

ಮ್ಯಾಂಚೆಸ್ಟರ್: ಪ್ರತಿಷ್ಠಿತ ಆಶಸ್ ಸರಣಿಯ 4ನೇ ಟೆಸ್ಟ್ ಪಂದ್ಯ ಗೆದ್ದು ಸರಣಿ ಸಮಬಲ ಸಾಧಿಸುವ ಆತಿಥೇಯ ಇಂಗ್ಲೆಂಡ್ ತಂಡದ ಆಸೆಗೆ ಮಳೆ ತಣ್ಣೀರೆರಚಿದೆ. ಭಾರಿ ಮಳೆಯಿಂದಾಗಿ ಪಂದ್ಯದ 5ನೇ ಹಾಗೂ ಅಂತಿಮ ದಿನದಾಟದಲ್ಲಿ ಒಂದೂ ಓವರ್ ಆಟ ನಡೆಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಆಸ್ಟ್ರೆಲಿಯಾ ತಂಡ ಸೋಲು ತಪ್ಪಿಸಿಕೊಂಡು ಡ್ರಾ ಸಾಧಿಸುವಲ್ಲಿ ಯಶಸ್ವಿಯಾಯಿತು. ಜತೆಗೆ ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ ಆಸೀಸ್ 2-1ರಿಂದ ಸರಣಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಳ್ಳುವ ಮೂಲಕ ಆಶಸ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿತು.
ಜುಲೈ 27ರಿಂದ ಓವಲ್ನಲ್ಲಿ ನಡೆಯಲಿರುವ 5ನೇ ಹಾಗೂ ಅಂತಿಮ ಟೆಸ್ಟ್ನಲ್ಲಿ ಗೆದ್ದರೂ, ಇಂಗ್ಲೆಂಡ್ ಸರಣಿ ಸಮಬಲ ಸಾಧಿಸಲಷ್ಟೇ ಸಾಧ್ಯವಾಗಲಿದೆ. ಇದರಿಂದ ಕಳೆದ ಆವೃತ್ತಿಯ ವಿಜೇತ ಆಸೀಸ್ ತಂಡ ಟ್ರೋಫಿ ಉಳಿಸಿಕೊಂಡಿತು. ಪಂದ್ಯದ 4ನೇ ದಿನ ಚಹಾ ವಿರಾಮದ ವೇಳೆ ಆಸೀಸ್ 2ನೇ ಇನಿಂಗ್ಸ್ನಲ್ಲಿ 5 ವಿಕೆಟ್ಗೆ 214 ರನ್ ಗಳಿಸಿ ಇನ್ನೂ 61 ರನ್ ಹಿನ್ನಡೆಯಲ್ಲಿತ್ತು. ನಂತರದಲ್ಲಿ ಒಂದೂ ಎಸೆತ ಆಟ ನಡೆಯಲಿಲ್ಲ. ಇದರಿಂದ 2017ರ ಬಳಿಕ ಆಶಸ್ ಟ್ರೋಫಿ ಮರಳಿ ಪಡೆಯುವ ಆಂಗ್ಲರ ಕನಸು ಭಗ್ನಗೊಂಡಿತು.
ಆಸ್ಟ್ರೆಲಿಯಾ: 317 ಹಾಗೂ 71 ಓವರ್ಗಳಲ್ಲಿ 5 ವಿಕೆಟ್ಗೆ 214 (ಮಾರ್ಷ್ 31*, ಗ್ರೀನ್ 3*, ವುಡ್ 27ಕ್ಕೆ 3). ಇಂಗ್ಲೆಂಡ್: 592.