ಖಾಲಿ ಸ್ಟೇಡಿಯಂನಲ್ಲಿ ಟೆಸ್ಟ್!..ನಷ್ಟ ಸರಿದೂಗಿಸಲು ಆಸಿಸ್​ ಚಿಂತನೆ

Stadium 21 Epril 20
Published on

ಸಿಡ್ನಿ: ವರ್ಷಾಂತ್ಯದಲ್ಲಿ ನಿಗದಿಯಾಗಿರುವ ಪ್ರವಾಸಿ ಭಾರತ ವಿರುದ್ಧದ ಟೆಸ್ಟ್ ಸರಣಿಯ ಪಂದ್ಯಗಳನ್ನು 4ರಿಂದ 5ಕ್ಕೇರಿಸಿಕೊಳ್ಳಲು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಚಿಂತನೆ ನಡೆಸಿದೆ. ಖಾಲಿ ಸ್ಟೇಡಿಯಂನಲ್ಲಾದರೂ ಈ ಪಂದ್ಯಗಳನ್ನು ಆಯೋಜಿಸಲು ಮುಂದಾಗಿರುವ ಆಸ್ಟ್ರೇಲಿಯಾ, ಕೋವಿಡ್-19ರಿಂದ ಆಗಿರುವ ಆರ್ಥಿಕ ನಷ್ಟವನ್ನು ಈ ಮೂಲಕವಾದರೂ ಸರಿದೂಗಿಸಲು ಬಯಸಿದೆ.

ಈಗಾಗಲೆ ಹಣಕಾಸು ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಆಟಗಾರರ ವೇತನ ಕಡಿತದ ಚಿಂತನೆಯನ್ನೂ ನಡೆಸಿದೆ. ಅಲ್ಲದೆ ತನ್ನ ಸಿಬ್ಬಂದಿ ವರ್ಗಕ್ಕೆ ಜುಲೈವರೆಗೆ ಶೇ. 80ರಷ್ಟು ವೇತನ ಕಡಿತಕ್ಕೂ ಮುಂದಾಗಿದೆ. ಭಾರತ ತಂಡದ ಆಸೀಸ್ ಪ್ರವಾಸ ಅಕ್ಟೋಬರ್​ನಲ್ಲಿ ಟಿ20 ತ್ರಿಕೋನ ಸರಣಿಯೊಂದಿಗೆ ಆರಂಭಗೊಳ್ಳಬೇಕಾಗಿದ್ದು, ಬಳಿಕ ನವೆಂಬರ್​ವರೆಗೆ ಟಿ20 ವಿಶ್ವಕಪ್​ನಲ್ಲಿ ಆಡಬೇಕಿದೆ. ನಂತರದಲ್ಲಿ ಡಿಸೆಂಬರ್-ಜನವರಿಯಲ್ಲಿ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ.

‘ಅಂತಾರಾಷ್ಟ್ರೀಯ ವೇಳಾಪಟ್ಟಿಗೆ ಕರೊನಾ ಭೀತಿಯಿಂದಾಗಿ ಹೊಡೆತ ಬಿದ್ದಿರುವುದರಿಂದ ನಾವು ನೂರಾರು ದಶಲಕ್ಷ ಡಾಲರ್ ನಷ್ಟ ಅನುಭವಿಸುತ್ತಿದ್ದೇವೆ. ಹೀಗಾಗಿ ನಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಎಲ್ಲವನ್ನು ಪ್ರಯತ್ನ ಪಡಬೇಕಿದೆ. ಭಾರತ ವಿರುದ್ಧದ ಸರಣಿಗೆ ಸಾಕಷ್ಟು ಸಮಯವಿದ್ದು, ವಿಭಿನ್ನ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತೇವೆ’ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ಕೆವಿನ್ ರಾಬರ್ಟ್ಸ್, ಆಸ್ಟ್ರೇಲಿಯಾದ ‘ಅಸೋಸಿಯೇಟೆಡ್ ಪ್ರೆಸ್’ಗೆ ಮಂಗಳವಾರ ತಿಳಿಸಿದ್ದಾರೆ. ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ನೀಡದೆಯೂ ಪಂದ್ಯಗಳನ್ನು ಆಯೋಜಿಸುವ ಆಯ್ಕೆಗಳ ಬಗ್ಗೆಯೂ ಪರಿಶೀಲನೆ ಯಲ್ಲಿದ್ದೇವೆ ಎಂದು ರಾಬರ್ಟ್ಸ್ ಹೇಳಿದ್ದಾರೆ.

