ಶೂಟ್‌ಆಫ್‌ನಲ್ಲಿ ದಕ್ಷಿಣ ಕೊರಿಯಾಗೆ ಶಾಕ್: ಸಾಹಿಲ್–ಚಿಕಿತಾ ಜೋಡಿ ಮೋಡಿ; ಭಾರತಕ್ಕೆ 8ನೇ ಬಂಗಾರ, ಒಲಿಂಪಿಕ್ಸ್​ಗೆ ಎಂಟ್ರಿ! Asian Games

ಏಷ್ಯನ್ ಗೇಮ್ಸ್ 2026ರಲ್ಲಿ ಭಾರತಕ್ಕೆ 8ನೇ ಚಿನ್ನದ ಪದಕ. ಶೂಟ್‌ಆಫ್‌ನಲ್ಲಿ ದಕ್ಷಿಣ ಕೊರಿಯಾವನ್ನು ಮಣಿಸಿದ ಸಾಹಿಲ್ ಜಾಧವ್ ಮತ್ತು ಚಿಕಿತಾ ತನಿಪಾರ್ಥಿ ಜೋಡಿ. 2028ರ ಒಲಿಂಪಿಕ್ಸ್‌ಗೆ ಭಾರತ ಅರ್ಹತೆ.
The duo of Sahil Jadhav and Chikita Taniparthi defeated South Korea in the shoot-off.
ಶೂಟ್‌ಆಫ್‌ನಲ್ಲಿ ದಕ್ಷಿಣ ಕೊರಿಯಾವನ್ನು ಮಣಿಸಿದ ಸಾಹಿಲ್ ಜಾಧವ್ ಮತ್ತು ಚಿಕಿತಾ ತನಿಪಾರ್ಥಿ ಜೋಡಿ
Published on: 

ಜಪಾನ್​: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026 ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಪದಕಗಳ ಸುರಿಮಳೆಗೈಯ್ಯುತ್ತಿದ್ದಾರೆ. ಬುಧವಾರದ (ಸೆ. 30) ದಿನವು ಭಾರತೀಯ ಬಿಲ್ಲುಗಾರರಿಗೆ ಸ್ಮರಣೀಯವಾಗಿ ಬದಲಾಗಿದೆ.

ಮಹಿಳಾ ಬಿಲ್ಲುಗಾರಿಕೆ ತಂಡದ ಯಶಸ್ಸಿನ ಬೆನ್ನಲ್ಲೇ, ಕಾಂಪೌಂಡ್ ಮಿಶ್ರ ತಂಡದ ವಿಭಾಗದಲ್ಲಿ ಸಾಹಿಲ್ ಜಾಧವ್ ಮತ್ತು ಚಿಕಿತಾ ತನಿಪಾರ್ಥಿ ಜೋಡಿಯು ರೋಚಕ ಶೂಟ್-ಆಫ್‌ನಲ್ಲಿ ದಕ್ಷಿಣ ಕೊರಿಯಾವನ್ನು ಸೋಲಿಸಿ ದೇಶಕ್ಕೆ ಎಂಟನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ.

ಅಲ್ಲದೆ, ಈ ಐತಿಹಾಸಿಕ ಗೆಲುವಿನೊಂದಿಗೆ ಭಾರತವು ಮುಂಬರುವ 2028ರ ಒಲಿಂಪಿಕ್ ಕ್ರೀಡಾಕೂಟದ ಕಾಂಪೌಂಡ್ ಮಿಶ್ರ ತಂಡದ ಸ್ಪರ್ಧೆಯಲ್ಲಿ ತನ್ನ ಅಧಿಕೃತ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ರೋಚಕವಾಗಿದ್ದ ಫೈನಲ್ ಹಣಾಹಣಿ!

ದಕ್ಷಿಣ ಕೊರಿಯಾ ವಿರುದ್ಧದ ಫೈನಲ್​ ಪಂದ್ಯ ಅತ್ಯಂತ ರೋಚಕವಾಗಿ ಮೂಡಿಬಂದಿತ್ತು. ಆರಂಭದಿಂದಲೂ ಉತ್ತಮ ಆಟವಾಡಿದ ಭಾರತೀಯ ಜೋಡಿ ಮೊದಲ ಸೆಟ್‌ನಲ್ಲಿ 40-39ರ ಮುನ್ನಡೆ ಸಾಧಿಸಿತು. ಎರಡನೇ ಹಾಗೂ ಮೂರನೇ ಸೆಟ್‌ನಲ್ಲೂ ತಮ್ಮ ಪ್ರಾಬಲ್ಯ ಮೆರೆದ ಸಾಹಿಲ್ ಮತ್ತು ಚಿಕಿತಾ ಮುನ್ನಡೆಯನ್ನು ಕಾಯ್ದುಕೊಂಡಿದ್ದರು.

