ಚೀನಾ ವಿರುದ್ಧ ಭರ್ಜರಿ ಗೆಲುವು: ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ 7ನೇ ಚಿನ್ನ! ಬಿಲ್ಲುಗಾರಿಕೆಯಲ್ಲಿ ವನಿತೆಯರ ಐತಿಹಾಸಿಕ ಸಾಧನೆ! Asian Games

2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ 7ನೇ ಚಿನ್ನದ ಪದಕ. ಬಿಲ್ಲುಗಾರಿಕೆಯಲ್ಲಿ ಚೀನಾವನ್ನು ಮಣಿಸಿ ಇತಿಹಾಸ ನಿರ್ಮಿಸಿದ ಜ್ಯೋತಿ ಸುರೇಖಾ ನೇತೃತ್ವದ ಮಹಿಳಾ ತಂಡ.
Indian women compound archery team Jyothi Surekha Vennam Prithika Pradeep Chikitha Thaniparthí win gold medal at Aichi Nagoya Asian Games 2026
2026 ರ ಐಚಿ ನಗೋಯಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಮಹಿಳಾ ಕಾಂಪೌಂಡ್ ಆರ್ಚರಿ ತಂಡ ಜ್ಯೋತಿ ಸುರೇಖಾ ವೆನ್ನಮ್ ಪ್ರಿತಿಕಾ ಪ್ರದೀಪ್ ಚಿಕಿತಾ ಥನಿಪರ್ತಿ ಚಿನ್ನದ ಪದಕ ಗೆದ್ದಿದ್ದಾರೆ.
Published on: 

ಜಪಾನ್‌: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳ ಪದಕ ಬೇಟೆ ಮುಂದುವರೆದಿದೆ. ಬುಧವಾರ (ಸೆ.30) ನಡೆದ ಮಹಿಳೆಯರ ಕಾಂಪೌಂಡ್ ಬಿಲ್ಲುಗಾರಿಕೆ (Compound Archery) ತಂಡದ ಸ್ಪರ್ಧೆಯಲ್ಲಿ ಭಾರತದ ವನಿತೆಯರು ದೇಶಕ್ಕೆ ಹೆಮ್ಮೆಯ ಏಳನೇ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ.

ಕಳೆದ ಬಾರಿಯ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಗೆದ್ದಿದ್ದ ಚಾಂಪಿಯನ್ ಪಟ್ಟವನ್ನು ಹಾಗೆಯೇ ಉಳಿಸಿಕೊಳ್ಳುವಲ್ಲಿ ಜ್ಯೋತಿ ಸುರೇಖಾ ವೆನ್ನಮ್, ಪ್ರಿಥಿಕಾ ಪ್ರದೀಪ್ ಮತ್ತು ಚಿಕಿತಾ ಥಾನಿಪಾರ್ಥಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ ಸಂಪೂರ್ಣ ಯಶಸ್ವಿಯಾಗಿದೆ.

ಚೀನಾವನ್ನು ಮಣಿಸಿ ಚಿನ್ನಕ್ಕೆ ಮುತ್ತಿಕ್ಕಿದ ವನಿತೆಯರು!

ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ಭಾರತೀಯ ತಂಡವು ಬಲಿಷ್ಠ ಚೀನಾ ತಂಡದ ವಿರುದ್ಧ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿತು. ಅಂತಿಮವಾಗಿ 238-234 ಅಂಕಗಳ ಅಂತರದಿಂದ ಚೀನಾವನ್ನು ಸೋಲಿಸಿ ಭಾರತ ವಿಜಯ ಕಹಳೆಯನ್ನು ಮೊಳಗಿಸಿದೆ. ಇದರೊಂದಿಗೆ 2014 ರಲ್ಲಿ ದಕ್ಷಿಣ ಕೊರಿಯಾ ಸ್ಥಾಪಿಸಿದ್ದ ಸಾರ್ವಕಾಲಿಕ ವಿಶ್ವ ಮತ್ತು ಏಷ್ಯನ್ ದಾಖಲೆಯನ್ನು ಭಾರತ ಸರಿಗಟ್ಟಿ ನೂತನ ದಾಖಲೆ ನಿರ್ಮಿಸಿದೆ.

ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ರೋಚಕ ಜಯ!

