

ಮೆಲ್ಬೋರ್ನ್: ಆಸ್ಟ್ರೆಲಿಯಾ ತಂಡ ಅಹಮದಾಬಾದ್ನಲ್ಲಿ ಆತಿಥೇಯ ಭಾರತ ತಂಡವನ್ನು ಮಣಿಸಿ 6ನೇ ಬಾರಿ ಏಕದಿನ ವಿಶ್ವಕಪ್ ಗೆಲುವು ಸಾಧಿಸಿ ಒಂದು ವಾರ ಕಳೆದಿದ್ದರೂ, ತವರೂರಿನಲ್ಲಿ ಇನ್ನೂ ವಿಜಯೋತ್ಸವವನ್ನೇ ಆಚರಿಸಿಲ್ಲ! ವಿಜೇತ ತಂಡದ ಭಾಗವಾಗಿದ್ದ ಕೆಲ ಆಟಗಾರರು ಇನ್ನೂ ಭಾರತದಲ್ಲೇ ಟಿ20 ಸರಣಿ ಆಡುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ವಿಶ್ವಕಪ್ ಗೆಲುವಿನ ಬಳಿಕ ನಾಯಕ ಪ್ಯಾಟ್ ಕಮ್ಮಿನ್ಸ್ ಕಳೆದ ವಾರ ಸದ್ದಿಲ್ಲದೆ ಸರಳವಾಗಿಯೇ ತವರಿಗೆ ಮರಳಿದ್ದರು. ಆದರೆ ತಂಡದ ಪ್ರಮುಖ ಭಾಗವಾಗಿದ್ದ ಮ್ಯಾಕ್ಸ್ವೆಲ್, ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್, ಆಡಂ ಜಂಪಾ, ಜೋಶ್ ಇಂಗ್ಲಿಸ್ ಇನ್ನೂ ಭಾರತದಲ್ಲಿದ್ದಾರೆ.
ಡಿ. 3ರಂದು ಭಾರತ ಪ್ರವಾಸ ಮುಗಿದರೂ, ಡಿ. 14ರಿಂದ ತವರಿನಲ್ಲಿ ಪಾಕ್ ವಿರುದ್ಧ ಟೆಸ್ಟ್ ಸರಣಿ ಶುರುವಾಗಲಿದೆ. ಹೀಗಾಗಿ ಈ ಕಿರು ಅವಧಿಯಲ್ಲಿ ಸಾರ್ವಜನಿಕ ಸಂಭ್ರಮಾಚರಣೆ ನಡೆಸುವುದು ಕ್ರಿಕೆಟ್ ಆಸ್ಟ್ರೆಲಿಯಾ ಯೋಜನೆಯಾಗಿದೆ. ಆದರೆ ಡಿ.7ರಿಂದ ಬಿಗ್ ಬಾಷ್ ಲೀಗ್ ನಡೆಯಲಿದ್ದು, ವಿಶ್ವಕಪ್ ಸಂಭ್ರಮಾಚರಣೆಗೆ ಕೆಲ ಆಟಗಾರರು ಗೈರಾಗುವುದನ್ನು ತಪ್ಪಿಸುವುದು ಅಸಾಧ್ಯವೆನಿಸಿದೆ.