ಆದರೆ, ನಾಲ್ಕನೇ ಹಾಗೂ ನಿರ್ಣಾಯಕ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಆಟಗಾರರು ತಿರುಗೇಟು ನೀಡಿ 40 ಅಂಕ ಕಲೆಹಾಕಿದರು. ಭಾರತ 39 ಅಂಕಗಳಿಸಲಷ್ಟೇ ಸಾಧ್ಯವಾಯಿತು. ಇದರಿಂದ ಪಂದ್ಯವು 157-157 ಅಂಕಗಳಿಗೆ ಸಮಬಲಗೊಂಡ ಹಿನ್ನಲೆ ಶೂಟ್-ಆಫ್ ಆರಂಭವಾಯಿತು.

ಶೂಟ್-ಆಫ್‌ನಲ್ಲಿ ಭಾರತ ಜಯಭೇರಿ!

ಶೂಟ್-ಆಫ್‌ನ ರೋಚಕ ಕ್ಷಣಗಳಲ್ಲಿ ಭಾರತದ ಚಿಕಿತಾ 10 ಅಂಕಗಳೊಂದಿಗೆ ಶುಭಾರಂಭ ಮಾಡಿದರು. ಕೊರಿಯಾದ ಪಾರ್ಕ್ ಕೂಡ 10 ಅಂಕ ಗಳಿಸಿದರು. ಆದರೆ ಚಿಕಿತಾಳ ಬಾಣ ಕೇಂದ್ರಕ್ಕೆ ಅತ್ಯಂತ ಹತ್ತಿರವಿತ್ತು. ನಂತರ ಸಾಹಿಲ್ ಕೂಡ 10 ಅಂಕಗಳಿಸಿದರು. ಕೊನೆಯಲ್ಲಿ ಕೊರಿಯಾದ ಚೋಯ್ ಚಿನ್ನ ಗೆಲ್ಲಲು 9 ಅಂಕಗಳಿಸಬೇಕಿತ್ತು; ಆದರೆ ಅವರು 9 ಅಂಕ ಗಳಿಸಿದರೂ, ಒಟ್ಟಾರೆ ನಿಖರತೆಯ ಅಳತೆಯಲ್ಲಿ ಭಾರತದ ಜೋಡಿ ಮೇಲುಗೈ ಸಾಧಿಸಿ ಚಿನ್ನದ ಪದಕವನ್ನು ಧರಿಸಿದರು.

Also Read
ಚೀನಾ ವಿರುದ್ಧ ಭರ್ಜರಿ ಗೆಲುವು: ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ 7ನೇ ಚಿನ್ನ! ಬಿಲ್ಲುಗಾರಿಕೆಯಲ್ಲಿ ವನಿತೆಯರ ಐತಿಹಾಸಿಕ ಸಾಧನೆ! Asian Games
The duo of Sahil Jadhav and Chikita Taniparthi defeated South Korea in the shoot-off.

ಒಂದೇ ದಿನ ಎರಡು ಚಿನ್ನ; ನೂತನ ದಾಖಲೆ!

ಒಂದೇ ದಿನ ಬಿಲ್ಲುಗಾರಿಕೆಯಲ್ಲಿ ಭಾರತಕ್ಕೆ ಬಂದ ಎರಡನೇ ಚಿನ್ನದ ಪದಕ ಇದಾಗಿದೆ. ಇದಕ್ಕೂ ಮುನ್ನ ನಡೆದ ಮಹಿಳೆಯರ ಕಾಂಪೌಂಡ್ ಬಿಲ್ಲುಗಾರಿಕೆ ಫೈನಲ್‌ನಲ್ಲಿ ಪ್ರೀತಿಕಾ ಪ್ರದೀಪ್, ಜ್ಯೋತಿ ಸುರೇಖಾ ವೆನ್ನಮ್ ಮತ್ತು ಚಿಕಿತಾ ತನಿಪಾರ್ಥಿ ಅವರನ್ನೊಳಗೊಂಡ ವನಿತೆಯರ ತಂಡವು ಚೀನಾವನ್ನು 238-234 ಅಂಕಗಳಿಂದ ಮಣಿಸಿ ಚಿನ್ನ ಗೆದ್ದುಕೊಂಡಿತ್ತು. ಅಷ್ಟೇ ಅಲ್ಲದೆ, 2014ರಲ್ಲಿ ದಕ್ಷಿಣ ಕೊರಿಯಾ ನಿರ್ಮಿಸಿದ್ದ 238 ಅಂಕಗಳ ಸಾರ್ವಕಾಲಿಕ ವಿಶ್ವ ದಾಖಲೆಯನ್ನು ಭಾರತೀಯ ಮಹಿಳಾ ತಂಡ ಸರಿಗಟ್ಟಿ ನೂತನ ದಾಖಲೆಯನ್ನು ನಿರ್ಮಿಸಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net