ಆಸ್ಟ್ರೇಲಿಯನ್​ ಓಪನ್​ನಲ್ಲಿ 4ನೇ ಸುತ್ತಿಗೇರಿದ ಜೋಕೋ, ಸಬಲೆಂಕಾ

aus tennis web
Published on

ಮೆಲ್ಬೋರ್ನ್​: ಪುರುಷರ ಮತ್ತು ಮಹಿಳಾ ಸಿಂಗಲ್ಸ್​ ವಿಭಾಗದ ಹಾಲಿ ಚಾಂಪಿಯನ್​ಗಳಾದ ನೊವಾಕ್​ ಜೋಕೊವಿಕ್​ ಮತ್ತು ಅರಿನಾ ಸಬಲೆಂಕಾ ವರ್ಷದ ಮೊದಲ ಗ್ರಾಂಡ್​ ಸ್ಲಾಂ ಟೆನಿಸ್​ ಟೂರ್ನಿ ಆಸ್ಟ್ರೆಲಿಯನ್​ ಓಪನ್​ನಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ. ಜೋಕೋ ಮೆಲ್ಬೋರ್ನ್​ ಅಂಗಳದಲ್ಲಿ ಸತತ 31ನೇ ಪಂದ್ಯ ಗೆಲ್ಲುವ ಮೂಲಕ ತನ್ನ 100ನೇ ಪಂದ್ಯವನ್ನು ಸ್ಮರಣೀಯಗೊಳಿಸಿದರು. ಉಳಿದಂತೆ 4ನೇ ಶ್ರೇಯಾಂಕಿತ ಜೆನ್ನಿಕ್​ ಸಿನ್ನರ್​, 7ನೇ ಶ್ರೇಯಾಂಕಿತ ಸ್ಟೆಾನೋಸ್​ ಸಿಸಿಪಾಸ್​, 4ನೇ ಶ್ರೇಯಾಂಕಿತೆ ಕೋಕೋ ಗೌಫ್​ ಕೂಡ 3ನೇ ಸುತ್ತು ದಾಟುವಲ್ಲಿ ಯಶಸ್ವಿಯಾಗಿದ್ದಾರೆ.

ದಾಖಲೆಯ 11ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಜೋಕೋ ಶುಕ್ರವಾರ ನಡೆದ ಕಾದಾಟದಲ್ಲಿ ಅರ್ಜೆಂಟೀನಾದ ಥಾಮಸ್​ ಮಾರ್ಟಿನ್​ ವಿರುದ್ಧ 6-3, 6-3, 7-6 ನೇರಸೆಟ್​ಗಳಿಂದ ಜಯಿಸಿದರು. ವಿಶ್ವ ನಂ. 1 ಜೋಕೋ ಮೆಲ್ಬೋರ್ನ್​ ಪಾರ್ಕ್​ನಲ್ಲಿ 16ನೇ ಬಾರಿ 4ನೇ ಸುತ್ತಿಗೇರಿದ ಸಾಧನೆ ಮಾಡಿದ್ದಾರೆ.

ಬೆಲಾರಸ್​ ತಾರೆ ಹಾಗೂ 2ನೇ ಶ್ರೇಯಾಂಕಿತೆ ಸಬಲೆಂಕಾ 3ನೇ ಸುತ್ತಿನಲ್ಲಿ ಯೂಕ್ರೇನ್​ನ ಲೆಸಿಯಾ ಟ್ಯುರೆಂಕೊ ವಿರುದ್ಧ 6-0, 6-0 ನೇರಸೆಟ್​ಗಳಿಂದ 52 ನಿಮಿಷಗಳಲ್ಲೇ ಸುಲಭವಾಗಿ ಗೆದ್ದರು. ಕಳೆದ 3 ಸುತ್ತಿನ ಪಂದ್ಯಗಳಲ್ಲಿ ಸಬಲೆಂಕಾ ಕೇವಲ 6 ಗೇಮ್​ ಬಿಟ್ಟುಕೊಟ್ಟಿದ್ದಾರೆ. ಆದರೆ ರಷ್ಯಾ&ಯೂಕ್ರೇನ್​ ಯುದ್ಧದ ಹಿನ್ನೆಲೆಯಲ್ಲಿ ಸಬಲೆಂಕಾಗೆ ಎದುರಾಳಿ ಆಟಗಾರ್ತಿ ಹಸ್ತಲಾವ ನೀಡಲಿಲ್ಲ.

ಜೋಕೋ ವಿಶೇಷ ಶತಕ

ನೊವಾಕ್​ ಜೋಕೊವಿಕ್​ ಎಲ್ಲ 4 ಗ್ರಾಂಡ್​ ಸ್ಲಾಂ ಟೂರ್ನಿಗಳಲ್ಲೂ ಕನಿಷ್ಠ 100 ಪಂದ್ಯವಾಡಿದ ವಿಶ್ವದ ಮೊದಲ ಆಟಗಾರ ಎನಿಸಿದ್ದಾರೆ. ಮೆಲ್ಬೋರ್ನ್​ನಲ್ಲಿ ಆಡಿರುವ 100 ಪಂದ್ಯಗಳಲ್ಲಿ ಅವರು 92ರಲ್ಲಿ ಗೆದ್ದಿದ್ದಾರೆ. ವಿಂಬಲ್ಡನ್​ನಲ್ಲಿ 103 (92 ಜಯ), ಯುಎಸ್​ ಓಪನ್​ನಲ್ಲಿ 101 (88ಜಯ) ಮತ್ತು ್ರೆಂಚ್​ ಓಪನ್​ನಲ್ಲಿ 108 ಪಂದ್ಯ (92 ಜಯ) ಆಡಿದ್ದಾರೆ.

3ನೇ ಸುತ್ತಿಗೇರಿದ ಬೋಪಣ್ಣ ಜೋಡಿ

ಎರಡನೇ ಶ್ರೇಯಾಂಕಿತ ಭಾರತದ ರೋಹನ್​ ಬೋಪಣ್ಣ ಮತ್ತು ಆತಿಥೇಯ ಆಸ್ಟ್ರೆಲಿಯಾದ ಮ್ಯಾಥ್ಯೂ ಎಬ್ಡೆನ್​ ಜೋಡಿ ಪುರುಷರ ಡಬಲ್ಸ್​ ವಿಭಾಗದಲ್ಲಿ 3ನೇ ಸುತ್ತಿಗೇರಿದೆ. ಬೋಪಣ್ಣ-ಎಬ್ಡೆನ್​ ಜೋಡಿ ಶುಕ್ರವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಜಾನ್​ ಮಿಲ್​ಮನ್​ ಮತ್ತು ಎಡ್ವರ್ಡ್​ ವಿಂಟರ್​ ಜೋಡಿಯನ್ನು 6-2, 6-4 ನೇರಸೆಟ್​ಗಳಿಂದ ಪರಾಭವಗೊಳಿಸಿತು. 43 ವರ್ಷದ ಬೋಪಣ್ಣ ಮತ್ತು ಎಬ್ಡೆನ್​ ಅವರ ಅನುಭವಿ ಆಟದ ಎದುರು ಎದುರಾಳಿ ಸಂಪೂರ್ಣ ಮಂಕಾಯಿತು. ಭಾರತದ ಮತ್ತೋರ್ವ ಆಟಗಾರ ಶ್ರೀರಾಮ್​ ಬಾಲಾಜಿ ರೊಮೇನಿಯಾದ ವಿಕ್ಟರ್​ ಕೋರ್ನೆಯಾ ಜತೆಗೂಡಿ 2ನೇ ಸುತ್ತಿಗೇರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net