ಚಿನ್ನದ ಪದಕದ ಹಾದಿ ಭಾರತೀಯ ವನಿತೆಯರಿಗೆ ಅಷ್ಟು ಸುಲಭವಾಗಿರಲಿಲ್ಲ. ಫೈನಲ್‌ಗೂ ಮುನ್ನ ನಡೆದ ಕಠಿಣ ಸೆಮಿಫೈನಲ್ ಪಂದ್ಯದಲ್ಲಿ ಭಾರತವು ಬಲಿಷ್ಠ ದಕ್ಷಿಣ ಕೊರಿಯಾವನ್ನು ಎದುರಿಸಬೇಕಾಯಿತು. ಪಂದ್ಯದ ದ್ವಿತೀಯಾರ್ಧದಲ್ಲಿ ಕೊರಿಯಾ ಆಟಗಾರ್ತಿಯರು ತೀವ್ರ ಒತ್ತಡ ಹೇರಿ ಅಂಕಗಳನ್ನು 175-175ಕ್ಕೆ ಸಮಬಲಗೊಳಿಸಿದ್ದರು. ಆದರೆ, ಒತ್ತಡದ ಈ ನಿರ್ಣಾಯಕ ಕ್ಷಣದಲ್ಲಿ ಚಿಕಿತಾ ಮತ್ತು ಪ್ರಿಥಿಕಾ ಅತ್ಯಂತ ನಿಖರವಾಗಿ ತಲಾ ಎರಡು 10 ಅಂಕಗಳನ್ನು ಹಾಗೂ ಅನುಭವಿ ಆಟಗಾರ್ತಿ ಜ್ಯೋತಿ '9' ಅಂಕಗಳನ್ನು ಗಳಿಸಿ ಕೇವಲ ಒಂದು ಅಂಕದ ರೋಚಕ ಅಂತರದಿಂದ (234-233) ಕೊರಿಯಾವನ್ನು ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟಿದ್ದರು.

Also Read
ಥಾಣೆಯಲ್ಲಿ ಶಿವಸೇನೆ ನಾಯಕನಿಗೆ ಗುಂಡೇಟು; ಆಸ್ಪತ್ರೆ ತಲುಪುವಷ್ಟರಲ್ಲಿ ಸಾವು, ರಾಜಕೀಯ ವಲಯದಲ್ಲಿ ಭಾರಿ ಸಂಚಲನ! Pradeep Purnekar
Indian women compound archery team Jyothi Surekha Vennam Prithika Pradeep Chikitha Thaniparthí win gold medal at Aichi Nagoya Asian Games 2026

ದಿಗ್ಗಜೆ ಜ್ಯೋತಿ ಸುರೇಖಾ ಹೆಮ್ಮೆಯ ದಾಖಲೆ!

2014 ರಲ್ಲಿ ಕಾಂಪೌಂಡ್ ಬಿಲ್ಲುಗಾರಿಕೆ ಮಹಿಳಾ ತಂಡದ ಸ್ಪರ್ಧೆ ಆರಂಭವಾದಾಗಿನಿಂದಲೂ ಭಾರತವು ಪ್ರತಿ ಏಷ್ಯನ್ ಕ್ರೀಡಾಕೂಟದಲ್ಲೂ ತಪ್ಪದೇ ಪದಕ ಗೆದ್ದುಕೊಂಡು ಬರುತ್ತಿದೆ. 2014 ರಲ್ಲಿ ಕಂಚು, 2018 ರಲ್ಲಿ ಬೆಳ್ಳಿ ಹಾಗೂ 2023 ಮತ್ತು 2026 ರಲ್ಲಿ ಸತತ ಬಂಗಾರದ ಪದಕವನ್ನು ಪಡೆದುಕೊಂಡಿದೆ. ವಿಶೇಷಷವಾಗಿ, 30 ವರ್ಷ ವಯಸ್ಸಿನ ಸ್ಟಾರ್ ಆಟಗಾರ್ತಿ ಜ್ಯೋತಿ ಸುರೇಖಾ ವೆನ್ನಮ್ ಈ ನಾಲ್ಕೂ ಪದಕ ವಿಜೇತ ತಂಡಗಳ ಪ್ರಮುಖ ಸದಸ್ಯೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.

ಈ ಐತಿಹಾಸಿಕ ಚಿನ್ನದ ಪದಕದ ಸಂಭ್ರಮದೊಂದಿಗೆ ಭಾರತವು ಒಟ್ಟಾರೆ ಪದಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಜಿಗಿದಿದೆ. ಮಂಗಳವಾರವಷ್ಟೇ ಮಹಿಳಾ 4x400 ಮೀಟರ್ ರಿಲೇ ತಂಡವು ದೇಶಕ್ಕೆ ಆರನೇ ಚಿನ್ನ ತಂದುಕೊಟ್ಟ ಬೆನ್ನಲ್ಲೇ, ಬುಧವಾರ ಬಿಲ್ಲುಗಾರಿಕೆಯ ವನಿತೆಯರು ಮತ್ತೊಂದು ಚಿನ್ನದ ಪದಕ ಗೆದ್ದು ಭಾರತದ ಕ್ರೀಡಾಭಿಮಾನಿಗಳಿಗೆ ಡಬಲ್ ಧಮಾಕಾ ನೀಡಿದ್ದಾರೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net