

Virat Kohli : ಬಾರ್ಡರ್ ಗವಾಸ್ಕರ್ ಟ್ರೋಫಿಯ ಭಾಗವಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಐದನೇ ಟೆಸ್ಟ್ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ ತಮ್ಮ ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರಿಸಿರುವುದು ಸದ್ಯ ಕ್ರಿಕೆಟ್ ಪ್ರಿಯರಲ್ಲಿ ಭಾರೀ ಬೇಸರ ತಂದಿದೆ. ಇಂದು (ಜ.03) ಸಿಡ್ನಿಯಲ್ಲಿ ನಡೆದ ಕಡೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕನ ಸ್ಥಾನದಿಂದ ಹಿಂದೆ ಸರಿದ ರೋಹಿತ್ ಶರ್ಮ, ವೇಗಿ ಜಸ್ಪ್ರೀತ್ ಬುಮ್ರಾಗೆ ನಾಯಕತ್ವ ಹಸ್ತಾಂತರಿಸಿದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬುಮ್ರಾಗೆ ತಂಡದ ಸ್ಟಾರ್ ಬ್ಯಾಟರ್ಗಳೇ ಕೈಕೊಟ್ಟಿದ್ದು, ಗೆಲುವಿನ ಭರವಸೆಯಿಂದ ದೂರ ಉಳಿಯುವಂತೆ ಮಾಡಿದೆ.
ಆಸೀಸ್ ವಿರುದ್ಧ ಬ್ಯಾಟಿಂಗ್ ಆರಂಭಿಸಿದ ಭಾರತ ಸತತವಾಗಿ ವಿಕೆಟ್ ಕಳೆದುಕೊಂಡಿತು. ಇದರಿಂದಾಗಿ ಮೊದಲ ಇನ್ನಿಂಗ್ಸ್ನಲ್ಲಿ 72.2 ಓವರ್ಗಳಲ್ಲಿ 185 ರನ್ಗೆ ಆಲೌಟ್ ಆಯಿತು. ಈ ವೇಳೆ ಕ್ರೀಸ್ಗೆ ಬಂದಿದ್ದ ವಿರಾಟ್ ಕೊಹ್ಲಿ, ಕಡೆಯ ಪಂದ್ಯದಲ್ಲಾದರೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾರೆ ಎಂದೇ ಎಲ್ಲರೂ ಊಹಿಸಿದ್ದರು. ಆದ್ರೆ, ಅಂತಿಮವಾಗಿ ಅದೇ ರಾಗ ಅದೇ ಹಾಡು ಎನ್ನುವಂತೆ ವಿರಾಟ್ ಸ್ಲಿಪ್ ಆಡಲು ಹೋಗಿ, ತಮ್ಮ ಬಹುಮುಖ್ಯ ವಿಕೆಟ್ ಕೈಚೆಲ್ಲಿದರು. ಇದು ಅಪಾರ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳನ್ನು ಕೆರಳಿಸಿತು. ಸದ್ಯ ಕೊಹ್ಲಿ ಎಂದಿನಂತೆ ಇಂದು ಕೂಡ ವಿಕೆಟ್ ಕಳೆದುಕೊಂಡ ರೀತಿಯನ್ನು ಆಸ್ಟ್ರೇಲಿಯಾದ ಮಾಜಿ ಆಟಗಾರ ಪರೋಕ್ಷವಾಗಿ ಲೇವಡಿ ಮಾಡಿದ್ದಾರೆ.
“ಇಂದು ವಿರಾಟ್ ಕೊಹ್ಲಿ ಕ್ರೀಸ್ಗೆ ಗಟ್ಟಿಯಾಗಿ ಅಂಟಿ ನಿಂತಿರುವಂತೆ ಕಂಡರು. ಆದರೆ ಆಫ್ ಸ್ಟಂಪ್‌ನ ವೈಡ್‌ನಲ್ಲಿ ಪಿಚ್ ಮಾಡಿದ ಬಾಲ್ಗೆ ಆಡುವ ಪ್ರಲೋಭನೆಗೆ ಬಿದ್ದದ್ದು ಆಶ್ಚರ್ಯವೇ. ನಮ್ಮ ಬೌಲರ್ಗಳು ವಿರಾಟ್ರ ಬ್ಯಾಟಿಂಗ್ ವೀಕ್ನೆಸ್ ಪ್ರದೇಶಗಳನ್ನೇ ಅಟ್ಯಾಕ್ ಮಾಡಿದರು. ಅದೇ ಪ್ರದೇಶವನ್ನು ಗುರಿಯಾಗಿಸಿ, ಬೌಲಿಂಗ್ ಮಾಡುತ್ತಿದ್ದರು. ಕಡೆಗೂ ಸ್ಲಿಪ್ಗೆ ಹಾಕಿದ ಬಾಲ್ಗೆ ಕೊಹ್ಲಿ ಆಡಲು ಯತ್ನಿಸಿ, ತಮ್ಮ ವಿಕೆಟ್ ಕಳೆದುಕೊಂಡರು" ಎಂದು ಜಸ್ಟೀನ್ ಲ್ಯಾಂಗರ್ ಹೇಳಿದರು.
"ಕೊಹ್ಲಿಯ ವಿಕೆಟ್ ಕಬಳಿಸಿದ ಗೆಲುವು ಆಸ್ಟ್ರೇಲಿಯನ್ ಬೌಲರ್‌ಗಳಿಗೆ ಸಲ್ಲುತ್ತದೆ. ಆಸ್ಟ್ರೇಲಿಯಾದಲ್ಲಿ ಸ್ಲಿಪ್‌ಗಳಿಗೆ ಆಡಿದರೆ ನೀವು ಆಹಾರ ಆಗುತ್ತೀರಾ ಎಂಬ ಅರಿವು ನಿಮಗಿರಬೇಕು. ನಮ್ಮ ವೇಗಿಗಳ ಸ್ಲಿಪ್ ಸೈಡ್ ಬೌಲಿಂಗ್ಗೆ ನೀವು ಎಚ್ಚರಿಕೆಯಿಂದ ಆಡದಿದ್ದರೆ ಖಂಡಿತ ಸಿಕ್ಕಿಬೀಳುತ್ತೀರಿ" ಎಂದು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).