಧಿಕಾರಿಯೂ ಆಗಿರುವ ನ್ಯಾಯಮೂರ್ತಿ ವಿ. ಈಶ್ವರಯ್ಯ, ಎಚ್ಸಿಎಯ ಸದಸ್ಯ ಸಂಸ್ಥೆಗಳಲ್ಲಿ ಒಂದಾದ ಸ್ಥಳಿಯ ಲಾರ್ಡ್ಸ್ ಕ್ರಿಕೆಟ್ ಕ್ಲಬ್ ನೀಡಿದ ದೂರನ್ನು ಪರಿಶೀಲಿಸಿ ಹೆಸರು ತೆರವುಗೊಳಿಸಲು ಸೂಚಿಸಿದ್ದಾರೆ.
ಈ ಸ್ಟ್ಯಾಂಡ್ಗೆ ಮೊದಲಿಗೆ ವಿವಿಎಸ್ ಲಕ್ಷ್ಮಣ್ ಹೆಸರು ಇತ್ತು. ಆದರೆ ಅಜರುದ್ದೀನ್ ಎಚ್ಸಿಎ ಅಧ್ಯಕ್ಷರಾಗಿದ್ದ ಸಮಯದಲ್ಲಿ ತನ್ನ ಅಧಿಕಾರವನ್ನು ದುರುಪಯೋಗ ಮಾಡಿ ತನ್ನ ಹೆಸರು ಇಟ್ಟಿದ್ದರು ಎಂದೂ ದೂರಿನಲ್ಲಿ ಆರೋಪಿಸಲಾಗಿತ್ತು. ಆದರೆ, ಭಾರತ ಪರ 99 ಟೆಸ್ಟ್ ಮತ್ತು 334 ಏಕದಿನ ಪಂದ್ಯ ಆಡಿರುವ ಅಜರುದ್ದೀನ್, ಎಚ್ಸಿಎಯ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಸರ್ವಾನುಮತದ ರ್ನಿಣಯದ ಬಳಿಕ ತನ್ನ ಹೆಸರು ಇಡಲಾಗಿತ್ತು ಎಂದಿದ್ದಾರೆ. ಅಜರ್ ಎಚ್ಸಿಎ ಅಧ್ಯಕ್ಷರಾಗಿ ಕೆಲವೇ ತಿಂಗಳು ಕಳೆದ ಬಳಿಕ 2019ರ ಡಿಸೆಂಬರ್ನಲ್ಲಿ ಈ ಸಭೆ ನಡೆದಿತ್ತು.
ಎಚ್ಸಿಎ ಸಂವಿಧಾನದ ಅನ್ವಯ ಈಗ ಹೆಸರು ತೆಗೆಯಬೇಕಾದರೂ ಎಚ್ಸಿಎ ಅಪೆಕ್ಸ್ ಕೌನ್ಸಿಲ್ನ ಒಪ್ಪಿಗೆ ಅಗತ್ಯ ಎಂಬುದು ಅಜರ್ ವಾದವಾಗಿದೆ. ಹೀಗಾಗಿ ಭಾರತ ತಂಡಕ್ಕೆ ಸುಮಾರು 10 ನಾಯಕನಾಗಿದ್ದ ಆಟಗಾರನ ಹೆಸರು ತೆರವುಗೊಳಿಸುವ ಈ ನಿರ್ಧಾರ ಸರಿ ಇಲ್ಲ. ಅಲ್ಲದೆ ಒಂಬುಡ್ಸ್ಮನ್ ಅವಧಿ ಕಳೆದ ಫೆಬ್ರವರಿಯಲ್ಲೇ ಮುಗಿದಿದ್ದು, ಅವಧಿ ವಿಸ್ತರಣೆಯೂ ಆಗಿಲ್ಲ. ಇದರಿಂದ ಅವರ ಆದೇಶಕ್ಕೆ ಯಾವುದೇ ಮಾನ್ಯತೆ ಇಲ್ಲ ಎಂದು 62 ವರ್ಷದ ಅಜರ್ ಹೇಳಿದ್ದಾರೆ.