

ನೈಜೀರಿಯಾದ ಈ ಮಹಿಳೆಗೆ 68 ವರ್ಷ. ಅವರ ಪತಿಗೆ 70 ವಯಸ್ಸು. ಈ ಜೋಡಿಯೀಗ ಅದ್ಭುತ ಸಂತೋಷದಲ್ಲಿದ್ದಾರೆ.
ಮದುವೆಯಾಗಿ 43 ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಅದಕ್ಕಾಗಿ ಎಷ್ಟೋ ಔಷಧ ಮಾಡಿ, ಚಿಕಿತ್ಸೆ ಪಡೆದರೂ ಆಸೆ ಮಾತ್ರ ನೆರವೇರಲಿಲ್ಲ. ಆದರೆ ಈಗ ಈ ದಂಪತಿ ಅವಳಿ ಮಕ್ಕಳಿಗೆ ಅಪ್ಪ-ಅಮ್ಮ. ಇದೇ ಸಂತೋಷದ ಆಚರಣೆಯಲ್ಲಿ ವೃದ್ಧ ದಂಪತಿ ಮುಳುಗಿದ್ದಾರೆ.
68 ವರ್ಷದ ಮಾರ್ಗರೆಟ್ ಅಡೆನುಗಾ ಅವರು ಏಪ್ರಿಲ್ 14ರಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅವರಲ್ಲಿ ಒಂದು ಗಂಡು ಮಗು, ಮತ್ತೊಂದು ಹೆಣ್ಣು ಮಗು. ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿದೆ. 43 ವರ್ಷಗಳಿಂದ ಮಗುವಿಗಾಗಿ ಪರಿತಪಿಸಿ ಇದೀಗ ಇಬ್ಬರು ಮಕ್ಕಳು ಮಡಿಲು ತುಂಬಿದ್ದು ತುಂಬ ಸಂತೋಷವಾಗುತ್ತಿದೆ ಎನ್ನುತ್ತಾರೆ ಈ ದಂಪತಿ.
ಮಾರ್ಗರೆಟ್ ಐವಿಎಫ್ ಮೂಲಕ ಗರ್ಭ ಧರಿಸಿದ್ದರು. ಅದೂ ಏನು ಸುಲಭದ್ದಾಗಿರಲಿಲ್ಲ. ಮೂರು ಸುತ್ತಿನ ಚಿಕಿತ್ಸೆ ವಿಫಲವಾಗಿತ್ತು. ಆದರೂ ಮಗುವನ್ನು ಪಡೆಯುವ ಹಂಬಲದಲ್ಲಿ ಆ ವೃದ್ಧ ಜೀವ ಮತ್ತೊಮ್ಮೆ ಸಜ್ಜಾಗಿತ್ತು. ಅಂತೂ ಐವಿಎಫ್ ಫಲಿಸಿತು ಎಂದು ಆಕೆಯ ಪತಿ ನೋವಾ ತಿಳಿಸಿದ್ದಾರೆ.
ಮಾರ್ಗರೆಟ್ ಅವರು ಗರ್ಭ ಧರಿಸಿದರೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದರು. ಆದರೆ ಮಗುವನ್ನು ಪಡೆಯಬೇಕು ಎಂಬುದು ನಮ್ಮ ವೈಯಕ್ತಿಕ ನಿರ್ಧಾರವಾಗಿತ್ತು. ಎಲ್ಲ ವೈದ್ಯಕೀಯ ಸವಾಲುಗಳನ್ನು ಮೆಟ್ಟಿ ನಿಂತು ಗರ್ಭ ಧರಿಸಿದ ಮಾರ್ಗರೆಟ್ ಅವರ ಮೇಲೆ ವೈದ್ಯರು ತೀವ್ರ ನಿಗಾ ಇಟ್ಟಿದ್ದರು.
ಇದೊಂದು ಪವಾಡದ ಹೆರಿಗೆ ಎಂದು ಮಹಿಳೆಗೆ ಚಿಕಿತ್ಸೆ ನೀಡಿ, ಹೆರಿಗೆ ಮಾಡಿಸಿದ ವೈದ್ಯರೂ ಹೇಳಿದ್ದಾರೆ. ಅದೇನೇ ಇರಲಿ ಸದ್ಯಕ್ಕಂತೂ ವೃದ್ಧ ದಂಪತಿ ಇಬ್ಬರು ಮಕ್ಕಳನ್ನು ಪಡೆದು ಫುಲ್ ಖುಷಿಯಾಗಿದ್ದಾರೆ. (ಏಜೆನ್ಸೀಸ್)