

ನವದೆಹಲಿ: 2023ರ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲನುಭವಿಸಿರುವುದು ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಖಂಡಿತ ನಿರಾಸೆ ಮೂಡಿಸಿದೆ. ಕ್ರಿಕೆಟ್ ದಿಗ್ಗಜರು ಅಳುತ್ತಿರುವುದನ್ನು ಕಂಡು ಕೆಲ ಅಭಿಮಾನಿಗಳು ಇದೀಗ ತಾಳ್ಮೆ ಕಳೆದುಕೊಂಡು ತಪ್ಪು ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವಕಪ್ ವಿಜೇತ ತಂಡದ ಆಟಗಾರರು ಹಾಗೂ ಅವರ ಕುಟುಂಬ ಸದಸ್ಯರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಇತ್ತೀಚಿಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸರ್ವಾಂಗೀಣ ಪ್ರದರ್ಶನ ತೋರುವ ಮೂಲಕ ಆಸ್ಟ್ರೇಲಿಯಾ ತಂಡವು ಆರನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆದರೆ, ಇದೀಗ ವಿಶ್ವಕಪ್ ವಿಜೇತ ತಂಡಕ್ಕೆ ಭಾರತ ತಂಡದ ಕ್ರಿಕೆಟ್ ತಂಡದ ಅಭಿಮಾನಿಗಳು ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ಬಹುತೇಕ ಆಟಗಾರರು ಆರೋಪಿಸಿದ್ದಾರೆ.
ನವೆಂಬರ್ 19ರಂದು ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫಿನಾಲೆ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಟ್ರಾವಿಸ್ ಹೆಡ್ ತಮ್ಮ ಅಮೋಘ ಶಥಕದ ಮೂಲಕ ತಂಡಕ್ಕೆ ಕಪ್ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಇದೀಗ ಭಾರತದ ಕ್ರಿಕೆಟ್ ಅಭಿಮಾನಿಗಳು ಟ್ರಾವಿಸ್ ಹೆಡ್ ಅವರ ಪತ್ನಿ ಹಾಗೂ ಮಗಳನ್ನು ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಸಹ ಕೇಳಿ ಬಂದಿದೆ. ಈ ಬಗ್ಗೆ ದೂರುಗಳು ಸಹ ದಾಖಲಾಗಿದ್ದಾವೆ.
ಇದೇ ವಿಚಾರವಾಗಿ ಈಚೆಗೆ ಕ್ರಿಕೆಟಿಗ ಮ್ಯಾಕ್ಸ್ವೆಲ್ ಪತ್ನಿ ವಿನಿ ರಾಮನ್ ಸಾಮಾಜಿಕ ಜಾಲತಾಣದಲ್ಲಿ ಟೀಕಾಕಾರರಿಗೆ ತಿರುಗೇಟು ನೀಡಿದ್ದರು. ಈ ವಿಚಾರವಾಗಿ ಹಲವು ಮಾಜಿ ಆಟಗಾರರು ದನಿಗೂಡಿಸಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳ ನಡೆಯನ್ನು ಆಕ್ಷೇಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದು ಎಲ್ಲಿಯವರೆಗೆ ಹೋಗಿ ನಿಲ್ಲುತ್ತದೆ ಎಂದು ಕಾದು ನೋಡಬೇಕಿದೆ.