ಪ್ರೇಕ್ಷಕರಿಲ್ಲದೆ ಟಿ20 ವಿಶ್ವಕಪ್: ಪ್ರೇಕ್ಷಕರಿಲ್ಲದೆ ಟಿ20 ವಿಶ್ವಕಪ್ ಆಯೋಜಿಸುವ ಬಗ್ಗೆಯೂ ಸಿಎ ಗಂಭೀರ ಚಿಂತನೆ ನಡೆಸಿದೆ. ‘ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳನ್ನು ಪ್ರೇಕ್ಷಕರಿಲ್ಲದೆ ನಡೆಸುವುದರಿಂದಾಗಿ ಹೆಚ್ಚಿನ ಆದಾಯ ನಿರೀಕ್ಷಿಸುವಂತಿಲ್ಲ. ಆದರೆ, ಇಂಥ ದೊಡ್ಡ ಟೂರ್ನಿಗಳಿಂದ ಐಸಿಸಿಗೆ ಪ್ರಸಾರ ಹಕ್ಕಿನಿಂದಲೇ ದೊಡ್ಡ ಮೊತ್ತದ ಆದಾಯ ಬರುತ್ತದೆ. ಇದನ್ನು ಕ್ರಿಕೆಟ್ ಜಗತ್ತಿನ ಎಲ್ಲರೂ ಹಂಚಿಕೊಳ್ಳಬಹುದಾಗಿದೆ. ಹೀಗಾಗಿ ಟಿ20 ವಿಶ್ವಕಪ್ ಆಯೋಜನೆಗೂ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಲಿದ್ದೇವೆ’ ಎಂದು ರಾಬರ್ಟ್ಸ್ ಹೇಳಿದ್ದಾರೆ. ಕರೊನಾ ವೈರಸ್ ಭೀತಿಯಿಂದಾಗಿ ಕ್ರಿಕೆಟ್ ಚಟುವಟಿಕೆಯೇ ಸ್ತಬ್ಧಗೊಂಡಿದ್ದು, ಆಸ್ಟ್ರೇಲಿಯಾದ ಹಾಲಿ ಆರ್ಥಿಕ ವರ್ಷ ಜೂನ್ 30ರಂದು ಕೊನೆ ಗೊಂಡ ಬಳಿಕ ಆಗಸ್ಟ್ ವೇಳೆಗೆ ಸಿಎ ಸಂಪೂರ್ಣ ದಿವಾಳಿಯಾಗುವ ಭೀತಿಯೂ ಇದೆ. -ಏಜೆನ್ಸೀಸ್

ಕರೊನಾ ವೈರಸ್​ನಿಂದಾಗಿ ಕ್ರಿಕೆಟ್​ಗೆ ದೊಡ್ಡ ಹೊಡೆತವೇ ಬಿದ್ದಿದೆ. ಇದುವರೆಗೆ ನಾವು ಸುಮಾರು 150 ಕೋಟಿ ರೂ. ನಷ್ಟ ಅನುಭವಿಸಿದ್ದೇವೆ. ಮುಂಬರುವ ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಇನ್ನಷ್ಟು ನಷ್ಟವನ್ನು ಎದುರಿಸಬೇಕಾಗುತ್ತದೆ. | ಕೆವಿನ್ ರಾಬರ್ಟ್ಸ್, ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ

ಒಂದೇ ಕಡೆ ಎಲ್ಲ ಪಂದ್ಯ?

ಟೆಸ್ಟ್ ಸರಣಿಯ ಎಲ್ಲ 5 ಟೆಸ್ಟ್ ಪಂದ್ಯಗಳನ್ನು ಒಂದೇ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲದೆ ಆಯೋಜಿ ಸುವ ಬಗ್ಗೆಯೂ ಕ್ರಿಕೆಟ್ ಆಸ್ಟ್ರೇಲಿಯಾ ಗಂಭೀರ ಚಿಂತನೆ ನಡೆಸಿದೆ. ‘ಒಂದೇ ಕಡೆ ಎಲ್ಲ ಪಂದ್ಯ ಆಯೋಜಿಸುವುದು ಸರಣಿಯನ್ನು ನಡೆಸುವುದಕ್ಕೆ ಇರುವ ಕೊನೆಯ ಆಯ್ಕೆಯಾಗಿರಬಹುದು. ಬಹುಶಃ ಅಡಿಲೇಡ್ ಅಥವಾ ಎಲ್ಲಿ ಬೇಕಿದ್ದರೂ ಇದನ್ನು ಆಯೋಜಿಸಬಹುದು. ಭಿನ್ನ ಸ್ಥಳಗಳಲ್ಲಿ ಆಡುವ ಸವಾಲನ್ನು ನಾವು ಆನಂದಿಸುತ್ತೇವೆ. ಆದರೆ ಸರಣಿ ಆಯೋಜಿಸಲು ಇರುವ ಒಂದೇ ಆಯ್ಕೆ ಇದಾಗಿದ್ದರೆ ಖಂಡಿತಾ ಒಪ್ಪಿಕೊಳ್ಳುವೆವು’ ಎಂದು ಆಸೀಸ್ ವೇಗಿ ಜೋಶ್ ಹ್ಯಾಸಲ್​ವುಡ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net